ಹಾಸನ

ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ಕುಂಬಾರ ಸಮಾಜ ವಿಫಲ

Published On :

ಕ.ಪ್ರ. ವಾರ್ತೆ ಅರಸೀಕೆರೆ ಮೇ 10
ಗುಡಿ ಕೈಗಾರಿಕೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿರುವ ಕುಂಭಾರ ಸಮಾಜ ಸಂಘಟನೆಯಿಲ್ಲದ ಕಾರಣ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಚಿತ್ರದುರ್ಗ ಕುಂಬಾರ ಗುರುಪೀಠದ ಬಸವ ಕುಂಭಾರ ಗುಂಡಯ್ಯ ಸ್ವಾಮೀಜಿ ವಿಷಾದಿಸಿದರು.
ಪಟ್ಟಣದ ಚನ್ನಕೇಶವ ದೇವಾಲಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಕುಂಬಾರ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಹಿಂದೆ ಕುಂಭಾರ ಕೂಡಿಕೆಟ್ಟ ಎಂಬ ಗಾದೆಯಿತ್ತು. ಆದರೆ ಇಂದು ನಮ್ಮಲ್ಲಿ ಒಗ್ಗಟ್ಟಿಲ್ಲದೇ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದೆ ಉಳಿಯಲು ಕಾರಣ ಎಂದರು.
ಸಮಾಜದ ಕಣ್ಣು ತೆರೆದಿದೆ: ಕೋಲಾರದ ಮಾಲೂರಿನಲ್ಲಿ ಕುಂಬಾರ ಸಮಾಜ ಸಂಘಟನಾತ್ಮಕವಾಗಿರುವುದರಿಂದ ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಬಸವೇಶ್ವರ ದೇವಾಲಯ ಹಾಗೂ ಬೃಹತ್ ಸಮುದಾಯ ಭವನವನ್ನು ನಿರ್ಮಾಣ ಮಾಡಿದೆಯಲ್ಲದೇ 2000ಕ್ಕೂ ಹೆಚ್ಚು ಜನ ಸೇರಿ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಇತರೆ ಸಮಾಜದ ಕಣ್ಣು ತೆರೆಯುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರತಿಭಾವಂತರನ್ನು ಪುರಸ್ಕರಿಸಿ: ಪಟ್ಟಣದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ಒಂದು ನಿವೇಶನವನ್ನು ನೀಡಿದ್ದು ನೀವು ಸಂಘಟನಾತ್ಮಕವಾಗಿ ಹೋರಾಟ ಮಾಡಿ ಸಂಘಟನಾತ್ಮಕವಾಗಿ ಒಂದಾದರೆ ಸುಸಜ್ಜಿತ ಸಮುದಾಯ ಭವನವನ್ನು ನಿರ್ಮಾಣ ಮಾಡಬಹುದು. ತಾಲ್ಲೂಕಿನಲ್ಲಿರುವ ಸಮಾಜದ ಎಲ್ಲ ಬಾಂಧವರ ನಡುವೆ ನಿಕಟ ಸಂಪರ್ಕವನ್ನು ಹೊಂದಬೇಕು ಹಾಗೂ ಸಮಾಜದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಉತ್ತೇಜನ ನೀಡಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕುಂಭಾರ ಸಮಾಜದ ಅಧ್ಯಕ್ಷ ಕೆ.ಆರ್.ದಯಾನಂದ್, ಗೌರವಾಧ್ಯಕ್ಷ ಪಾಪಣ್ಣ, ಉಪಾಧ್ಯಕ್ಷ ಪೃಥ್ವಿಕುಮಾರ್, ಓಂಕಾರಪ್ಪ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಕೇಶವಮೂರ್ತಿ, ತಿಮ್ಮಪ್ಪ, ಚನ್ನಪ್ಪ, ಖಜಾಂಚಿಗಳಾದ ಎಂ. ಕೃಷ್ಣ, ಅಜ್ಜನಹಳ್ಳಿ ಮಹೇಶ್ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.