ಹಾಸನ

ಗಂಡಾಂತರ ತಂದ ಕಾಮಗಾರಿ

Published On :

ಬೇಲೂರು: ಸಾರ್ವಜನಿಕರ ಸುರಕ್ಷತೆಯನ್ನು ಕಡೆಗಣಿಸಿ ಮಾಡಲಾಗುತ್ತಿರುವ ನೀರಿನ ಕಾಲುವೆ ಕಾಮಗಾರಿಯಯಿಂದಾಗಿ ಬೈಕ್ ಸವಾರನೊಬ್ಬ ಜೀವತೆತ್ತ ಘಟನೆ ಭಾನುವಾರ ನಡೆದಿದೆ. ಇತ್ತ ಕಡೆ ಬಂದ ಬೈಕ್ ಸವಾರ, ಆಯತಪ್ಪಿ ಕಾಲುವೆಗಾಗಿ ತೋಡಿರುವ ಗುಂಡಿಗೆ ಬಿದ್ದ ಪರಿಣಾಮ ಮೃತಪಟ್ಟಿದ್ದಾನೆ. ಆತನೊಂದಿಗೆ, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇನ್ನೋರ್ವ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಸಂಬಂಧಿಕರು ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಏನಿದು ಕಾಮಗಾರಿ?: ತಾಲೂಕಿನ ಹಗರೆ ಹೋಬಳಿ ಸಮೀಪ ಮಲ್ಲಿಕಾರ್ಜುನಪುರ ಬಳಿ ಏತನೀರಾವರಿ ಚಾನಲ್‌ಗಾಗಿ ತೋಡಿರುವ ದೊಡ್ಡ ಗುಂಡಿಗೆ ಬೈಕ್ ಬೃದ್ದ ಪರಿಣಾಮ ಬೈಕ್ ಸವಾರ ದರ್ಶನ್ (21) ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿರುವ ಗಗನ್ ಎಂಬವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೋಷಕರ ಆಕ್ರೋಶ: ಹಳೆಬೀಡು - ಮಾದಿಹಳ್ಳಿಗೆ ನೀರು ಹರಿಸಲು  ಏತನೀರಾವರಿಗಾಗಿ ಹೆದ್ದಾರಿ ರಸ್ತೆಗೆ ಅಡ್ಡವಾಗಿ ತೋಡುತ್ತಿರುವ ಚಾನಲ್ ಕಾಮಗಾರಿ ಅವೈಜ್ಞಾನಿಕವಾಗಿದ್ದರಿಂದ ಅಮಾಯಕ ಯುವಕ ಬಲಿಯಾಗಬೇಕಾಯಿತು ಎಂದು ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರಾತುರಿಯಲ್ಲಿ ಏತ ನೀರಾವರಿ ಕಾಮಗಾರಿಯನ್ನು ಕೈಗೊಂಡಿದ್ದು ಅವೈಜ್ಞಾನಿಕ ರೀತಿಯ ಕ್ರಮಗಳನ್ನು ಕೈಗೊಡಿದ್ದಾರೆ. ರಸ್ತೆ ಉಬ್ಬರವನ್ನು ಹಾಕುವ ಬದಲು ಮಣ್ಣಿನ ಗುಡ್ಡೆಯನ್ನು ಸುರಿದಿದ್ದಾರೆ. ಅಲ್ಲದೇ ಬದಲಿ ರಸ್ತೆಯನ್ನು ಸರಿಯಾಗಿ ಮಾಡದೆ ಅಡ್ಡಾದಿಡ್ಡಿ ತೋಡಿದ್ದಾರೆ. ಬದಲಿ ರಸ್ತೆಯ ಮಾರ್ಗಸೂಚಿಯನ್ನು  ಸರಿಯಾಗಿ ಕಾಣುವಂತೆ ಬರೆದಿಲ್ಲ.
ಸಾವು ಆದ ಮೇಲೆ ಸ್ಪೀಡ್‌ಬ್ರೇಕರ್: ಕಾಮಗಾರಿ ನಡೆಯುತ್ತಿರುವ ಬಗ್ಗೆ ಹೊಸದಾಗಿ ಬಂದವರಿಗೆ ತಕ್ಷಣ ತಿಳಿಯಲು ಸಾಧ್ಯವಾಗದ ರೀತಿಯಲ್ಲಿ ಕೆಲಸ ನಡೆಯುತ್ತಿದೆ. ಅಲ್ಲದೆ ರಸ್ತೆಯ ಉಬ್ಬನ್ನು ಇಷ್ಟು ದಿನ ಹಾಕದಿದ್ದವರು ಭಾನುವಾರ ಯುವಕ ಮೃತಪಟ್ಟ ಮೇಲೆ ರಸ್ತೆಗೆ ಉಬ್ಬನ್ನು ಹಾಕಲು ಹೊರಟಿರುವುದು ಯಗಚಿ ಇಲಾಖೆ ಹಾಗೂ ಗುತ್ತಿಗೆದಾರರ ಮೇಲೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸ್ಥಳಕ್ಕೆ ಯಗಚಿ ಕಾರ್ಯಪಾಲಕ ಎಂಜಿನಿಯರ್ ಹಾಗೂ ಗುತ್ತಿಗೆದಾರ ಬರಬೇಕು ಎಂದು ಪಟ್ಟು ಹಿಡಿದು ಸಂಬಂಧಿಕರು ಪ್ರತಿಭಟನೆಗೆ ಮುಂದಾದರು.
ಈ ಸಂದರ್ಭ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಪರಿಸ್ಥಿತಿಯನ್ನು ತಹಬದಿಗೆ ತಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.