ಐವರು ಕುಖ್ಯಾತ ಮನೆಗಳ್ಳರ ಸೆರೆ
ಕ.ಪ್ರ. ವಾರ್ತೆ ಹಾಸನ ಮೇ 19
ಮನೆಗಳವು ಮಾಡುತ್ತಿದ್ದ ಐವರನ್ನು ಬಂಧಿಸಿ ಅವರಿಂದ 20 ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಸ್ಪಿ ರವಿ ಡಿ. ಚನ್ನಣ್ಣನವರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಳೆನರಸೀಪುರ ಉಪವಿಭಾಗದ ಪೊಲೀಸರ ಕಾರ್ಯಾಚರಣೆ ಮೂಲಕ ಐವರು ಆರೋಪಿಗಳು ಹಾಗೂ 679 ಗ್ರಾಂ ಚಿನ್ನಾಭರಣ, 58 ಗ್ರಾಂ ನ ಬೆಳ್ಳಿಯ ಆಭರಣ, 1 ಬಜಾಜ್ ಆಟೋ ರಿಕ್ಷಾ ಒಳಗೊಂಡಂತೆ 20 ಲಕ್ಷ ರು.ಗಳ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಹಾಸನ ತಾಲೂಕಿನ ದುದ್ದ ಹೋಬಳಿಯ ಚಿಗಟಹಳ್ಳಿ ಗ್ರಾಮದ ರಂಗಸ್ವಾಮಿ (25), ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಲ್ಲಿಕಾ (27), ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಿತ್ತಲಹಳ್ಳಿ ಗ್ರಾಮದ ಲಕ್ಷ್ಮಣ್, ರಾಮನಗರದ ಗೆಜ್ಜಲಗುಡ್ಡೆಯ ಸೈಯಾದ್ (22) ಮತ್ತು ಆಲೂರು ತಾಲೂಕಿನ ಮುದಿಗೆರೆ ಗ್ರಾಮದ ಸಂತೋಷ್ (26) ಎಂಬುವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಚನ್ನರಾಯಪಟ್ಟಣ ಗಾಯತ್ರಿ ಬಡಾವಣೆ ವಾಸಿ ಎನ್.ಕೆ. ಚಂದ್ರಶೇಖರ್ ಅವರ ಪತ್ನಿ ಅನುಪಮ ಅವರು ಮದುವೆ ಮುಗಿಸಿಕೊಂಡು ಬಸ್ ನಿಲ್ದಾಣದ ಹತ್ತಿರ ಆಟೋಗಾಗಿ ಕಾಯುತ್ತಿದ್ದಾಗ ಅಪರಿಚಿತ ವ್ಯಕ್ತಿ ಅನುಪಮ ಅವರ ಕೊರಳಿಗೆ ಕೈ ಹಾಕಿ 2,20 ಲಕ್ಷ ರು. ಮೌಲ್ಯದ 80 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಗಳನ್ನು ನಮ್ಮ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಹೊಳೆನರಸೀಪುರ ಪಟ್ಟಣದ ಕಿಕ್ಕೆರಮ್ಮನ ಕೊತ್ತಲಿನ ವಾಸಿ ಮಾಲತಿ ಎಂಬವರು ಮನೆಗೆ ಬೀಗ ಹಾಕಿಕೊಂಡು ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಮನೆ ಬಾಗಿಲನ್ನು ಹೊಡೆದು ಒಳ ನುಗ್ಗಿ ಬೀರುವಿನಲ್ಲಿ ಇದ್ದ ಸುಮಾರು 52 ಗ್ರಾಂ ನ ಚಿನ್ನಾಭರಣ, 58 ಗ್ರಾಂ ನ ಬೆಳ್ಳಿ ಆಭರಣವನ್ನು ಕಳವು ಮಾಡಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಆರೋಪಿಗಳಾದ ರಂಗಸ್ವಾಮಿ, ಮಲ್ಲಿಕಾ, ಲಕ್ಷ್ಮಣ್ ಮತ್ತು ಸೈಯದ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಬಂಧಿತರು
- ಹಾಸನ ತಾಲೂಕಿನ ಚಿಗಟಹಳ್ಳಿಯ ರಂಗಸ್ವಾಮಿ,
- ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಲ್ಲಿಕಾ,
- ಕುಣಿಗಲ್ ತಾಲೂಕಿನ ಹಿತ್ತಲಹಳ್ಳಿಯ ಲಕ್ಷ್ಮಣ್,
- ರಾಮನಗರದ ಗೆಜ್ಜಲಗುಡ್ಡೆಯ ಸೈಯಾದ್,
- ಆಲೂರು ತಾಲೂಕಿನ ಮುದಿಗೆರೆಯ ಸಂತೋಷ್
ಕ್ರಿಕೆಟ್ ಬೆಟ್ಟಿಂಗ್: ಒಬ್ಬನ ಬಂಧನ
ಆಲೂರು ತಾಲೂಕಿನ ಸಂತೋಷ್ (26) ಎಂಬ ಆರೋಪಿ ಟಿ 20 ಕ್ರಿಕೆಟ್ ವರ್ಲ್ದ್ಕಪ್ನಲ್ಲಿ ಬೆಟ್ಟಿಂಗ್ ಕಟ್ಟಿ 10 ಲಕ್ಷ ರು.ಗಳನ್ನು ಕಳೆದು ಕೊಂಡಿದ್ದ. ಜೂಜಿನಲ್ಲಿ ಸೋತ ಹಣವನ್ನು ತೀರಿಸಲು ಕಳವು ಪ್ರಾರಂಭಿಸಿದ್ದು, 17 ಲಕ್ಷ ರು.ಮೌಲ್ಯದ 588 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಈತ ಅರಕಲಗೂಡು ತಾಲೂಕಿನ ಬಸವಾಪಟ್ಟಣದಲ್ಲಿ ಅಜ್ಜಿ ಕೊರಳಿನಲ್ಲಿ ಇದ್ದ 2 ಎಳೆಯ ಚಿನ್ನದ ಸರ, ಹಾಸನದ ದುದ್ದ-ಅರಸೀಕೆರೆ ರಸ್ತೆಯಲ್ಲಿ ಇರುವ ಸಿದ್ದಾಪುರ ಗ್ರಾಮ ಮತ್ತು ವೇದಾವತಿ ಗ್ರಾಮದ 2 ಮನೆಯಲ್ಲಿ ಕಳವು, ಬೇಲೂರು ರಸ್ತೆಯ ಅಂಗಡಿಹಳ್ಳಿ ಗ್ರಾಮದ ಮನೆಯಲ್ಲಿ ಕಳವು, ಹೊಳೆನರಸೀಪುರ ತಾಲೂಕಿನ ಬಾಗೇವಾಳು ಗ್ರಾಮದ ಮನೆಯಲ್ಲಿ ಕಳವು, ಚಕ್ಕವಳ್ಳಿ ಗ್ರಾಮದ ಮನೆ, ಚನ್ನರಾಯಪಟ್ಟಣ ತಾಲೂಕಿನ ಗಂಡಸಿ ಹೋಬಳಿಯ ಮನೆ, ಆಲೂರು ತಾಲೂಕಿನ ಹನುಮನಹಳ್ಳಿಯ ಮನೆ, ಹಳೇಬೀಡು ಹೋಬಳಿಯ ಮಲ್ಲಾಪುರ ಗ್ರಾಮದ ಮನೆ, ಚಿಕ್ಕಮಗಳೂರಿನ ಮಾಗಡಿ ಕೈಮರದ ಹತ್ತಿರವಿರುವ ನಾಗರಹಳ್ಳಿ ಗ್ರಾಮದ ಮನೆ ಮತ್ತು ದುದ್ದ ಅರಸೀಕೆರೆಯ ಮನೆಗಳಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.
ಅಕ್ರಮ ಮರಳು ವಿರುದ್ಧ ಕ್ರಮ
ಸಕಲೇಶಪುರ ತಾಲೂಕಿನಲ್ಲಿ ಅಕ್ರಮ ಮರಳಿಗೆ ಸಂಬಂಧಿಸಿದಂತೆ ಪೊಲೀಸರು ಭಾಗಿಯಾಗಿದ್ದರೆ ಅಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಹೇಳಿದ ಎಸ್ಪಿ, ಬಿಜೆಪಿ ಮುಖಂಡ ಬಿ.ಕೆ. ಮಂಜು ಅಪರಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ತನಿಖೆಯ ದಾರಿ ತಪ್ಪಿಸುವಂತೆ ಕಾರ್ಯ ನಡೆಸಿದರೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಎಸ್ಪಿ ರಶ್ಮಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

