ಗೂಳಿಗೆ ಗುದ್ದು, 'ಕೈ'ಗೆ ಮದ್ದು, ಗೌಡ್ರುಗೆ ಮುದ್ದು
ದಯಾಶಂಕರ ಮೈಲಿ
ಕ.ಪ್ರ.ವಾರ್ತೆ ಹಾಸನ ಮೇ 16
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸಲೇಬೇಕೆಂಬ ಕಾಂಗ್ರೆಸ್ನ ಅಹಿಂದ ತಂತ್ರ ಮತ್ತು ರಾಜ್ಯ ಸರ್ಕಾರ ಅಧಿಕಾರದ ಬಲ ಫಲಿಸಲಿಲ್ಲ. ಅಲ್ಲದೆ, ದೇಶಾದ್ಯಂತ ನರೇಂದ್ರ ಮೋದಿ ಮೋಡಿ ನಡೆದರೂ, ಹಾಸನದಲ್ಲಿ ಮಾತ್ರ ಅದು ನಡೆಯಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಸನ ಟಾರ್ಗೆಟ್ ಸಾಧನೆಯೂ ಆಗಲಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮತ್ತಿತರೆ ನಾಯಕರು, ಗೌಡರನ್ನು ಸೋಲಿಸಲು ಹೂಡಿದ ಅಹಿಂದ ತಂತ್ರ ಮತ್ತು ಅಡಳಿತದ ಬಲ ಪ್ರಯೋಜನಕಾರಿಯಾಗಲಿಲ್ಲ. ಮೋದಿ ಮೋಡಿ ಕೂಡ ಯಶಸ್ವಿಯಾಗಲಿಲ್ಲ. ಅಹಿಂದ ತಂತ್ರ, ಅಧಿಕಾರ ಬಲ ಮತ್ತು ಮೋದಿ ಮೋಡಿ ಇದ್ಯಾವುದನ್ನು ಲೆಕ್ಕಿಸದೆ ಹಾಸನ ಮತದಾರ ಎಂದಿನಂತೆ ಗೌಡರಿಗೆ ತಮ್ಮ ಒಲವು ಧಾರೆ ಎರೆದಿದ್ದಾರೆ. ಗೌಡರು 1,00,462 ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ
ಕಾಂಗ್ರೆಸ್ ಅಭ್ಯರ್ಥಿ ಮಂಜು ಅವರನ್ನು ಮಣಿಸಿದ್ದಾರೆ. ದೇವೇಗೌಡರು 5,09,841 ಮತಗಳನ್ನು ಪಡೆದರೆ, ಎ.ಮಂಜು 4,09,379 ಓಟು ಗಳಿಸಿದರೆ, ಬಿಜೆಪಿಯ ಸಿ.ಎಚ್. ವಿಜಯಶಂಕರ್ಗೆ 1,65,688 ಲಭಿಸಿವೆ.
ಗೂಳಿಯನ್ನು ಬಿಟ್ಟುಕೊಳ್ಳಲಿಲ್ಲ...
ಹಾಸನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತಿತರರು, ಹಾಸನಕ್ಕೆ ಡಿ.ಕೆ. ಶಿವಕುಮಾರ್ ಎಂಬ ಗೂಳಿಯನ್ನು ಬಿಟ್ಟಿದ್ದೇವೆ. ಇದು ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಲಿದೆ ಎಂದು ಸವಾಲು ಹಾಕಿದ್ದರು. ಆದರೆ ಜನರು ಗೂಳಿಯನ್ನು ಒಳಗೂ ಬಿಟ್ಟುಕೊಳ್ಳಲಿಲ್ಲ. ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ನಮ್ಮ ಮುಂದಿನ ಟಾರ್ಗೆಟ್ ಹಾಸನ ಎಂದು ಘೋಷಣೆ ಮಾಡಿದ್ದರು. ಆದರೆ, ಕಾಂಗ್ರೆಸ್ ಟಾರ್ಗೆಟ್ ಠುಸ್ ಪಟಾಕಿ ಆಯಿತು. ದೇವೇಗೌಡರು ಗೆದ್ದರು. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು (ಅಹಿಂದ ಮತದಾರರು) ಜಾಗೃತರಾಗಿ ಮತ ಚಲಾಯಿಸಬೇಕು ಎಂದು ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದರು. ಅಲ್ಲದೆರಾಜ್ಯ ಸರ್ಕಾರದ ಆಡಳಿತ ಬಲ ಕೂಡ ಕಾಂಗ್ರೆಸ್ ಅಭ್ಯರ್ಥಿಯ ಗೆಲವಿಗೆ ಸಹಾಯಕವಾಗಲಿಲ್ಲ. ಕಾಂಗ್ರೆಸ್ ನಾಯಕರು ಆಯಾ ಕಟ್ಟಿನ ಸ್ಥಳದಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು. ಇದರಿಂದಲೂ ಗೆಲವು ಸಾಧ್ಯವಾಗಿಲ್ಲ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.
ಪುನರಾರ್ವತನೆಯಾಗಲಿಲ್ಲ...
ಕಾಂಗ್ರೆಸ್ ನಾಯಕರು, ಹಾಸನ ಜಿಲ್ಲೆಯಲ್ಲಿ 1999ರ ಲೋಕಸಭೆ ಚುನಾವಣೆ ಫಲಿತಾಂಶ ಪುನರಾರ್ವತನೆಯಾಗುವುದು ಸೂರ್ಯ, ಚಂದ್ರರಷ್ಟೆ ಸತ್ಯ ಎಂದು ಹೇಳಿದ್ದರು.1999ರಲ್ಲಿ ಗೌಡರು ಸೋಲಿನ ಕಹಿ ಅನುಭವಿಸಿದ್ದರು. ಆದರೆ, 2009ರ ಚುನಾವಣೆ ಫಲಿತಾಂಶವೇ ಪುನರಾರ್ವತನೆಗೊಂಡು, ಗೌಡರು ಜಯಭೇರಿ ಬಾರಿಸಿದ್ದಾರೆ.
ಸಾಮಾನ್ಯ ಗೆಲವಲ್ಲ...
ಕಳೆದ ಚುನಾವಣೆಗೆ ಹೋಲಿಸಿದರೇ ದೇವೇಗೌಡರ ಗೆಲವಿನ ಅಂತರ ತೀರ ಕಡಿಮೆಯಾಗಿದೆ. ಆದರೆ ಇದನ್ನು ಜೆಡಿಎಸ್ ಒಪ್ಪುತ್ತಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಗೌಡರ ಗೆಲವಿನ ಅಂತರ ದೊಡ್ಡದೇ. ದೇಶದಲ್ಲಿ ಮೋದಿ ಆಲೆ, ಕಾಂಗ್ರೆಸ್ಗೆ ಆಡಳಿತದ ಬೆಂಬಲವಿತ್ತು. ಹಣದ ಹೊಳೆಯನ್ನೇ ಹರಿಸಲಾಗಿತ್ತು. ಇವೆಲ್ಲವನ್ನು ಮೆಟ್ಟಿ ನಿಂತು ಗೌಡರು ಗೆದ್ದಿರುವುದು ಸಾಮಾನ್ಯ ಸಂಗತಿಯಲ್ಲ ಎಂಬುದು ಚರ್ಚಿತ ವಿಷಯ.
ಬಿಜೆಪಿಯವರು ಕಾಂಗ್ರೆಸ್ ಬೆಂಬಲಿಸಿದ್ದರು!
ಬಿಜೆಪಿ ಮುಖಂಡರಾದ ವಿಧಾನಪರಿಷತ್ಸ್ದಸ್ಯ ಬಿ.ಬಿ. ಶಿವಪ್ಪನವರು, ಹಾಸನ ಅಭ್ಯರ್ಥಿಯನ್ನು ತಮ್ಮೊಡನೆ ಚರ್ಚಿಸದೇ ಹೂಡಲಾಗಿದೆ. ಇದು ಸರಿಯಲ್ಲ. ನಾನು ಯಾರನ್ನು ಓಟು ಕೇಳಲ್ಲ. ಪ್ರಚಾರ ಮಾಡಲ್ಲ. ಕಾಂಗ್ರೆಸ್ ಅಭ್ಯರ್ಥಿ ಮಂಜು ಉತ್ತಮ ಸ್ನೇಹಿತರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ವಾದಿಸಿದ್ದರು. ಆದರೂ ಮಂಜು ಗೆಲವು ಸಾಧ್ಯವಾಗಲಿಲ್ಲ.
ಇದು ಹ್ಯಾಟ್ರಿಕ್ ಗೆಲವು
ದೇವೇಗೌಡರು 2004, 2009 ಮತ್ತು 2014 ರಲ್ಲಿ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆಗೈದಿದ್ದಾರೆ. ಅಲ್ಲದೆ, ಗೌಡರಿಗೆ ಇದು 5 ನೇ ಗೆಲವು. 1991, 1998, 2004, 2009 ಮತ್ತು 2014 ರಲ್ಲಿ ಗೌಡರು ಗೆದ್ದಿದ್ದಾರೆ. 1999 ರಲ್ಲಿ ಒಮ್ಮೆ ಸೋಲು ಕಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

