ನಾಯಕರ ಸಮ್ಮುಖದಲ್ಲಿ ಶಿವರಾಂ ಅಸಮಾಧಾನ
ಹಾಸನ: ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಬಹಿರಂಗ ಸಭೆಯಲ್ಲಿ ಸಿಎಂ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ರಾಜ್ಯ ಮುಖಂಡರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು.
ಶಿವರಾಂ ಅವರು ಮಾತನಾಡಲು ಮೈಕ್ ಬಳಿ ಹೋಗುತ್ತಿದ್ದಂತೆ, ಕಾರ್ಯಕ್ರಮ ನಿರೂಪಕ 2 ನಿಮಿಷ ಮಾತನಾಡಬೇಕು ಎಂದು ಹೇಳಿದರು. ಇದರಿಂದ ಕೆರಳಿದ ಶಿವರಾಂ, ಪಕ್ಷವನ್ನು ಆನೇಕ ವರ್ಷಗಳಿಂದ ಕಟ್ಟಿ ಬೆಳೆಸಿದ ನನಗೆ ಮಾತನಾಡಲು ನಿರ್ಬಂಧ ಮಾಡುತ್ತಾರೆ. ಹೇಗಿದೆ ನೋಡಿ ಕಾಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಅನೇಕ ರಾಜ್ಯ ನಾಯಕರು ನನಗೆ ಅವಮಾನ ಮಾಡಿದ್ದಾರೆ. ನಿಮಗೆ ಸಾಮರ್ಥ್ಯವಿಲ್ಲ, ಒಗ್ಗಟ್ಟಿಲ್ಲ, ಹೋಗಿ ಕೆಲ್ಸ ನೋಡಿ ಎಂದು ಅವಮಾನಿಸಿದ್ದಾರೆ. ಮತ್ತೊಂದು ಕಡೆ ಸಚಿವ ಜಾರಕಿ ಹೊಳಿ ಅವರು, ಹಾಸನದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಎನ್ನುತ್ತಾರೆ. ಹೀಗೆ ಮುಖಂಡರೇ ಹೇಳುವುದು ಸರಿಯೇ ಎಂದು ಏರಿದ ಧ್ವನಿಯಲ್ಲಿ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಜಿ. ಪರಮೇಶ್ವರ್ ಅವರನ್ನು ಪ್ರಶ್ನಿಸಿದರು. ತಿಳಿದುಕೊಳ್ಳಿ ಇನ್ನು ಮುಂದಿನ ದಿನಗಳಲ್ಲಿ ಅವಮಾನ ಮಾಡಿದರೆ ಸಹಿಸುವುದಿಲ್ಲ. ನಮಗೂ ಆತ್ಮಾಭಿಮಾನ ಇದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇಷ್ಟಕ್ಕೆ ಸುಮ್ಮನಿರಲಿಲ್ಲ: ಭಾಷಣ ಮುಗಿದ ನಂತರ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಬಳಿ ಹೋಗಿ ಏರಿದ ಧ್ವನಿಯಲ್ಲೇ ತಮ್ಮ ಮಾತನ್ನು ಸಮರ್ಥಿಸಿಕೊಂಡರು. ಪಕ್ಕದಲ್ಲಿ ಇದ್ದ ಅಭ್ಯರ್ಥಿ ಮಂಜು ತಬ್ಬಿಬ್ಬಾದರು.
ಸಿದ್ದು ಪ್ರತಿಕ್ರಿಯೆ: ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಶಿವರಾಂ, ನಿಮ್ಮಲ್ಲಿ ಸಾಮರ್ಥ್ಯ ಇಲ್ಲ ಎಂದು ಹೇಳಲಿಲ್ಲ. ಒಗ್ಗಟ್ಟು ಇಲ್ಲ ಅಂತಾ ಹೇಳಿದೆ ಎಂದು ಸಮಜಾಯಿಷಿ ನೀಡಿದರು.
ಪರಮೇಶ್ ಪ್ರತಿಕ್ರಿಯೆ: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮಾತನಾಡಿ, ಶಿವರಾಂ ಅವರೇ ಸಾಮರ್ಥ್ಯ ಇಲ್ಲ ಅಂದು ಹೇಳಲಿಲ್ಲ. ಉತ್ತಮ ಪ್ರದರ್ಶನ ನೀಡಿ ಎಂದು ಹೇಳಿದೆ ಎಂದು ಪ್ರತಿಕ್ರಿಯಿಸಿದರು.
ಈ ಸಮಜಾಯಿಷಿಗಳಿಗೆ ಸುಮ್ಮನಾಗದ ಶಿವರಾಂ ಮತ್ತೆ ಅಸಮಾಧಾನ ಹೊರಹಾಕುತ್ತಲೇ ಇದ್ದರು.
ರೇವಣ್ಣ ಕಳ್ಳ, ಕದೀಮ: ಕಾರ್ಯಕರ್ತರ ಸಭೆಯಲ್ಲಿ ವಿರೋಧಿ ಪಕ್ಷದ ನಾಯಕರನ್ನು ಏಕವಚನದಲ್ಲಿ ನಿಂದಿಸಲಾಯಿತು. ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಏಕವಚನ ಪ್ರಯೋಗ ಮಾಡಿ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣನವರನ್ನು ಟೀಕಿಸಿದರು. ಆ ರೇವಣ್ಣ ಕಳ್ಳ, ಕದೀಮ, ರಾತ್ರಿ ಹೊತ್ತು ಬರ್ತಾನೆ, ಹುಷಾರ್ ಆಗಿರಿ ಎಂದು ಮಂಜು ಏಕವಚನದಲ್ಲಿ ನಿಂದಿಸಿದರು.
ಕೈಗೆ ಖಡ್ಗ ಕೊಟ್ಟಿದ್ದೀವಿ: ಮುಖಂಡ ಸಿ.ಎಂ. ಇಬ್ರಾಹಿಂ ಮಾತನಾಡಿ, ಅಭ್ಯರ್ಥಿ ಎ. ಮಂಜು ಕೈ ಖಡ್ಗ ನೀಡಿದ್ದೇವೆ. ಕಿವಿಗೆ ವಾಲೆ ಹಾಕಿದ್ದೇವೆ. ಅವರನ್ನು ಗೆಲ್ಲಿಸಲೇಬೇಕು ಎಂದು ಜನತೆ ಫಾರ್ಮಾನು ಹೊರಡಿಸಿದರು.
ಸಚಿವ ಡಿ.ಕೆ. ಶಿವಕುಮಾರ್ ಕೂಡ ತಮ್ಮ ಆರ್ಭಟದ ಭಾಷಣದ ಅಲ್ಲಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಏಕವಚನ ಬಳಸಿ ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

