ಹಾಸನ

ಬಿತ್ತನೆ ಆಲೂ ದರ ಇಳಿಕೆಗೆ ಒತ್ತಾಯಿಸಿ ರೈತರ ಧರಣಿ

Published On :

ಕನ್ನಡಪ್ರಭ ವಾರ್ತೆ, ಹಾಸನ, ಮೇ 9
ಬಿತ್ತನೆ ಆಲೂಗಡ್ಡೆ ಬೆಲೆಯನ್ನು ಇಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ರೈತರ ಜೀವನಾಡಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಾದ ಬಿತ್ತನೆ ಆಲೂಗಡ್ಡೆ ದರ ಏರಿಕೆ, ಅಂಗಮಾರಿ ರೋಗ, ಅತಿವೃಷ್ಟಿ, ಅನಾವೃಷ್ಟಿ, ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆ, ಕಾಡು ಪ್ರಾಣಿಗಳ ಹಾವಳಿ, ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಡಿಮೆ ದರದಲ್ಲಿ ಮಾರಾಟ ಮಾಡಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಗಮನಹರಿಸಿಲ್ಲ: ಜಿಲ್ಲೆಯ ರೈತರ ಈ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತವಾಗಲಿ, ರಾಜ್ಯ ಸರ್ಕಾರವಾಗಲಿ ಇದುವರೆಗೂ ಗಂಭೀರ ಪ್ರಯತ್ನ ನಡೆಸಿಲ್ಲ. ಆಲೂಗಡ್ಡೆ ಬೀಜ ಮತ್ತು ಬೆಳೆಯ ಖಾಸಗೀ ದಾಸ್ತಾನು ಮತ್ತು ವ್ಯಾಪಾರಿಗಳ ಲಾಭಿ ಹೆಚ್ಚಾಗಿದ್ದು ಇದರಿಂದ ರೈತರು ಆಲೂಗಡ್ಡೆ ಬೆಳೆ ಕೈಬಿಟ್ಟು ಅನಿವಾರ್ಯವಾಗಿ ಶುಂಠಿ, ಮತ್ತಿತರ ವಾಣಿಜ್ಯ ಬೆಳೆಗಳ ಕಡೆ ಗಮನಹರಿಸುತ್ತಿದ್ದಾರೆ. ಇನ್ನೊಂದೆಡೆ ಕೃಷಿಯನ್ನೇ ಬಿಡುವಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ಸಿಕ್ಕಿಲ್ಲ: ಕಳೆದ ವರ್ಷ ಜಿಲ್ಲೆಯ ಸುಮಾರು 13 ಸಾವಿರ ರೈತರು ಬೆಲೆ ವಿಮೆ ಮಾಡಿಸಿ ರು. 3.5 ಕೋಟಿಯಷ್ಟು ಹಣ ಪಾವತಿಸಿದ್ದರು. ಆದರೆ, ಪರಿಹಾರ ಪಡೆದ ರೈತರ ಸಂಖ್ಯೆ ಕೇವಲ 4 ಸಾವಿರದಷ್ಟು. ಅವರು ಪಡೆದ ಪರಿಹಾರದ ಮೊತ್ತ ಕೇವಲ ರು. 85 ಲಕ್ಷ ಮಾತ್ರ. ಉಳಿದ ರೈತರಿಗೆ ಇದುವರೆಗೂ ಬೆಳೆ ಪರಿಹಾರ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿದರು.




ದೂರು
ಹಲವು ವರ್ಷಗಳಿಂದ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ತಗಲುತ್ತಿದ್ದರೂ ರೋಗವನ್ನು ತಡೆಗಟ್ಟಲು ಸಂಬಂಧಪಟ್ಟ ಕೃಷಿ ಇಲಾಖೆಯಿಂದ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದಿರುವುದು ಇಲಾಖೆಯ ಅದಕ್ಷತೆಯನ್ನು ಸೂಚಿಸುತ್ತದೆ ಎಂದು ದೂರಿದರು.  ಆದ್ದರಿಂದ ಆಲೂಗಡ್ಡೆ ಬೆಳೆಯುತ್ತಿರುವ ರೈತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.