ಹಾಸನ

ಅಕ್ರಮಗಳ ತನಿಖೆ ಲೋಕಾಗೆ ಒಪ್ಪಿಸಿ

Published On :

ಹಾಸನ: ಹಾಸನ ನಗರಸಭೆ ಆಯುಕ್ತರಿಗೆ ನೀಡುತ್ತಿರುವ ಕಿರುಕುಳ ಖಂಡಿಸಿ ಹಾಗೂ ನಗರಸಭೆಯಲ್ಲಿ ನಡೆದಿರುವ ಅಕ್ರಮಗಳನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಕರ್ನಾಟಕ ಮಾದಿಗ ದಂಡೋರ ಮತ್ತು ದಲಿತ ಸಂಘಟನೆಗಳ ಸಂಯುಕ್ತ ವೇದಿಕೆಯ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ನಗರಸಭೆಗೆ ಆಯುಕ್ತರಾಗಿ ಬಂದಿರುವ ದಲಿತ ಜನಾಂಗಕ್ಕೆ ಸೇರಿದ ಎ.ಎಚ್. ಕೃಷ್ಣಮೂರ್ತಿ ಅಧಿಕಾರವಹಿಸಿಕೊಂಡ ಕೆಲವೇ ತಿಂಗಳ ಅವಧಿಯಲ್ಲಿ ತಮ್ಮ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಕಾನೂನು ವಿರೋಧಿ ಕೆಲಸ ಮಾಡಲು ಪ್ರೇರೆಪಿಸಿದ ಕೆಲವರಿಗೆ ಆಯುಕ್ತರು ಎಚ್ಚರಿಕೆ ನೀಡಿದ್ದು, ಕಾನೂನು ವಿರೋಧಿ ಕೆಲಸಗಳಲ್ಲಿ ತಾನು ಯಾವುದೇ ಕಾರಣಕ್ಕು ಪಾಲ್ಗೊಳ್ಳುವುದಿಲ್ಲ ಮತ್ತು ಇಂತವುಗಳನ್ನು ನನ್ನ ಹತ್ತಿರ ತರಬೇಡಿ ಎಂದು ತಾಕೀತು ಮಾಡಿದ್ದರು.
ಮಧ್ಯವರ್ತಿಗಳ ಹಾವಳಿಗೆ ತಡೆ: ಈ ಸಂಬಂಧ ನಗರಸಭೆಯಲ್ಲಿ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಎಲ್ಲಾ ಕೋಣೆಗಳಿಗೆ ಸಿಸಿ ಕ್ಯಾಮಾರಾ ಅಳವಡಿಸಿದ್ದಾರೆ. ಮಧ್ಯವರ್ತಿಗಳನ್ನು ನಗರಸಭೆ ಕಚೇರಿ ಆವರಣದಲ್ಲಿ ದೂರ ಇಟ್ಟಿದ್ದಾರೆ. ನಿಗಧಿತ ಸಮಯದಲ್ಲಿ ಕೆಲಸ ಮಾಡುವಂತೆ ತಾಕೀತು ಮಾಡಿದ್ದು, ಸ್ವತಃ ತಾವು ಸ್ಥಳಕ್ಕೆ ಭೇಟಿ ನೀಡುವ ಮೂಲಕ ಖುದ್ದು ಸಮಸ್ಯೆಗಳನ್ನು ಆಲಿಸುತ್ತ ನಗರಸಭೆಗೆ ಕಾಯಕಲ್ಪ ನೀಡುವತ್ತ ಕೆಲಸ ಮಾಡಿದ್ದಾರೆ.
ಆದರೆ ಕಾನೂನು ಬಾಹಿರವಾಗಿ ಕೆಲಸ ಮಾಡಲು ಹೊರಟ ಕೆಲ ನಗರಸಭೆ ಸದಸ್ಯರಿಗೆ ಇದರಿಂದ ತೊಂದರೆಯಾಗಿದ್ದು, ಕೆಲ ದಿನದ ಹಿಂದೆ ಅಧ್ಯಕ್ಷರಿಗೆ ಗೌರ ತೋರುವುದಿಲ್ಲ ಎಂಬ ನೆಪ ಒಡ್ಡಿ ವಿನಾಕಾರಣ ಆಯುಕ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ನಿಂದನೆ: ಏ.23ರಂದು ನಗರಸಭೆ ಸಭಾಂಗಣದಲ್ಲಿ ಬೀದಿ ನಾಯಿ ಹಾವಳಿ ತಡೆಗೆ ಕರೆದಿದ್ದ ತುರ್ತು ಸಭೆ ನಡೆಯುತ್ತಿದ್ದ ವೇಳೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಗರಸಭೆ ಜೆಡಿಎಸ್ ಸದಸ್ಯರು ಆಯುಕ್ತರಿಗೆ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ. ಅದೇ ದಿನ ದಲಿತ ಆಯುಕ್ತರೊಬ್ಬರಿಗೆ ಅವಮಾನ ಮಾಡಲೆಂದೆ ಕೆಲ ಸದಸ್ಯರ ಕುಮ್ಮಕ್ಕಿನಿಂದ ಬಿಟ್ಟಗೋಡನಹಳ್ಳಿ ಮೂಗಣ್ಣಗೌಡ ಎಂಬವರು ನಗರಸಭೆ ಆಯುಕ್ತರ ಕಚೇರಿಯ ಮುಂದೆ ಕಸ ಸುರಿಸುವ ಮೂಲಕ ದಲಿತ ಅಧಿಕಾರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಇದು ಅಕ್ಷಮ್ಯವಾಗಿದ್ದು, ದಲಿತ ಅಧಿಕಾರಿ ಎಂಬ ಕಾರಣದಿಂದ ಕೊಡಬಾರದ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಆಯುಕ್ತರು ಮಾನಸಿಕವಾಗಿ ನೊಂದಿದ್ದು, ಇದಕ್ಕೆ ನಗರಸಭೆ ಉಪಾಧ್ಯಕ್ಷ ಇರ್ಷಾದ್ ಪಾಷ ಹಾಗೂ ಸದಸ್ಯ ಅನಿಲ್ ಕುಮಾರ್ ಹೊಣೆಗಾರರಾಗಿದ್ದಾರೆ. ಇವರ ಕಾನೂನು ಬಾಹಿರ ಕೃತ್ಯಗಳಿಗೆ ಆಯುಕ್ತರು ಬೆಂಬಲ ನೀಡದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ದೂರಿದರು.
2003ರಿ-2014ರವರೆಗೆ ನಗರಸಭೆಯಲ್ಲಿ ನಡೆದಿರುವ ಅಕ್ರಮಗಳನ್ನು ಸಿಒಡಿ ಅಥವಾ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು. ನಗರಸಭೆ ಆಯುಕ್ತರಿಗೆ ದಲಿತ ಎಂಬ ಕಾರಣಕ್ಕೆ ದೌರ್ಜನ್ಯ ನಡೆಸಿ ಬೆದರಿಕೆ ಹಾಕಿರುವ ಹಾಗೂ ಅವಮಾನ ಮಾಡಿರುವ ನಗರಸಭೆ ಜೆಡಿಎಸ್ ಸದಸ್ಯರು ಹಾಗೂ ಆಯುಕ್ತರ ಕಚೇರಿ ಮುಂದೆ ಕಸ ಸುರಿಸಿರಿ ಅವಮಾನ ಮಾಡಿರುವ ಮೂಗಣ್ಣಗೌಡ ಎಂಬವರ ವಿರುದ್ಧ ಅಟ್ರಾಸಿಟಿ ಕೇಸು ದಾಖಲಿಸಬೇಕು.
ನಗರಸಭೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಸೂಪರ್ ಸೀಡ್ ಮಾಡಬೇಕು. ದಲಿತ ವಿದ್ಯಾರ್ಥಿಗಳಿಗೆ ನೀಡುವ ಲ್ಯಾಪ್ಟಾಪ್ ವಿತರಣೆಯಲ್ಲಿ ಅಕ್ರಮ ನಡೆದಿದ್ದು, ತನಿಖೆ ಆಗಬೇಕು. ಶೇ.22.75 ದಲಿತರ ಹಣ ದುರುಪಯೋಗವಾಗಿದ್ದು, 2003 ರಿಂದ 2014ರವರೆಗೆ ತನಿಖೆಗೆ ಒಳಪಡಿಸಬೇಕು. ನಗರಸಭೆ ಆಯುಕ್ತ ದಲಿತರಾಗಿದ್ದು, ಅವರಿಗೆ ಸದಸ್ಯರಿಂದ ಕೊಲೆ ಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದು, ಅವರಿಗೆ ಪೊಲೀಸರು ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
2003ರಿಂದ 2014ರ ವರೆಗೆ ನಗರದಲ್ಲಿ ನಗರಸಭೆಯ ಜಾಗವನ್ನು ಅಕ್ರಮ ಖಾತೆ ಮಾಡಲಾಗಿದ್ದು, ಭೂ ಒತ್ತುವರಿಯಾಗಿದ್ದು, ಅಂತಹ ನಕಲಿ ಖಾತೆಗಳನ್ನು ರದ್ದುಗೊಳಿಸಿ ನಗರಸಭೆಯ ಜಾಗವನ್ನು ಉಳಿಸಿಕೊಳ್ಳಬೇಕು. ಈ  ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ನಗರಸಭೆ ಖಾಲಿ ಅಸ್ತಿ ಎಷ್ಟಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಯಪಡಿಸಬೇಕು. ನಗರಸಭೆಯ ಹುಣಸಿನಕೆರೆ ನಿವೇಶನ ಬಡವಾಣೆಯ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಟಿ.ಕುಮಾರಸ್ವಾಮಿ, ರವಿಕುಮಾರ್, ಆರ್ಪಿಐ ಸತೀಶ್, ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.