ಮಾರ್ಕ್ಸ್ ವಾದಕ್ಕೆ ಜಗತ್ತೇ ಮರುಳು
ಕನ್ನಡಪ್ರಭ ವಾರ್ತೆ, ಹಾಸನ, ಮೇ 6
ಭಾರತವಲ್ಲದೆ ಜಗತ್ತಿನಾದ್ಯಂತ ಬಹುತೇಕರು ಮಾರ್ಕ್ಸ್ವಾದದ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಮಾರ್ಕ್ಸ್ ವಾದಿ ಚಿಂತಕರು ಮತ್ತು ಸಮಾಜ ವಿಜ್ಞಾನಿ ಜಿ.ಎನ್. ನಾಗರಾಜ್ ಹೇಳಿದರು.
ಅವರು ನಗರದಲ್ಲಿ ಮಂಗಳವಾರ ನಡೆದ ಭಾರತದಲ್ಲಿ ಮಾರ್ಕ್ಸ್ ವಾದದ ಪ್ರಸ್ತುತತೆ ಎಂಬ ವಿಷಯದ ಕುರಿತ ಸಂವಾದ ಗೋಷ್ಠಿಯಲ್ಲಿ ವಿಷಯ ಅವರು ಮಾತನಾಡಿದರು. ಮಾರ್ಕ್ಸ್ ವಾದದ ಮೂರು ಪ್ರಮುಖ ಅಂಶಗಳೆಂದರೆ ತತ್ವಶಾಸ್ತ್ರ, ರಾಜಕೀಯ ಅರ್ಥಶಾಸ್ತ್ರ ಮತ್ತು ಸಮಾಜವಾದಿ ಚಳುವಳಿ. ಮಾರ್ಕ್ಸ್ ಅವರು ಜರ್ಮನಿಯಲ್ಲಿ ಇದ್ದಾಗ ಅವರು ಹೊರತರುತ್ತಿದ್ದ ಪತ್ರಿಕೆಗೆ ವಿಶೇಷ ಲೇಖಲ ಬರೆಯಲು, ಅಲ್ಲಿಯ ದ್ರಾಕ್ಷಿ ಬೆಳೆಗಾರರ ಕುರಿತು ವರದಿ ಮಾಡಲೆಂದು ಹೋಗಿದ್ದರು. ಅಲ್ಲಿಯ ದುಸ್ಥಿತಿಯನ್ನು ಕಣ್ಣಾರೆ ಕಂಡ ಮಾರ್ಕ್ಸ್, ಅದರ ಆಧಾರದ ಮೇಲೆ ಜನರ ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಕಮ್ಯೂನಿಸ್ಟ್ ಪ್ರಣಾಳಿಕೆಯನ್ನು ರಚಿಸಿದರು ಎಂದರು.
ಮಾರ್ಕ್ಸ್ರವರು ರಚಿಸಿರುವ ಬಂಡವಾಳ ಕೃತಿಯನ್ನು ನೊಬೆಲ್ ಪ್ರಶಸ್ತಿ ಪಡೆದ ಅರ್ಥಶಾಸ್ತಜ್ಞರಿಂದ ಇಡಿದು ಜಗತ್ತಿನ ಎಲ್ಲಾ ಶಾಸ್ತ್ರಜ್ಞರೂ ಅಧ್ಯಯನ ಮಾಡಿದ್ದು, ಜಗತ್ತಿನ ಆರ್ಥಿಕ ಬಿಕ್ಕಟ್ಟಿಗೆ ಮಾರ್ಕ್ಸ್ವಾದವೇ ಪರಿಹಾರ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರು ವಿವರಿಸಿದರು.
ಪ್ರತಿಪಾದನೆ: ಬಂಡವಾಳಶಾಹಿ ವ್ಯವಸ್ಥೆ ಜೀವಂತವಾಗಿರುವವರೆಗೆ ಮಾರ್ಕ್ಸ್ವಾದ ಪ್ರಸ್ತುತತೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಬಂಡವಾಳಶಾಹಿ ಸಮಾಜ ನಿಂತಿರುವುದೇ ಲಾಭದ ತಿರುಗಣೆಯ ಮೇಲೆ ಎನ್ನುವುದನ್ನು ಮಾರ್ಕ್ಸ್ ಸಾಧಿಸಿ ತೋರಿದರು ಹಾಗೂ ಮೌಲ್ಯದ ಶ್ರಮ ಸಿದ್ಧಾಂತವನ್ನು ಪ್ರತಿಪಾದಿಸಿದರು.
ಭಾರತದಲ್ಲಿ ಮಾರ್ಕ್ಸ್ವಾದದಿಂದ ಪ್ರಭಾವಿತರಾಗದೇ ಇರುವ ಭಾರತದ ಶ್ರೇಷ್ಠ ಚಿಂತಕರು ಯಾರೂ ಇಲ್ಲ ಎಂದ ನಾಗರಾಜ್, ಭಾರತ ಜಾತಿ ವ್ಯವಸ್ಥೆಯಿಂದ ಕೂಡಿರುವುದರಿಂದ ಮಾರ್ಕ್ಸ್ವಾದ ಭಾರತಕ್ಕೆ ಅನ್ವಯಿಸುವುದಿಲ್ಲ ಎಂಬ ವಾದವೂ ಇದೆ. ಆದರೆ ಮಾರ್ಕ್ಸ್ವಾದ ಜಾತಿವ್ಯವಸ್ಥೆ ಅಥವಾ ಒಂದು ಸ್ವತಂತ್ರ ಸಾಮಾಜಿಕ ಸಂರಚನೆ ಅಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದಲ್ಲಿ ಸಮಾಜವಾದಿ ವ್ಯವಸ್ಥೆ ಜಾರಿಗೆ ತರಲು ಕಾಲ ಇನ್ನೂ ಪಕ್ವವಾಗಿಲ್ಲ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಟೆರಿ ಈಗಲ್ ಟರ್ನ್ ರಚಿಸಿರುವ ವೈ ಮಾರ್ಕ್ಸ್ ವಾಸ್ ರೈಟ್ ಇಂಗ್ಲೀಷ್ ಕೃತಿಯ ಕನ್ನಡ ಅನುವಾದ ಕಾಪೋರೇಟ್ ಕಾಲದಲ್ಲೂ ಮಾರ್ಕ್ಸ್ ವಾದ ಪ್ರಸ್ತುತ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಅವರು ಈ ಪುಸ್ತಕ ಬಿಡುಗಡೆ ಮಾಡಿದರು.
ಸಂವಾದದಲ್ಲಿ ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಸಾಹಿತಿಗಳು ಪಾಲ್ಗೊಂಡಿದ್ದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಕಾರ್ಮಿಕ ಮುಖಂಡ ಧರ್ಮೇಶ್ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಿ. ಸತ್ಯನಾರಾಯಣ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಎಚ್.ಆರ್. ನವೀನ್ ಕುಮಾರ್ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

