ಹಾಸನ

ಶಿವಪ್ಪ ಸಮಗ್ರ ಕಾವ್ಯ ಲೋಕಾರ್ಪಣೆ

Published On :

ಮೈಸೂರು: ಹಿರಿಯ ಕವಿ ಕೆ.ಸಿ. ಶಿವಪ್ಪ ಅವರ 'ಸಮಗ್ರ ಕಾವ್ಯ' ಎರಡು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮ ಏ.2ರಂದು ಸಂಜೆ 6ಕ್ಕೆ ನಡೆಯಲಿದೆ.
ಮೈಸೂರಿನ ಸಂವಹನ ಪ್ರಕಾಶನ ಹಾಗೂ ಭಾರತೀಯ ವಿದ್ಯಾಭವನವು ಬೆಂಗಳೂರಿನ ಬಿವಿಬಿಯ ಖಿಂಚಾ ಸಭಾಂಗಣದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಸಂಪುಟಗಳನ್ನು ಲೋಕಾರ್ಪಣೆ ಮಾಡುವರು. ಕೃತಿಗಳನ್ನು ಕುರಿತು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡುವರು. ಬಿವಿಬಿ ಅಧ್ಯಕ್ಷ ಎನ್. ರಾಮಾನುಜ ಅಧ್ಯಕ್ಷತೆ ವಹಿಸುವರು. ನಿರ್ದೇಶಕ ಎಚ್.ಎನ್. ಸುರೇಶ್, ಪ್ರಕಾಶಕ ಡಿ.ಎನ್. ಲೋಕಪ್ಪ ಭಾಗವಹಿಸುವರು.
ಕೆ.ಸಿ. ಶಿವಪ್ಪ ಅವರು ಚಾಮರಾಜನಗರ ತಾಲೂಕು ಕಾಗಲವಾಡಿಯವರು. ಕವಿ, ಚಿಂತಕ, ಭಾಷಾಂತರಕಾರ, ಸಂಗೀತಪ್ರೇಮಿ, ಪ್ರಕಾಶಕ, ಪತ್ರಕರ್ತ, ಆಡಳಿತಗಾರ. ಓದಿದ್ದು ವಿಜ್ಞಾನವಾದರೂ ಕೈಹಿಡಿದಿದ್ದು ಸಾಂಸ್ಕೃತಿಕ ವಲಯವನ್ನು. ಬೆಂಗಳೂರು ವಿವಿ ಪ್ರಸಾರಾಂಗ ನಿರ್ದೇಶಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕರಾಗಿದ್ದಾರೆ.
ಶಿವಪ್ಪ ಅವರು ಮುದ್ರಣ- ಪ್ರಕಾಶನ ರಂಗದಲ್ಲಿ ಸೋಪಜ್ಞ ಕ್ರಿಯಾಶೀಲರು. ಅನೇಕ ಸೃಜನಶೀಲ ಸಾಹಿತ್ಯಕ- ಸಾಂಸ್ಕೃತಿಕ ಯೋಜನಗೆಳ ರೂವಾರಿ. ಸೌಂದರ್ಯೋಪಾಸನೆಯ ಶ್ರದ್ಧಾಪೂರ್ವಕ ಅರಿವು, ನಿಸರ್ಗಾರಾಧನೆ, ಜೀವನಪ್ರೀತಿ, ಅನುರಾಗ, ತಾತ್ವಿಕ ಚಿಂತನೆ, ಕಲಾರಾಧನೆ, ಚಿತ್ತಪ್ರಸನ್ನತೆ ಇವರ ಕವಿತೆಗಳಲ್ಲಿ ಅಂತರ್ಗತವಾಗಿವೆ. ಬದುಕಿನ ನಿತ್ಯ ಆತಂಕ- ಒತ್ತಡಗಳ ನಡುವೆ ಭರವಸೆ- ಉತ್ಸಾಹ ತುಂಬುವ ಇವರ ಕಾವ್ಯಧಾರೆ ಸಾರಸ್ವತ ಲೋಕದ ಬತ್ತದ ತೊರೆ.
ನಾಲ್ಕು ದಶಕಗಳ ಅವರ ಕಾವ್ಯಕೃಷಿಯ ಫಲವಾಗಿ ಮೂಡಿಬಂದ 504 ಒಲವಿನ ಗೇಯಗೀತೆಗಳು ಮೊದಲ ಸಂಪುಟದಲ್ಲಿ ಹಾಗೂ 581 ಗೇಯಗೀತೆಗಳು ಎರಡನೇ ಸಂಪುಟದಲ್ಲಿ ಸಮಾವೇಶಗೊಂಡಿವೆ. ಬದುಕು, ಚಿಂತನೆ, ಪ್ರಕೃತಿ, ದೈವ, ಅನುಭಾವ ಇಲ್ಲಿನ ಕವನದ ವಸ್ತುಗಳಾಗಿವೆ. ಇವರ ರಾಧಾಮಾಧವ ಕೃತಿ ದೈವಿಕ ಒಲವಿನ ಪ್ರತೀಕಂದಂತಿದೆ. ಮುದ್ದುರಾಮ ಅಂಕಿತದಲ್ಲಿ ರಚಿತವಾಗಿರುವ ಇವರ ಎರಡು ಚೌಪದಿ ಸಂಕಲನಗಳು ಹಾಗೂ ಹಲವಾರು ಧ್ವನಿ ಸುರಳಿ- ಸಿಡಿಗಳು ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿವೆ. ಸರಳತೆ, ಖಚಿತತೆ, ಸೂಕ್ಷ್ಮ- ಸಂವೇದನಾಭಿವ್ಯಕ್ತಿ ಹಾಗೂ ಮೋಹಕ ಶೈಲಿ ಇವರ ಕವಿತೆಗಳ ಹೆಗ್ಗಳಿಕೆ.
ಕೆ.ಸಿ, ಶಿವಪ್ಪ ಅವರ ಸಂಪಾದಕತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳಿಗಾಗಿ 100 ಪುಸ್ತಕಗಳು ಹೊರಬಂದಿವೆ. ಅವರ ಬೆಡಗಿನ ಬಾಟಿಕ್ ಅನುವಾದಿತ ಕೃತಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಶಿವಪ್ಪ ಅವರು ರಾಗರತಿ, ಅನುರಾಗ, ರಾಧಾಮಾಧವ, ಚಿತ್ತಿಭಿತ್ತಿ, ಚಿತ್ತವೃತ್ತಿ, ಚಿತ್ರಾಂಬರ, ಚೆಂಬೆಳಕು, ಚಿದಾನಂದ, ಚೆಲುವೆ, ಚಂದ್ರಿಕೆ, ಚಾರುಲತೆ, ಚಿತ್ರಪತ್ರ ಕವನ ಸಂಕಲನಗಳು, ಮುದ್ದುರಾಮನ ಮನಸು- ಚೌಪದಿ ಸಂಕಲನ, ಮುದ್ದುರಾಮನ ಬದುಕು-ಬೆಳಕು, ಬದುಕಿಗೊಂದು ಭರವಸೆ. ಚಿತ್ತ ಚಿತ್ತಾರ- ವ್ಯಕ್ತಿತ್ವ ವಿಕಸನ ಕೃತಿಗಳು, ಜೀವಸತ್ವಗಳು, ಬೆಡಗಿನ ಬಾಟಿಕ್, ಭೂಮಿ, ಶುಕ್ರದೆಸೆ- ಅನುವಾದಿತ ಕೃತಿಗಳು, ಹೋಮಿ ಭಾಭಾ- ಜೀವನ ಚರಿತ್ರೆ ಕೃತಿಗಳನ್ನು ಹೊರತಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.