ಹಾಸನ

ಬೀದಿ ವ್ಯಾಪಾರಿಗಳ ಸಮೀಕ್ಷೆಗೆ ಚಾಲನೆ

Published On :

ಹೊಳೆನರಸೀಪುರ: ಸರ್ಕಾರದ ಆದೇಶದಂತೆ ನಲ್ಮ್ ಯೋಜನೆಯಡಿ ಪುರಸಭೆ ವ್ಯಾಪ್ತಿಯ ಬೀದಿ ಬದಿಯ ವ್ಯಾಪಾರಿಗಳ ಸಮೀಕ್ಷೆಯನ್ನು ಇಲ್ಲಿನ ಪುರಸಭೆಯ ವತಿಯಿಂದ ಶುಕ್ರವಾರ ಕೈಗೊಳ್ಳಲಾಯಿತು.
ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಕಾರ್ಯಕ್ಕೆ ಪುರಸಭಾಧ್ಯಕ್ಷೆ ಎಚ್.ಆರ್. ಕಲಾವತಿ ಚಾಲನೆ ನೀಡಿದರು. ಸರ್ಕಾರದ ಆದೇಶದಂತೆ ಬೀದಿ ಬದಿಯ ವ್ಯಾಪಾರಿಗಳನ್ನು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವುದಾಗಿ ಪುರಸಭೆಯ ಮುಖ್ಯಾಧಿಕಾರಿ ಹರೀಶ್ ತಿಳಿಸಿದರು.
ಪುರಸಭೆ ಪರಿಸರ ಎಂಜಿನೀಯರ್ ಅರ್ಚನಾ ಆರಾಧ್ಯ, ಎಸ್‌ಜೆಎಸ್‌ಆರ್‌ವೈ ಯೋಜನೆಯ ಸಮುದಾಯ ಸಂಘಟಕ ರಮೇಶ್, ಸಿಎಒ ಪಂಕಜ, ಗೋಪಾಲಕೃಷ್ಣ, ಮಂಜೇಗೌಡ ಅವರಗಳನ್ನೊಳಗೊಂಡ ಐದು ತಂಡ ರಚಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಪಟ್ಟಿಯನ್ನು ಸರ್ಕಾರಕ್ಕೆ ನೀಡಿದ ನಂತರ ಪ್ರತಿ ವ್ಯಾಪಾರಿಗೂ ಪ್ರತ್ಯೇಕ ಯೂನಿಕ್ ಎಪಿಕ್ ಐಡೆಂಟಿಟಿ ಕಾರ್ಡ್ ನೀಡಲಾಗುವುದು. ನಂತರ ಗುರುತಿನ ಚೀಟಿ ಪಡೆದ ವ್ಯಾಪಾರಿಗಳಿಗೆ ಸಣ್ಣ ಉದ್ದಿಮೆಯಡಿ ಕಿರು ಸಾಲ ಯೋಜನೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ರಘುರಾಮ್, ಸದಸ್ಯರಾದ ಕೆ.ಆರ್. ಸುಬ್ರಹ್ಮಣ್ಯ, ರಾಘವೇಂದ್ರ, ಪುರಸಭೆ ಸಿಬ್ಬಂದಿ ಶಾಂತಲಾ, ಸೋಮಶೇಖರ್, ಮಂಜುಳ, ಆರೋಗ್ಯ ನಿರೀಕ್ಷಕ ವಸಂತಕುಮಾರ್ ಇದ್ದರು.
ಮಾಸಿಕ ವೇತನ; ಮುಂದುವರಿದ ಹೋರಾಟ
ಹಾಸನ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನಕ್ಕಾಗಿ ಒತ್ತಾಯಿಸಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸಲಾಗುವುದು ಎಂದು ಆಶಾ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ, ರಾಘವೇಂದ್ರ ತಿಳಿಸಿದ್ದಾರೆ.
ಆರೋಗ್ಯ ಸೇವೆ, ಸುರಕ್ಷ ಹೆರಿಗೆ, ಗರ್ಭನಿರೋಧಕ ವಸ್ತುಗಳ ಸುರಕ್ಷತಾ ಬಳಕೆ, ಗ್ರಾಮೀಣ ಪ್ರದೇಶದ ಹುಟ್ಟು ಸಾವಿನ ಬಗ್ಗೆ ಪರಿಣಾಮಕಾರಿ ತಿಳಿವಳಿಕೆ ನೀಡುವ ಈ ಕಾರ್ಯಕರ್ತೆಯರಿಗೆ ಚಟುವಟಿಕೆಗಳ ಆಧಾರದ ಮೇಲೆ ತಿಂಗಳಿಗೆ ಸಿಗುವುದು ಕೇವಲ 500-1000 ರು. ಮಾತ್ರವಾಗಿದೆ. ಆದ್ದರಿಂದ ಈ ಹಣವನ್ನು ಮಾಸಿಕ ವೇತನವಾಗಿ ನೀಡುವುದರ ಮೂಲಕ ಈ ಮಹಿಳೆಯರ ಬದುಕನ್ನು ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.ಜೂ. 24ರಿಂದ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಸಂಖ್ಯೆಯ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಗದಿರುವ ಕಾರಣಕ್ಕಾಗಿ ಹೋರಾಟ ಬೇಡಿಕೆ ಈಡೇರುವವರೆಗೂ ಮುಂದುವೆಸಲು ಸಂಘ ತೀರ್ಮಾನಿಸಿದ್ದು ಎಲ್ಲ ಆಶಾ ಕಾರ್ಯಕರ್ತೆಯರು ಭಾಗವಹಿಸಲು ಕೋರಿದ್ದಾರೆ.
ಹೊಸ ಸಮಾಜ ನಿರ್ಮಾಣ ಯುವ ಮೋರ್ಚಾ ಗುರಿ
ಆಲೂರು: ಯಾವುದೇ ಸರ್ಕಾರ ಮಾಡದ ಅಭಿವೃದ್ಧಿಯನ್ನು ಈ ಬಾರಿ ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆಲೂರು ಕಟ್ಟಾಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್. ನಾಗರಾಜ  ಹೇಳಿದರು.
 ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬಿಜೆಪಿ ಯುವ ಮೋರ್ಚಾ ಸಮಾಲೋಚನೆ ಹಾಗೂ ಕಾರ್ಯಕಾರಿಣಿ ಸಭೆ  ಅಧ್ಯಕ್ಷತೆ ವಹಿಸಿದ್ದರು.
ಹೊಸ ಸಮಾಜ: ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚನ್ನಕೇಶವ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರ  ದೇಶವನ್ನು  ಭಯೋತ್ಪಾದನೆ, ಆಕ್ರಮಣ, ಅತಿಕ್ರಮಣ ಹಗರಣ, ಬೆಲೆ ಏರಿಕೆ ಮುಂತಾದ ಸಮಸ್ಯೆಗಳು ಕಾಡುತ್ತಿವೆ. ಅವುಗಳನ್ನು  ಹೋಗಲಾಡಿಸಿ ಹೊಸ ಸಮಾಜ ಕಟ್ಟಬೇಕು. ಅದು ಬಿಜೆಪಿ  ಯುವ ಮೋರ್ಚಾದಿಂದ ಮಾತ್ರ ಸಾಧ್ಯ ಎಂದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಶ್ ಮಾತನಾಡಿ, ಜನ ಸೇವೆಯೇ ಜನಾರ್ದನ ಸೇವೆ ಎಂದು ಅರಿತು ಯುವ ಮೋರ್ಚ ಮುಂದಾಗಬೇಕು. ಗ್ರಾಮಾಂತರ ಪ್ರದೇಶದಲ್ಲಿ  ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ  ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದರು.
ಶಶಿಧರ್ ಆಯ್ಕೆ: ಆಲೂರು ಕಟ್ಟಾಯ ಮಂಡಲ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜಿ. ಶಶಿಧರ್‌ರನ್ನು  ಅವಿರೋಧವಾಗಿ ಆಯ್ಕೆ ಮಾಡಲಾಯಿತು.  ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಂದೀಪ್ ಬೆಳ್ಳೂರು ಮಾತನಾಡಿದರು.  ಜಿಲ್ಲಾ ಬಿಜೆಪಿ ಎಸ್ಸಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಾಲರಾಜು ಇದ್ದರು. ಮೋಹನ್‌ಕುಮಾರ್,  ಕೆ.ಜಿ. ಶಶಿಧರ್, ಲೋಕೇಶ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.