ಪುರಸಭೆ ಅಕ್ರಮ ಖಂಡಿಸಿ ಪ್ರತಿಭಟನೆ
ಹೊಳೆನರಸೀಪುರ: ಪುರಸಭೆಯ ಭ್ರಷ್ಟಾಚಾರಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ. ಹರೀಶ್ ನೇತೃತ್ವದಲ್ಲಿ ಕೆಲ ಕಾರ್ಯಕರ್ತರು ಸೊಮವಾರ ಇಲ್ಲಿನ ಪುರಸಭಾ ಕಚೇರಿಯ ಎದುರು ಸಾಂಕೇತಿಕ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ. ಹರೀಶ್, ಇಲ್ಲಿನ ಪುರಸಭೆಯಲ್ಲಿ ಮನಬಂದಂತೆ ಅಜೆಂಡಾ ತಯಾರಿಸಿಕೊಂಡು ಭ್ರಷ್ಟಾಚಾರಕ್ಕೆ ಒತ್ತು ನೀಡುತ್ತಿರುವುದಲ್ಲದೇ, ಪುರಸಭಾಧ್ಯಕ್ಷೆ ಎಚ್.ಆರ್. ಕಲಾವತಿ ಅವರು ಕಮೀಷನ್ ನೀಡುವಂತೆ ಮೊಬೈಲ್ನಲ್ಲಿ ನಡೆಸಿರುವ ಸಂಭಾಷಣೆ ಬೆಳಕಿಗೆ ಬಂದಿದ್ದು, ಈ ಪ್ರಕರಣದ ಕುರಿತಂತೆ ಸೂಕ್ತ ತನಿಖೆ ನಡೆಸಿ ಅಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪುರಸಭೆ, ತಾಲೂಕು ಪಂಚಾಯ್ತಿ ಹಾಗೂ ಗೃಹ ನಿರ್ಮಾಣ ಮಂಡಳಿಯ ವತಿಯಿಂದ ಕೋಟೆ ಮುಖ್ಯ ರಸ್ತೆಯಲ್ಲಿ ನಿರ್ಮಿಸಲಾಗಿರುವ ಮಳಿಗೆಗಳನ್ನು ಕೆಲವರು ಆಕ್ರಮವಾಗಿ ಪ್ರವೇಶಿಸಿ ಬಳಕೆ ಮಾಡುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ, ಪಟ್ಟಣದಾದ್ಯಂತ ಸ್ವಚ್ಛತೆ ಹದಗೆಟ್ಟಿದ್ದು ಪುರಸಭೆಯ ಆಡಳಿತವು ಈ ವಿಚಾರದಲ್ಲಿ ಕಣ್ಣುಮುಚ್ಚಿ ಕುಳಿತಿದೆ ಎಂದು ಹರೀಶ್ ಆರೋಪಿಸಿದರು. ಅಲ್ಲದೇ ಪುರಸಭೆಯ ಶೇ.22.75ರ ಅನುದಾನವನ್ನು ನಿಯಮಾನುಸಾರ ಖರ್ಚು ಮಾಡದೆ, ತಾರತಮ್ಯ ನೀತಿ ಅನುಸರಿಸುತ್ತಿರುವ ಇಲ್ಲಿನ ಪುರಸಭೆಯ ಆಡಳಿತದ ಕ್ರಮವನ್ನು ಸೂಕ್ತವಾಗಿ ತನಿಖೆಗೆ ಒಳಪಡಿಸಬೇಕಿದೆ ಎಂದು ಅವರು ತಿಳಿಸಿದರು.
ಪುರಸಭೆಯ ಆಡಳಿತವು ಕಾಂಗ್ರೆಸ್ ಸದಸ್ಯರಿರುವ ವಾರ್ಡುಗಳಲ್ಲಿನ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಹರೀಶ್ ಅವರು, ಪಟ್ಟಣದಲ್ಲಿ ನಿರ್ಮಿಸಿರುವ ಆಶ್ರಯ ಮನೆಗಳು ಕೇವಲ ಉಳ್ಳವರ ಪಾಲಾಗಿದ್ದು, ಈ ಕುರಿತಂತೆ ಸೂಕ್ತ ತನಿಖೆ ನಡೆಬೇಕಿದೆ ಎಂದರು.
ಪುರಸಭೆಯ ನೀರು ಸರಬರಾಜು ಯೋಜನೆಯಲ್ಲಿ, ಚರಂಡಿ ಹಾಗೂ ಕಾಂಕ್ರೀಟ್ ರಸ್ತೆಗಳ ಕಾಮಗಾರಿಯಲ್ಲಿ ಹಾಗೂ ಪಟ್ಟಣದ ಅಭಿವೃದ್ಧಿಗಾಗಿ ಮಂಜೂರಾಗಿದ್ದ 5 ಕೋಟಿ ರು. ಗಳಲ್ಲಿಯೂ ವ್ಯವಸ್ಥಿತವಾಗಿ ಭ್ರಷ್ಟಾಚಾರ ನಡೆದಿದ್ದು ಈ ಕುರಿತಂತೆ ಸೂಕ್ತ ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿಗಳಿಗೆ, ಪೌರಾಡಳಿತ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

