ಹಾಸನ

'ಜೀವನೋತ್ಸಾಹ ಮೈಗೂಡಿಸಿಕೊಳ್ಳಿ'

Published On :

ಹೊಳೆನರಸೀಪುರ: ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು, ತಮ್ಮಲ್ಲಿನ ಅಂತಃಸತ್ವವನ್ನು ಕುಂಠಿತಗೊಳಿಸಿಕೊಳ್ಳದೆ ಜೀವನೋತ್ಸಾಹ ಮೈಗೂಡಿಸಿಕೊಳ್ಳುವಂತೆ  ತಹಸೀಲ್ದಾರ್ ರಾಘವೇಂದ್ರ ಕಿವಿಮಾತು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಎಂ.ಕಾಂ. ಸ್ನಾತಕೋತ್ತರ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಎನ್.ಸಿ.ಸಿ ಮತ್ತು ಪರಂಪರಾ ಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಯನ್ನು ತಮ್ಮ ವಿದ್ಯಾರ್ಥಿ ಜೀವನದ ಒಂದು ಸಾಂಕೇತಿಕ ಸ್ಪರ್ಧೆಯೆಂದು ತಿಳಿದು ಅಳುಕದೇ ಮುನ್ನಡೆಯುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳಿಗೆ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳು ತಮ್ಮ ಬದುಕಿನ ಆದರ್ಶ ವ್ಯಕ್ತಿಗಳಾಗುವ ಮುನ್ನ ತಮ್ಮ ತಂದೆ- ತಾಯಂದಿರು  ಮೊಟ್ಟಮೊದಲ ಆದರ್ಶ ವ್ಯಕ್ತಿಗಳಾಗಲಿ, ನಮ್ಮ ಆಸೆಗಳಿಗೆ ಅಂಕುಶ ಇರಿಸಿಕೊಳ್ಳುವ ಮನೋಧೋರಣೆ ರೂಢಿಸಿಕೊಳ್ಳಬೇಕು ಎಂದರು.
ಕಿವಿಮಾತು: ಕಾಲೇಜಿನ ಶಿಸ್ತುಪಾಲನ ಸಮಿತಿಯ ಸದಸ್ಯ ಹಾಗೂ ನಗರ ಪೊಲೀಸ್ ಠಾಣೆಯ ಎಸೈ ಶಿವಕುಮಾರ್ ಮಾತನಾಡಿ, ವಿದ್ಯೆ ಮತ್ತು ಹುದ್ದೆಗಳು ಸಮಾಜದಲ್ಲಿ ಗೌರವ ತರುವ ಅಂಶಗಳಾಗಿದ್ದು, ಹಣವನ್ನು ಯಾರು ಬೇಕಾದರೂ ಸಂಪಾದಿಸಬಹುದಾದರೂ, ವಿದ್ಯೆಯನ್ನು ಎಲ್ಲರೂ ಸಂಪಾದಿಸಲಾಗದು. ಆದ ಕಾರಣ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ವಿದ್ಯೆಯ ಕುರಿತಂತೆ ಶ್ರದ್ಧೆಯನ್ನು ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.ಪ್ರಗತಿ ಹೊಂದಬೇಕು: ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಎಂ.ಎನ್. ಜೈಪ್ರಕಾಶ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಶಕ್ತಿಯನ್ನು ತುಂಬಿದರೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ಬುದ್ದಿಯನ್ನು ತುಂಬುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಸರಿಯಾದ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದಲ್ಲಿ ಪ್ರಗತಿ ಹೊಂದುವಂತೆ ಕರೆ ನೀಡಿದರು. ವಿದ್ಯಾರ್ಥಿ ನಿಲಯ: ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ. ಇರ್ಷಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇಂಗ್ಲೀಷ್, ಕನ್ನಡ, ರಾಜ್ಯಶಾಸ್ತ್ರ ಹಾಗೂ ವಿಜ್ಞಾನ ವಿಷಯಗಳ ಸ್ನಾತಕೋತ್ತರ ವಿಭಾಗವನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರಲ್ಲದೇ, ರು. 1 ಕೋಟಿ ವೆಚ್ಚದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ನಿಲಯವನ್ನು ಕೂಡ ಆರಂಭಿಸಲಾಗುತ್ತಿದೆ ಎಂದರು.
ಸನ್ಮಾನ: ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ವರ್ಷದ ವ್ಯಕ್ತಿಯಾಗಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಅನಾಥರಿಗೆ ಅನ್ನ ನೀಡುವ ಕಾಯಕವನ್ನು ಸದ್ದಿಲ್ಲದೇ ಮಾಡುತ್ತಿರುವ ಇಲ್ಲಿನ ಉಪ- ನೋಂದಣಾಧಿಕಾರಿಗಳ ಕಚೇರಿಯ ದ್ವಿತೀಯ ದರ್ಜೆಸಹಾಯಕ ರಾಕೇಶ್ ಅವರನ್ನು ಸಮಾಜ ಸೇವೆಯ ಅಡಿಯಲ್ಲಿ  ಸನ್ಮಾನಿಸಲಾಯಿತು. ರಾಕೇಶ್ ಅವರ ವ್ಯಕ್ತಿ ಪರಿಚಯವನ್ನು ಉಪನ್ಯಾಸಕ ಎಚ್.ಎಸ್. ಪ್ರಭುಶಂಕರ್ ಮಾಡಿಕೊಟ್ಟರು.
ಅಲ್ಲದೇ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಎಂ.ಕಾಂ ವಿಭಾಗದ ವಿದ್ಯಾರ್ಥಿಫಯಾಜ್ ಹಾಗೂ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ತೃತೀಯ ಬಿ.ಎ ವಿದ್ಯಾರ್ಥಿನಿ ಎಸ್.ಕೆ. ರೋಹಿಣಿ ಅವರಿಗೆ ನೀಡಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.