ಹಾಸನ

ಸೀಳುತುಟಿಗೆ ಸೂಕ್ತ ಚಿಕಿತ್ಸೆ

Published On :

ಹೊಳೆನರಸೀಪುರ: ಸೀಳು ತುಟಿ ಅಥವಾ ಸೀಳು ಅಂಗಳ ಪೀಡಿತರಾಗಿ ಹುಟ್ಟುವ ಮಕ್ಕಳ ಬಗ್ಗೆ ಕೀಳರಿಮೆಯ ನೋಟ ಬೇಡ, ಬದಲಿಗೆ ಇಂದಿನ ವೈಜ್ಞಾನಿಕ ಯುಗದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸೀಳು ತುಟಿಯೊಂದಿಗೆ ಹುಟ್ಟಿರುವ ಮಕ್ಕಳ ಮುಖದಲ್ಲೂ ನಗುವನ್ನು ತರಬಹುದಾಗಿದೆ ಎಂದು ಇಲ್ಲಿನ ಲಯನ್ಸ್ ಕ್ಲಬ್ನ ಕಾರ್ಯದರ್ಶಿಗಳು ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.
ಇಲ್ಲಿನ ಲಯನ್ಸ್ ಕ್ಲಬ್ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಹಾಗೂ ಚಿರಂತನ ಟ್ರಸ್ಟಿನ ವತಿಯಿಂದ ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು. ಅಂಗವೈಕಲ್ಯದಲ್ಲಿ ಹುಟ್ಟಿದ ಮಕ್ಕಳು ಭೂಮಿ ಹಾಗೂ ಸಮಾಜಕ್ಕೆ ಭಾರ ಎಂಬ ಧೋರಣೆಯನ್ನು ಮೊದಲು ಪೋಷಕರು ಮತ್ತು ಸಮಾಜ ಬಿಡಬೇಕಿದೆ ಎಂದು ಅವರು ಹೇಳಿದರು.
ಅತ್ಯವಶ್ಯಕ: ವೈದ್ಯರ ಸಲಹೆ ಹಾಗೂ ನಿರ್ವಹಣೆಯಿಲ್ಲದೇ, ಗರ್ಭಿಣಿ ಸ್ತ್ರೀಯರು ಯಾವುದೇ ಔಷಧಿಗಳನ್ನಾಗಲೀ, ಆಹಾರದಲ್ಲಿ ವ್ಯತ್ಯಾಸವನ್ನಾಗಲೀ ಸ್ವಯಂ ನಿರ್ಧಾರದಿಂದ ಮಾಡುವುದರಿಂದಾಗಿ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಕಾಡಬಹುದಾಗಿದೆ ಎಂದು ಮಾಹಿತಿ ನೀಡಿದ ಅವರು, ಮಹಿಳೆಯು ಗರ್ಭಿಣಿಯಾದ ಸಂದರ್ಭದಲ್ಲಿ ದುಶ್ಚಟಗಳಿಂದ ದೂರವಿರಬೇಕಾದ್ದು ಅತ್ಯವಶ್ಯಕ ಎಂದರು.
ಹಲವು ಕಾರಣ: ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಮಾತನಾಡಿ, 2005ರಿಂದ 2013ರವರೆಗೆ ಆಸ್ಪತ್ರೆ ವತಿಯಿಂದ 5250ಕ್ಕೂ ಹೆಚ್ಚು ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ರಕ್ತಸಂಬಂಧದಲ್ಲಿ ಮದುವೆಯಾದರೆ, ಮದುವೆಯಾದ ಗಂಡು ಮತ್ತು ಹೆಣ್ಣಿನ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದರೆ, ಪೌಷ್ಟಿಕಾಂಶದ ಕೊರತೆ, ಅನುವಂಶೀಯತೆಯ ಕಾರಣದಿಂದಲೂ ಪ್ರತೀ ಒಂದು ಸಾವಿರ ಮಕ್ಕಳಲ್ಲಿ ಒಂದು ಮಗು ಈ ರೀತಿಯ ನ್ಯೂನತೆಯಿಂದ ಜನಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಜೈನ್ ಆಸ್ಪತ್ರೆಯ ವೈದ್ಯರಾದ ಡಾ. ಅಶೀಶ್ ಮಾತನಾಡಿದರು.
ಅರ್ಹರು ಪಡೆದುಕೊಳ್ಳಬೇಕು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ನ ಹಿರಿಯ ಸದಸ್ಯ ಹಾಗೂ ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಡಿ. ರವೀಶ್ ಮಾತನಾಡಿ, ಲಯನ್ಸ್ ಕ್ಲಬ್ನ ವತಿಯಿಂದ ಸ್ವಾಸ್ಥ ಸಮಾಜದ ನಿರ್ಮಾಣಕ್ಕಾಗಿ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುತ್ತಿದ್ದು, ಈ ರೀತಿಯ ಶಿಬಿರದ ಲಾಭವನ್ನು ಅರ್ಹರು ಹೆಚ್ಚಾಗಿ ಪಡೆದುಕೊಳ್ಳುವಂತೆ ತಿಳಿಸಿದರು.
ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿರುವ ಭಗವಾನ್ ಮಹಾವೀರ್ ಜೈನ್ ಅಸ್ಪತ್ರೆಯ ಸೇವಾ ಕಾರ್ಯವನ್ನು ಅವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ನ ಖಜಾಂಚಿ ಖಜಾಂಚಿ ಎಂ.ಎನ್. ಜೈಪ್ರಕಾಶ್, ಸದಸ್ಯರಾದ ಪುರುಷೋತ್ತಮ್, ಶಿವಣ್ಣ, ಕೃಷ್ಣಕಾಂತ್, ಪ್ರವೀಣ್, ವಿರೂಪಾಕ್ಷ ಇತರರು ಇದ್ದರು. ಕಾರ್ಯಕ್ರಮದಲ್ಲಿ ಪಟ್ಟಣದ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.