ಹಾಸನ

ನೂತನ ಸೇತುವೆ ಕಾಮಗಾರಿ ಪ್ರಗತಿಯಲ್ಲಿ

Published On :

ಕನ್ನಡಪ್ರಭವಾರ್ತೆ, ಹೊಳೆನರಸೀಪುರ, ಮೇ 8
ನಿತ್ಯವೂ ನೂರಾರು ವಾಹನಗಳು ಸಂಚರಿಸುವ ತಾಲೂಕಿನ ಗಂಗೂರು ಗ್ರಾಮದ ಹೊರವಲಯದಲ್ಲಿ ಶಿಥಿಲಗೊಂಡು ಅಪಾಯದ ಅಂಚಿನಲ್ಲಿದ್ದ ಹಳೆಯ ಸೇತುವೆಯನ್ನು ತೆರವುಗೊಳಿಸಿ ರು. 18 ಲಕ್ಷ ವೆಚ್ಚದಲ್ಲಿ ನೂತನ ಸೇತುವೆಯ ನಿರ್ಮಾಣಕ್ಕೆ ಇಲ್ಲಿನ ನೀರಾವರಿ ಇಲಾಖೆ ಮುಂದಾಗಿದೆ.
ಎಚ್ಚರಿಕೆ ಸೇತುವೆ ಶಿಥಿಲಗೊಂಡಿದೆ ನಿಧಾನವಾಗಿ ಚಲಿಸಿ ಎಂಬ ಸೂಚನಾ ಫಲಕ  ಹಾಕಿ ಎರಡು ವರ್ಷಗಳಾಗುತ್ತಾ ಬಂದರೂ, ಶಿಥಿಲಗೊಂಡಿರುವ ಸೇತುವೆಯನ್ನು ತೆರವುಗೊಳಿಸಿ ನೂತನ ಸೇತುವೆಯನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಗೋಜಿಗೆ ಹೋಗದ ಇಲ್ಲಿನ ನೀರಾವರಿ ಇಲಾಖೆಯ ನಿರ್ಲಕ್ಷತೆ ಕುರಿತು ಕನ್ನಡಪ್ರಭ 2013ರ ಡಿಸೆಂಬರ್‌ನಲ್ಲಿ ವರದಿ ಪ್ರಕಟಿಸಿತ್ತು.
ಹೊಳೆನರಸೀಪುರದಿಂದ ಗೊರೂರಿಗೆ ಹೋಗುವ ಮಾರ್ಗದಲ್ಲಿ ಗಂಗೂರು ಗ್ರಾಮದ ಹೊರವಲಯದಲ್ಲಿನ ಹೇಮಾವತಿ ಕಾಲುವೆಯ ಸರಪಳಿ 33.650ರ ಬಳಿಯಲ್ಲಿ ನಿರ್ಮಿಸಲಾಗಿದ್ದ ಸೇತುವೆಗೆ ಏನಿಲ್ಲವೆಂದರೂ ಎರಡು ದಶಕಗಳಿಗೂ ಮೀರಿದ ವಯಸ್ಸಾಗಿತ್ತು. ಈ ಮಾರ್ಗದಲ್ಲಿ ತೆರಳುವ ವಾಹನಗಳು ಹಾಗೂ ಜನಸಂಚಾರಕ್ಕೆ ಈ ಸೇತುವೆಯು ಬಹುಮುಖ್ಯ ಸಂಪರ್ಕ ಸಾಧನವಾಗಿತ್ತು. ಆದರೆ, ದಶಕಗಳ ಕಾಲ ನಿಂತು ತನ್ನ ಮೇಲೆ ಲೆಕ್ಕವಿಲ್ಲದಷ್ಟು ವಾಹನಗಳು ಹಾಗೂ ಜನಸಂಚಾರಕ್ಕೆ ದಾರಿಯಾಗಿದ್ದ ಈ ಸೇತುವೆ ಕಾಲ ಕಳೆದಂತೆ ಸಹಜವಾಗಿ ಶಿಥಿಲವಾಗಿದ್ದು, ಬಂದೊದಗಬಹುದಾದ ಅಪಾಯದ ಮುನ್ಸೂಚನೆಯನ್ನು ನೀಡುತ್ತಾ ನಿಂತಿರುವುದಾಗಿ ಕನ್ನಡಪ್ರಭವರದಿಯೊಂದರ ಮೂಲಕ ಸಂಬಂಧಿಸಿದ ನೀರಾವರಿ ಇಲಾಖೆಯ ಗಮನಸೆಳೆಯಲಾಗಿತ್ತು.
ಮಾಹಿತಿ: ಈ ವರದಿಗೆ ಸೂಕ್ತವಾಗಿ ಸ್ಪಂದಿಸಿದ ಇಲ್ಲಿನ ನೀರಾವರಿ ಇಲಾಖೆಯು ಕೇವಲ 3.5ಮೀನಷ್ಟು ಅಗಲವಿದ್ದು, ಏಕಮುಖ ಸಂಚಾರಕ್ಕಷ್ಟೇ ಲಭ್ಯವಿದ್ದ ಹಳೆಯ ಹಾಗೂ ಶಿಥಿಲಗೊಂಡಿದ್ದ ಸೇತುವೆಯನ್ನು ತೆರವುಗೊಳಿಸಿ, ರು. 18 ಲಕ್ಷ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ 7.5 ಮೀ. ನಷ್ಟು ಅಗಲವಾದ ನೂತನ ಸೇತುವೆಯನ್ನು ನಿರ್ಮಿಸಲಾಗುತ್ತಿದೆ ಎಂದು ಇಲ್ಲಿನ ಕಾವೇರಿ ನೀರಾವರಿ ನಿಗಮದ ಸಂಬಂಧಿಸಿದ ಎಂಜಿನಿಯರ್ ರಾಜೇಶ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಕಡೆಗೂ ಅಪಾಯದ ಭೀತಿಯಲ್ಲಿಯೇ ಸೇತುವೆಯನ್ನು ಹಾದು ಹೋಗುತ್ತಿದ್ದ ವಾಹನಗಳು ಇನ್ನು ಮುಂದೆ ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ದ್ವಿಮುಖ ಸಂಚಾರಕ್ಕೆ ಲಭ್ಯವುಳ್ಳ ನೂತನ ಸೇತುವೆಯ ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ಎಂಜಿನಿಯರ್ ರಾಜೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.