ಹಾಸನ

ಔಟ್ರೀಚ್ ಸೇವೆ ಆರಂಭ

Published On :

ಮೈಸೂರು: ಆರ್ಥಿಕ ಸಂಕಷ್ಟದಿಂದ ಹೊರಬರುವ ಒಂದು ಭಾಗವಾಗಿ ದೂರ ಶಿಕ್ಷಣವನ್ನು ಮತ್ತೆ ಆರಂಭಿಸಲು ಮೈಸೂರು ವಿವಿ ಮುಂದಾಗಿದೆ. ಅದರ ಒಂದು ಭಾಗವಾಗಿ ಈ ಶೈಕ್ಷಣಿಕ ವರ್ಷದಿಂದಲೇ ಔಟ್ರೀಚ್ ಹಾಗೂ ಆನ್ಲೈನ್ ಕಾರ್ಯಕ್ರಮ ಆರಂಭವಾಗಲಿವೆ. ಕುಲಪತಿ ರಂಗಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮೈಸೂರು ವಿವಿ ಶಿಕ್ಷಣ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಆನ್ಲೈನ್ ಮತ್ತು ಔಟ್ರೀಚ್ ಕೋರ್ಸ್ಗಳು ವಿವಿಗೆ ಸೈಡ್ ಬಿಜಿನೆಸ್ ಇದ್ದಂತೆ. ಮೇನ್ ಬಿಜಿನೆಸ್ ಅಲ್ಲ. ಆದರೆ ಶುಲ್ಕ ಹೆಚ್ಚು ಬರುವುದರಿಂದ ವಿವಿಯ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಎಂದರು.


ಮೃತನ ಕಿಡ್ನಿ ಅಳವಡಿಕೆ ಯಶಸ್ವಿ

ಮೈಸೂರು: ನಗರದ ಜೆಎಸ್ಎಸ್ ಆಸ್ಪತ್ರೆ ವೈದ್ಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಬ್ಬರಿಗೆ ಮೃತ ವ್ಯಕ್ತಿಯ ಕಿಡ್ನಿ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂಜನಗೂಡು ನಿವಾಸಿ ಮಂಜುನಾಥ್(48) ಕಿಡ್ನಿ ವೈಫಲ್ಯದಿಂದ ಕಳೆದ ಐದು ವರ್ಷಗಳಿಂದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪತ್ನಿಯ ಕಿಡ್ನಿಯೂ ಹೊಂದಾಣಿಕೆ ಆಗಿರಲಿಲ್ಲ. ಈ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿ ತಲುಪಿದ್ದ 28 ವರ್ಷದ ಯುವಕನ ಪೋಷಕರ ಅನುಮತಿ ಪಡೆದು ಆತನ ಕಿಡ್ನಿಗಳನ್ನು ಬ್ರೈನ್ಡೆಡ್ ಅನ್ವಯ ತೆಗೆಯಲಾಗಿತ್ತು. ಕೂಡಲೆ ಜೆಎಸ್ಎಸ್  ತಜ್ಞ ವೈದ್ಯರಾದ ಡಾ.ಕೆ.ಎಂ. ಮಾದಪ್ಪ ಮತ್ತು ಡಾ. ಮಂಜುನಾಥ್ ಎಸ್. ಶೆಟ್ಟಿ ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಕಿಡ್ನಿ ಅಳವಡಿಸಿದ್ದಾರೆ.
ಏನದು ಬ್ರೈನ್ಡೆಡ್?: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳಿಗೆ ಬಲವಾದ ಗಾಯವಾಗಿ ಕೋಮಾಗೆ ಹೋದ ವ್ಯಕ್ತಿಯ ಇತರ ಅಂಗಾಗಗಳು ಚೆನ್ನಾಗಿ ಕೆಲಸ ಮಾಡುತ್ತಿರುತ್ತವೆ. ಆದರೆ ಕೋಮಾಕ್ಕೆ ಹೋದ ವ್ಯಕ್ತಿಯ ಮೆದುಳು ಮತ್ತೆ ಸಹಜ ಸ್ಥಿತಿಗೆ ಬಾರದಿದ್ದಾಗ, ಆತನ ಪೋಷಕರ ಅನುಮತಿ ಪಡೆದು, ಕಾನೂನಿನ ಅನ್ವಯ ಕೈಗೊಳ್ಳಬೇಕಾದ ಎಲ್ಲಾ ನಿಯಮವನ್ನು ಅನುಸರಿಸಿ ಕೋಮಾಕ್ಕೆ ಹೋದ ವ್ಯಕ್ತಿಯ ಎರಡೂ ಕಿಡ್ನಿ, ಕಣ್ಣು, ಹೃದಯ, ಮುಂತಾದ ಅಂಗಾಂಗಳನ್ನು ತೆಗೆಯಲಾಗುತ್ತದೆ.



ಗಾಯನ ಸ್ಪರ್ಧೆ
ಹಾಸನ: ಸೋಂಧೆ ಮಠಾಧೀಶದ ಶ್ರೀ ವಿಶ್ವವಲ್ಲಭತೀರ್ಥರಿಂದ ಸ್ಥಾಪಿಸಲ್ಪಟಿರುವ ಬೆಂಗಳೂರಿನ ಹಯವದನೋಪನಿಷತ್ ಪ್ರಸಾರಣಾ ಪ್ರತಿಷ್ಠಾನದ ವತಿಯಿಂದ  ವಾದಿರಾಜರಿಂದ ರಚಿತವಾದ ಕೀರ್ತನೆಗಳ ರಾಜ್ಯಮಟ್ಟದ ಗಾಯನ ಸ್ಪರ್ಧೆಯನ್ನು ಆಗಸ್ಟ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಭಜನ ತಂಡಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳ ಬಹುದು. ಕನಿಷ್ಟ 8ರಿಂದ 15 ಮಂದಿ ತಂಡದಲ್ಲಿರಬೇಕು. ಹೆಸರನ್ನು ನೊಂದಾಯಿಸಿಕೊಂಡ ತಂಡಕ್ಕೆ ಸಾಹಿತ್ಯದ ಜತೆಗೆ ರಾಗ ಸಂಯೋಜನೆ ಮಾಡಿ ಹಾಡಿರುವ ಭಜನೆ ಸಿಡಿಗಳನ್ನು  ನೀಡಲಾ ಗುವುದು. ಹೆಚ್ಚಿನ ಮಾಹಿತಿಗೆ ಶ್ರೀಪಾದ ಭಟ್ (9743280520) ಇವರನ್ನು ಸಂಪರ್ಕಿಸಬೇಕು.
'ಕಾಡಾ'ಗೆ ಮುತ್ತಿಗೆ
ಮೈಸೂರು: ಕಬಿನಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಕಾಡಾ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿದ್ದು, ಸಂಜೆಯ ನಂತರವು ತಮ್ಮ ಹೋರಾಟ ಮುಂದುವರೆಸಿದ್ದಾರೆ.
ಕಬಿನಿ ಜಲಾಶಯದಲ್ಲಿ ನೀರು ಇದೆ. ನದಿಗೆ ನೀರು ಬಿಡುತ್ತಿರುವ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ. ಕಳೆದ 2 ತಿಂಗಳಿಂದ ಕಾಲುವೆಗಳಿಗೆ ನೀರು ಬಿಡುವಂತೆ ಮನವಿ ಸಲ್ಲಿಸಿದ್ದೇವೆ. 2- 3 ಬಾರಿ ನೀರು ಬಿಡುವುದಾಗಿ ಹೇಳಿದ ಅಧಿಕಾರಿಗಳು ನಂತರ ಮಾತು ತಪ್ಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು, ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಶಿವಶಂಕರ್, ಅಧೀಕ್ಷಕ ಎಂಜಿನಿಯರ್ ಶಿವಮೂರ್ತಿ ಕಚೇರಿಗೆ ಮುತ್ತಿಗೆ ಹಾಕಿದ್ದು, ಸಂಜೆಯ ನಂತರವು ಪ್ರತಿಭಟನೆ ಮುಂದುವರೆಸಿದ್ದಾರೆ.
'ಲೋಕಾ'ಬಲೆಗೆ ಪಿಡಿಒ
ಮೈಸೂರು: ಖಾತಾ ಬದಲಾವಣೆ ಮತ್ತು ಅಸೆಸ್ಮೆಂಟ್ ನೀಡಲು ಲಂಚ ಸ್ವೀಕರಿಸುತ್ತಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಹೊಸ ಅಗ್ರಹಾರ ಪಿಡಿಒ ವೆಂಕಟೇಶ್ ಸಿಕ್ಕಿಬಿದ್ದವರು. ಹೊಸ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಚಿಕ್ಕವಡ್ಡರಗುಡಿ ನಿವಾಸಿ ತಿಮ್ಮಶೆಟ್ಟಿ ಎಂಬುವರ ಪುತ್ರ ಕೃಷ್ಣಶೆಟ್ಟಿ ನೀಡುವ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.