ಹಾಸನ

ಪಂಕ್ತಿ ಭೇದ ವಿರೋಧಿಸಿ ಧರಣಿ ಇಂದು

Published On :

ಹಾಸನ: ಪಂಕ್ತಿಭೇದ ಪದ್ಧತಿ ನಿಷೇಧಿಸಲು ಆಗ್ರಹಿಸಿ ಮೇ 5ರಂದು ಸಿಪಿಎಂನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಎಂ ಕಾರ್ಯದರ್ಶಿ ವಿ. ಸುಕುಮಾರ್ ತಿಳಿಸಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಊಟಕ್ಕೆ ಕುಳಿತ ಬ್ರಾಹ್ಮಣೇತರ  ಮಹಿಳೆಯೊಬ್ಬರನ್ನು ಎಬ್ಬಿಸಿ, ಹೊರ ಕಳುಹಿಸಿ ಅವಮಾನ ಮಾಡಿದ ಘಟನೆ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದೆ. ಉಪನ್ಯಾಸಕಿಯಾಗಿರುವ ವನಿತಾ ಶೆಟ್ಟಿ ಎಂಬವರು ಏ. 15ರಂದು ಸೌರಮಾನ ಯುಗಾದಿ ಹಿನ್ನೆಲೆಯಲ್ಲಿ ತನ್ನ ಸಹವರ್ತಿಗಳೊಂದಿಗೆ ಶ್ರೀ ಕೃಷ್ಣ ಮಠಕ್ಕೆ ಬಂದ ಸಂದರ್ಭದಲ್ಲಿ ಅನ್ನ ಪ್ರಸಾದ ಸ್ವೀಕರಿಸಲು ಪಂಕ್ತಿಯಲ್ಲಿ ಕುಳಿತಿದ್ದಾಗ, ಊಟ ಬಡಿಸುವವರೊಬ್ಬರು ಬಂದು ವನಿತಾ ಶೆಟ್ಟಿ ಬ್ರಾಹ್ಮಣಳಲ್ಲ ಎಂಬ ಏಕೈಕ ಕಾರಣಕ್ಕಾಗಿ ಎಬ್ಬಿಸಿ ಹೊರಕ್ಕೆ ಕಳುಹಿಸಿದ್ದಾರೆ. ಇದೊಂದು ಧರ್ಮಬಾಹಿರ ಹಾಗೂ ಕಾನೂನು ಬಾಹಿರ ಕೃತ್ಯ ಎಂದು ಸುಕುಮಾರ್ ಖಂಡಿಸಿದರು.
ಪ್ರತಿಭಟಿಸಿದವರ ಮೇಲೆ ದೌರ್ಜನ್ಯ: ಉಡುಪಿಯ ಕೃಷ್ಣ ಮಠದಲ್ಲಿ ಆಚರಣೆಯಲ್ಲಿರುವ ಈ ಅನಿಷ್ಟ ಪಂಕ್ತಿಭೇದ ಪದ್ಧತಿಯ ವಿರುದ್ಧ ಸಿಪಿಎಂ ಮೂರು ವರ್ಷಗಳಿಂದ ನಿರಂತರವಾಗಿ ಆಂದೋಲನ ನಡೆಸುತ್ತಾ ಬಂದಿದೆ ಎಂದ ಸುಕಮಾರ್, 2012ರ ಡಿಸೆಂಬರ್ ತಿಂಗಳಲ್ಲಿ ಉಡುಪಿ ಕೃಷ್ಣ ಮಠದ ಎದುರು ಸಿಪಿಎಂ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾಗ ಅಂದಿನ ಬಿಜೆಪಿ ಸರ್ಕಾರದ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಿದ್ದರು.
ಆ ವೇಳೆ ಸಿಪಿಎಂನ ಅನೇಕ ಕಾರ್ಯರ್ತರು ಗಾಯಗೊಂಡಿದ್ದರು. ಮಾತ್ರವಲ್ಲ, ನೂರಾರು ಜನ ಕಾರ್ಯಕರ್ತರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು ಎಂದರು.
ಪಕ್ಷಗಳ ಅಚ್ಚರಿಯ ಮೌನ: ಮಹಿಳೆಯೊಬ್ಬಳನ್ನು ಜಾತಿ ಹೆಸರಿನಲ್ಲಿ ಅವಮಾನಿಸುವ ಪ್ರಕರಣ ನಡೆದುದರ ಬಗ್ಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೊದಲಾದ ಪಕ್ಷಗಳು ಮೌನಕ್ಕೆ ಶರಣಾಗಿವೆ ಎಂದು ಅವರು ವಿಷಾದಿಸಿದರು.
ಸರ್ಕಾರದ ಮೇಲೆ ಆಗ್ರಹ: ಮುಂದಿನ ಹಂತದ ಹೋರಾಟದ ಅಂಗವಾಗಿ, ಉಡುಪಿಯ ಅಷ್ಟ ಮಠಗಳಲ್ಲಿ ಹಾಗೂ ರಾಜ್ಯದ ಇತರ ಮಠ ಮಂದಿರಗಳಲ್ಲಿ ಜಾರಿಯಲ್ಲಿರುವ ಅಮಾನವೀಯ ಪಂಕ್ತಿಭೇದವನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೇ 5ರಂದು ಸಾಮೂಹಿಕ ಧರಣಿ ನಡೆಸಲು ಸಿಪಿಎಂ ರಾಜ್ಯಸಮಿತಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.