ಹಾಸನ

ಮನೋರೋಗಕ್ಕೆ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆ

Published On :

ಹಾಸನ: ಮನೋರೋಗಗಳನ್ನು ತಡೆಗಟ್ಟಲು ಹಾಗೂ ಮನೋದೈಹಿಕ ಸಮಸ್ಯೆಗಳನ್ನು ನಿವಾರಿಸಲು ಆಯುರ್ವೇದ ವೈದ್ಯಕೀಯ ವಿಜ್ಞಾನದಲ್ಲಿ ಅದ್ಭುತ ಚಿಕಿತ್ಸೆಗಳು ಲಭ್ಯವಿವೆ ಎಂದು ಮೈಸೂರಿನ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಖ್ಯಾತ ಆಯುರ್ವೇದ ಮನೋರೋಗ ಚಿಕಿತ್ಸಾ ತಜ್ಞ ಡಾ. ವಿ. ರಾಜೇಂದ್ರ ತಿಳಿಸಿದರು.
ನಗರದ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಮಾನಸಿಕ ಸ್ವಾಸ್ಥ್ಯ ಮತ್ತು  ಚಿಕಿತ್ಸಾ ವಿಭಾಗ ಹಮ್ಮಿಕೊಂಡಿರುವ ಮಾನಸಿಕ ರೋಗ ತಪಾಸಣೆ ಮತ್ತು ಚಿಕಿತ್ಸಾ ಸಪ್ತಾಹ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಮನಸ್ಸು ನಮ್ಮದಾಗಿರಲು ಅನೇಕ ಸಲಹೆಗಳು ಆಯುರ್ವೇದ ವಿಜ್ಞಾನದಲ್ಲಿ ಉಲ್ಲೇಖವಾಗಿವೆ. ಈ ನಿಟ್ಟಿನಲ್ಲಿ ಈ ತರಹದ ಶಿಬಿರ ಹಮ್ಮಿಕೊಂಡಿರುವುದು ಪ್ರಶಂಸಾರ್ಹ ಎಂದರು.
ಪ್ರತಿ ದೈಹಿಕ ಖಾಯಿಲೆಯಲ್ಲಿ ನಿಸ್ಸಂಶಯವಾಗಿ ಮನಸ್ಸಿನ ಪಾತ್ರ ಇದ್ದೇ ಇರುತ್ತದೆ. ಸ್ವಾಸ್ಥ್ಯ ಮನಸ್ಸು ಸದೃಢ ಆರೋಗ್ಯಕ್ಕೆ ಕಾರಣ ಎಂದು ಹೇಳಿದರು.
ಎಚ್ಚರ ವಹಿಸಲು ಕರೆ: ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹ ರಾವ್ ಮಾತನಾಡಿ, ಇತ್ತೀನ ದಿನಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು ಹೆಚ್ಚು ಜನ ಮಾನಸಿಕ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಮೇಲ್ನೋಟಕ್ಕೆ ಈ ತೊಂದರೆಗಳು ಗಂಭೀರ ಎನಿಸದಿದ್ದರೂ ಕಾಲಾನುಕ್ರಮವಾಗಿ ಗಂಭೀರ ಸಮಸ್ಯೆ ಉಂಟುಮಾಡಬಲ್ಲವು. ಆದ್ದರಿಂದ ಮಾನಸಿಕ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಅವರು ಆ ಸಮಸ್ಯೆಗಳಿಗೆ ಶರಣಾಗದಂತೆ ಎಚ್ಚರವಹಿಸಬೇಕಾಗಿದೆ ಎಂದರು.
ಸಮಾಜದ ಎಲ್ಲಾ ವಯೋವಾನದ ಜನ ಅತೀವ ಒತ್ತಡ ಎದುರಿಸುತ್ತಿದ್ದಾರೆ. ಇದರಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಆದ್ದರಿಂದ ನಿರಂತರವಾಗಿ ಮಾನಸಿಕ ಸ್ವಾಸ್ಥ್ಯ ಸದೃಢತೆಯ ಅಭಿಯಾನದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಸಲಹೆ- ಚಿಕಿತ್ಸೆ: ಮಾ. 24ರಿಂದ 29ರವರೆಗೆ ನಡೆಯುವ ಈ ವಿಶೇಷ ಮಾನಸಿಕ ಸ್ವಾಸ್ಥ್ಯ ತಪಾಸಣಾ ಶಿಬಿರದಲ್ಲಿ ನುರಿತ ಆಯುರ್ವೇದ ತಜ್ಞರಲ್ಲಿ ತಪಾಸಣೆ ಮಾಡಿಸಿಕೊಂಡು, ಭಯ, ಆತಂಕ, ಪರೀಕ್ಷಾಭಯ, ಖಿನ್ನತೆ, ನಿದ್ರಾಹೀನತೆ, ಉದ್ವೇಗ, ಮದ್ಯಪಾನ ವ್ಯಸನಗಳಿಂದ ಮುಕ್ತಿ ಹೊಂದಲು ಸಲಹೆ, ಚಿಕಿತ್ಸೆ ಪಡೆಯಬಹುದಾಗಿದೆ ಎಂದರು. ಸಹ ಪ್ರಾಧ್ಯಾಪಕ ಡಾ. ಸುಹಾಸ್ ಶೆಟ್ಟಿ ಸ್ವಾಗತಿಸಿದರೆ, ಸಹ ಪ್ರಾಧ್ಯಾಪಕಿ ಡಾ. ಸವಿತಾ ವಂದಿಸಿದರು. ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ. ಪ್ರಕಾಶ್ ಎಲಲ್ಹೆಗಡೆ ಹಾಗೂ ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕ ಡಾ. ಮುರಳೀಧರ್ ಪೂಜಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.