ಮದುವೆ ಊಟ ಮಾಡಿ 50 ಮಂದಿ ಅಸ್ವಸ್ಥ
ಹೊಳೆನರಸೀಪುರ: ಗ್ರಾಮದಲ್ಲಿನ ಮದುವೆ ಮನೆಯೊಂದರಲ್ಲಿ ಊಟ ಮಾಡಿದ ವಧು-ವರನ ಕಡೆಯ ಸುಮಾರು 50ಕ್ಕು ಹೆಚ್ಚು ಜನರಿಗೆ ವಾಂತಿ ಕಾಣಿಸಿಕೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ದಾಳಗೌಡನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ನರಸನಹಳ್ಳಿಯ ವರನಿಗೂ ತಾಲೂಕಿನ ದಾಳಗೌಡನಹಳ್ಳಿಯ ಸಣ್ಣಯ್ಯ ಎಂಬುವವರ ಪುತ್ರಿಯ ಮದುವೆ ಭಾನುವಾರ ಗ್ರಾಮದಲ್ಲಿ ನಡೆದಿತ್ತು. ಈ ಮದುವೆಯಲ್ಲಿ ಊಟ ಮಾಡಿದ ನಂತರ ಸಂಜೆಯ ವೇಳೆಗೆ 15ಕ್ಕೂ ಹೆಚ್ಚು ಮಕ್ಕಳೂ ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ಇದ್ದಕ್ಕಿದ್ದಂತೆಯೇ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗತೊಡಗಿದ್ದಾರೆ. ಕೂಡಲೇ ಅಸ್ವಸ್ಥರಾದವರನ್ನು ಗ್ರಾಮಸ್ಥರು ಹತ್ತಿರದಲ್ಲಿದ್ದ ದೊಡ್ಡಕಾಡನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ.
ಇಲ್ಲಿಯೂ ವಾಂತಿ ಹತೋಟಿಗೆ ಬಾರದೇ ತೀವ್ರ ಅಸ್ವಸ್ಥರಾದವರನ್ನು ಅಲ್ಲಿನ ವೈದ್ಯ ಡಾ. ಸಿದ್ದೇಗೌಡ ಅವರು ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಕೂಡಲೇ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ಡಾ. ವೆಂಕಟರಾಮು ಹಾಗೂ ವೈದ್ಯರು ಮತ್ತು ಶುಶ್ರೂಷಕಿಯರ ತಂಡವು ಪ್ರಥಮ ಚಿಕಿತ್ಸೆ ನೀಡಿದ್ದಲ್ಲದೇ, ಅವಶ್ಯಕವಾದ ಚಿಕಿತ್ಸೆಯನ್ನೂ ವೈದ್ಯರ ಸಲಹೆ ಮೇರೆಗೆ ನೀಡಿದರು.
ಕಳೆದ ಎರಡು ದಿನಗಳ ಹಿಂದೆಯೂ ಕೂಡ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿಯೂ ಊಟ ಮಾಡಿದ್ದ ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗಿರಲಿಲ್ಲ, ಆದರೆ ಇಂದು ನಡೆದ ಮದುವೆ ಸಮಾರಂಭದಲ್ಲಿ ಊಟ ಮಾಡಿದ ನಂತರ ವಾಂತಿ ಕಾಣಿಸಿಕೊಂಡಿರುವುದರಿಂದ ಇದು ಪಾತ್ರೆಯ ಅಥವಾ ಆಹಾರದಿಂದ ಉಂಟಾದ ತೊಂದರೆಯಲ್ಲ ಎಂದು ಗ್ರಾಮದ ಕೆಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮದುವೆಗೆಂದು ಪಕ್ಕದ ಶೆಟ್ಟರಕೊಪ್ಪಲು ಗ್ರಾಮದಿಂದ ಟ್ಯಾಂಕರ್ನಲ್ಲಿ ನೀರು ತರಿಸಲಾಗಿತ್ತು, ಪ್ರಾಯಶಃ ನೀರಿನ ವ್ಯತ್ಯಾಸದಿಂದ ವಾಂತಿ ಕಾಣಿಸಿಕೊಂಡಿರಬಹುದೆಂದೂ ಕೂಡ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ವಧುವಿನ ಕಡೆಯ ದಾಳಗೌಡನಹಳ್ಳಿಯವರಿಗಷ್ಟೇ ಅಲ್ಲದೇ, ವರನ ಕಡೆಯವರು ತಮ್ಮ ನರಸನಹಳ್ಳಿ ಗ್ರಾಮಕ್ಕೆ ತೆರಳಿದ ನಂತರ ಸಂಜೆ ವೇಳೆಗೆ ಅಲ್ಲಿಯೂ ಸುಮಾರು 40ಕ್ಕೂ ಹೆಚ್ಚು ಜನರಿಗೆ ವಾಂತಿ ಕಾಣಿಸಿಕೊಂಡು ಅವರನ್ನು ಕೆ.ಆರ್.ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್.ರಾಜೇಶ್ ಅವರು ಅಸ್ವಸ್ಥರಾದವರ ಆರೋಗ್ಯವನ್ನು ವಿಚಾರಿಸಿ, ಮದುವೆಯಲ್ಲಿನ ಆಹಾರ ಮತ್ತು ಸರಬರಾಜಾಗಿರುವ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿ ವರದಿ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

