ಹಾಸನ

ಸೆ.25 ರಿಂದ ರಂಭಾಪುರಿ ದಸರಾ ಸಮ್ಮೇಳನ

Published On :

ಅರಸೀಕೆರೆ: ರಂಭಾಪುರಿ ಪೀಠದ ದಸರಾ ಧರ್ಮ ಸಮ್ಮೇಳನ ಸೆ.25 ರಿಂದ ಅ.4ರವರೆಗೆ ಪಟ್ಟಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
 ಕಾರ್ಯಕ್ರಮದ ಯಶಸ್ಸಿಗೆ ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರೂ ಸಹಕಾರ ನೀಡಬೇಕೆಂದು ಬಾಳೆಹೊನ್ನೂರು ಪ್ರಸನ್ನ ರೇಣುಕಾ ವೀರಸೋಮೇಶ್ವರ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.   
 ಈ ವರ್ಷದ ದಸರಾ ಧಾರ್ಮಿಕ ಸಮ್ಮೇಳನಕ್ಕಾಗಿ ಒಂದು ವರ್ಷದ ಮೊದಲೇ ಆಮಂತ್ರಣ ನೀಡಿದ ಮೊದಲಿಗರೆಂದರೆ ಅದು ಅರಸೀಕೆರೆಯವರೇ. ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಜಿ.ಎಸ್.ಪರಮೇಶ್ವರಪ್ಪ ಹಾಗೂ ಪೀಠಾಭಿಮಾನಿಗಳು ದಸರಾ ಧಾರ್ಮಿಕ ಸಮ್ಮೇಳನವನ್ನು ಅರಸೀಕೆರೆಯಲ್ಲಿಯೇ ನಡೆಸುವಂತೆ ಆಮಂತ್ರಣ ನೀಡಿದ್ದು ಈ ಸಮ್ಮೇಳನ ತಾಲೂಕಿನ ಇತಿಹಾಸದ ನೆನಪಿನಲ್ಲಿ ಉಳಿಯುವಂತಹ ಧಾರ್ಮಿಕ ಕಾರ್ಯಕ್ರಮವಾಗುತ್ತದೆ ಎಂಬ ಆತ್ಮವಿಶ್ವಾಸವಿದೆ ಎಂದರು.
 ಆಧುನಿಕ ಜಗತ್ತಿನಲ್ಲಿ ಸತ್ಯ, ಧರ್ಮ, ಆದರ್ಶ ಉಳಿಸಿಕೊಂಡು ಬದುಕು ಸಾಗಿಸುವುದು ಸುಲಭದ ಮಾತಲ್ಲ. ಆದರೂ ಸಮಾಜದಲ್ಲಿ ಸತ್ಯ, ಧರ್ಮಗಳು ಅಳಿಸಿ ಪರೋಪಕಾರ ಮರೆತರೆ ಮುಂದಿನ ದಿನಗಳು ಆತಂಕಕಾರಿಯಾಗಿರುತ್ತದೆ ಎಂದ ಅವರು, ರಂಭಾಪುರಿ ಪೀಠದ ಮೇಲೆ ತಾಲೂಕಿನ ಜನತೆ ಇಟ್ಟಿರುವ ಅಭಿಮಾನ ಅಗಾಧವಾದದ್ದು ಎಂದು ತಿಳಿಸಿದರು.
ಅವಿನಾಭಾವ ಸಂಬಂಧ: ಅರಸೀಕೆರೆ ಭಕ್ತರೊಂದಿಗೆ ಶ್ರೀಮಠ ಅವಿನಾಭಾವ ಸಂಬಂಧ ಹೊಂದಿದ್ದು ಸಮಾಜದ ಅಭಿವೃದ್ಧಿಗೆ ಎಷ್ಟು ಸ್ಪಂದಿಸಲು ಸಾಧ್ಯವೋ ಅಂತಹ ಒಳ್ಳೆಯ ಕೆಲಸವನ್ನು ಮಾಡಿಕೊಂಡು ಬರಲಾಗಿದ್ದು, ಪಟ್ಟಣದಲ್ಲಿ ನಡೆಯಲಿರುವ 23ನೇ ದಸರಾ ಧಾರ್ಮಿಕ ಸಮ್ಮೇಳನ ಜಾತ್ಯತೀತ, ಪಕ್ಷಾತೀತವಾಗಿ ಎಲ್ಲರೂ ಸಾಮರಸ್ಯದಿಂದ ಕಾರ್ಯನಿರ್ವಹಿಸುವ ಮೂಲಕ ದಸರಾ ಕಾರ್ಯಕ್ರಮ ಇತಿಹಾಸ ನಿರ್ಮಿಸುವಂಥ ಕಾರ್ಯಕ್ರಮವಾಗಬೇಕು ಎಂದು ತಿಳಿಸಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ತಾಲೂಕಿನ ಎಲ್ಲ ಜನರ ಅಪೇಕ್ಷೆಯಂತೆ ಮುಖಂಡರೊಂದಿಗೆ ಹೋಗಿ ದಸರಾ ಧಾರ್ಮಿಕ ಸಮ್ಮೇಳನ ನಡೆಸಲು ಅನುಮತಿ ಪಡೆಯಲಾಗಿದ್ದು ಈ ಮಹೋತ್ಸವ ಹಿಂದೆ ರಾಜ್ಯದಲ್ಲಿ ನಡೆದಿರುವ ಎಲ್ಲಾ ದಸರಾ ಧಾರ್ಮಿಕ ಸಮಾರಂಭಗಳನ್ನು ಮೀರಿಸುವಂತಹ ಇತಿಹಾಸವನ್ನು ನಿರ್ಮಾಣ ಮಾಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಜಗದ್ಗುರುಗಳ ದಸರಾ ಮಹೋತ್ಸವ ನಮ್ಮ ತಾಲೂಕಿನಲ್ಲಿ ನಡೆಯುತ್ತಿರುವುದೇ ಶುಭಸೂಚನೆಯಾಗಿದ್ದು ಇತಿಹಾಸ ಸೃಷ್ಟಿಸುವಂತಹ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದ್ದು, ನಾನು ಶಾಸಕನಾಗಿರುವ ಅವಧಿಯಲ್ಲಿ ನಡೆಯುತ್ತಿರುವುದು ನನ್ನ ಭಾಗ್ಯ. ಧಾರ್ಮಿಕ ತಳಹದಿಯಲ್ಲಿ ನಂಬಿಕೆ ಉಳ್ಳವನಾಗಿದ್ದು, ಬಸವಾದಿ ಪ್ರಮುಖರ ತತ್ವ-ಆದರ್ಶ ಮೈಗೂಡಿಸಿಕೊಂಡಿರುವುದಾಗಿ ತಿಳಿಸಿದರು. ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಜಿ.ಎಸ್.ಪರಮೇಶ್ವರಪ್ಪ, ಎ.ಎಸ್.ಬಸವರಾಜು ಮಾತನಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.