ಹಾಸನ

ಭೂಸ್ವಾಧೀನ ತೊಡಕು ನಿವಾರಿಸಿ

Published On :

ಹಾಸನ: ಮಂಗಳೂರಿನಿಂದ ಬೆಂಗಳೂರು ಮತ್ತು ಮೈಸೂರು ನಡುವಿನ ಉದ್ದೇಶಿತ ಎಲ್‌ಪಿಜಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಮುನ್ನ ಜಮೀನು ಬಳಕೆಗೆ ಸಂಬಂಧಿಸಿದಂತೆ ಇರುವ ಎಲ್ಲ ತೊಡಕುಗಳನ್ನು ಮುಂದಿನ 15 ದಿನಗಳಲ್ಲಿ ಪರಿಹರಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಬಿ.ಬಸವರಾಜು ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಧಾನ ಕಾರ್ಯದರ್ಶಿ ಬಸವರಾಜು ಅವರು, ಎಲ್‌ಪಿಜಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಇರುವ ತೊಡಕುಗಳ ನಿವಾರಣೆಗೆ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಭೂಸ್ವಾಧೀನಾದಿಕಾರಿಗಳು ಹಾಗೂ ಕೃಷಿ ತೋಟಗಾರಿಕೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಜಮೀನು ಹಸ್ತಾಂತರವಾಗದ ಗ್ರಾಮಗಳಲ್ಲಿ ವಿಶೇಷ ಕಂದಾಯ ಅದಾಲತ್ ನಡೆಸಿ ಸ್ಥಳದಲ್ಲಿ ಸಮಸ್ಯೆಯನ್ನು 15 ದಿನಗಳಲ್ಲಿ ಪರಿಹರಿಸಿ ಯೋಜನೆಯು ತ್ವರಿತ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮಂಗಳೂರು, ತುಮಕೂರು, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಶೇಷ ಭೂಸ್ವಾಧೀನಾಧಿಕಾರಿಗಳ ಪಾತ್ರ ಬಹು ಮುಖ್ಯವಾಗಿದ್ದು ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಜಿಲ್ಲಾ ಮಟ್ಟದಲ್ಲಿಯೇ ವಾಸ್ತವ್ಯ ಮಾಡಿ ಹೆಚ್ಚಿನ ಗಮನಹರಿಸಿ ರೈತರಿಗೆ ಪರಿಹಾರ
ಒದಗಿಸಲು ಕ್ರಮ ಕೈಗೊಳ್ಳುವಂತೆ ಬಸವರಾಜು ತಾಕೀತು ಮಾಡಿದರು.
ಹಾಸನ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮಾತನಾಡಿ, ರೈತರಿಗೆ ಭೂ ಸ್ವಾಧೀನಕ್ಕೆ ಪರಿಹಾರ ನೀಡುವುದರ ಜೊತೆಗೆ ಬೆಳೆ ನಷ್ಟಕ್ಕೂ ಪರಿಹಾರ ನೀಡಬೇಕಾಗಿದ್ದು, ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಇರುವ ತೊಡಕುಗಳನ್ನು ಒಂದು ವಾರದಲ್ಲಿ ಇತ್ಯರ್ಥ ಪಡಿಸಿಕೊಡುವುದಾಗಿ ತಿಳಿಸಿದರು. ಮಂಗಳೂರು ಜಿಲ್ಲಾಧಿಕಾರಿ, ತುಮಕೂರು ಜಿಲ್ಲಾಧಿಕಾರಿ ಚರ್ಚೆಯಲ್ಲಿ ಪಾಲ್ಗೊಂಡರು.
ಈಗಾಗಲೇ ರೈತರಿಗೆ ಪರಿಹಾರಕ್ಕಾಗಿ ರು.80 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಯೋಜನಾ ನಿರ್ದೇಶಕ ರವಿಚಂದ್ರನ್ ಸಭೆಗೆ ಮಾಹಿತಿ ನೀಡಿದರು.
ಮಂಗಳೂರು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಮೈಸೂರು ಪ್ರಭಾರ ಜಿಲ್ಲಾಧಿಕಾರಿ ಶಿವಾನಂದ್, ಹಾಸನ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಹೆಚ್ಚುವರಿ ಪೊಲೀಸ್ ಅಧಿಕಾರಿ ರಶ್ಮಿ, ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ ವೈಶಾಲಿ, ಕೃಷ್ಣಮೂರ್ತಿ, ತಹಸೀಲ್ದಾರ್ಗ್‌ಳು, ಜಂಟಿ ಕೃಷಿ ನಿರ್ದೇಶಕ ಬಿ.ಶಿವರಾಜು, ತೋಟಗಾರಿಕೆ ಉಪ ನಿರ್ದೇಶಕ ಶಕೀಲ್ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.
ಏನದು ಪೈಪ್‌ಲೈನ್ ಯೋಜನೆ?  
ಮಂಗಳೂರಿನಿಂದ ಯಡಿಯೂರುವರೆಗೆ 254 ಕಿಮೀ ಹಾಸನದಿಂದ ಮೈಸೂರಿಗೆ 101 ಕಿಮೀ ಪೈಪ್‌ಲೈನ್ ಅಳವಡಿಸಲಾಗುತ್ತದೆ. ಯೋಜನ ವೆಚ್ಚ ರು.701 ಕೋಟಿ ಈ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 31 ಹಳ್ಳಿಗಳು, 93.121 ಕಿಮೀ ಚಿಕ್ಕಮಗಳೂರು ಜಿಲ್ಲೆಯ ಹತ್ತು ಹಳ್ಳಿಗಳು, 22.879 ಕಿಮೀ, ಹಾಸನ ಜಿಲ್ಲೆಯ 118 ಹಳ್ಳಿಗಳು 145.382 ಕಿಮೀ, ತುಮಕೂರು ಜಿಲ್ಲೆಯ 24 ಹಳ್ಳಿಗಳು 33.388 ಕಿಮೀ, ಮಂಡ್ಯ ಜಿಲ್ಲೆಯ 4 ಹಳ್ಳಿಗಳು 6.225 ಕಿಮೀ, ಮೈಸೂರು ಜಿಲ್ಲೆಯ 36 ಹಳ್ಳಿಗಳು 55.361 ಕಿಮೀನಲ್ಲಿ ಎಲ್‌ಪಿಜಿ ಪೈಪ್‌ಲೈನ್ ಹಾದು ಹೋಗುತ್ತದೆ. ಯೋಜನಾ ವೆಚ್ಚ ರು.701 ಕೋಟಿ ಗಳಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.