ಚನ್ನಕೇಶವ ದೇಗುಲದಲ್ಲಿ ಚಿತ್ರೀಕರಣಕ್ಕೆ ಆಕ್ಷೇಪ
ಕನ್ನಡಪ್ರಭ ವಾರ್ತೆ ಬೇಲೂರು ಮೇ 29
ಇದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯತನದ ಪರಮಾವಧಿ ಎಂದೇ ಹೇಳಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಇತಿಹಾಸ ಪ್ರಸಿದ್ದ ಬೇಲೂರು ದೇವಾಲಯವನ್ನು ಸಂರಕ್ಷಿಸಲು ಕೋಟಿಗಟ್ಟಲೇ ಹಣ ಸುರಿಯುತ್ತಿವೆ. ಆದರೆ ಇದು ಪ್ರಯೋಜನವಾಗುತ್ತಿಲ್ಲ ಎಂಬುದಕ್ಕೆ ದೇವಾಲಯದ ಆವರಣದಲ್ಲಿ ನಡೆದ ಘಟನೆಯೇ ಸಾಕ್ಷಿ.
ಇತಿಹಾಸ ಜಗತ್ ಪ್ರಸಿದ್ಧ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇವಾಲಯದ ಒಳ ಆವರಣದಲ್ಲಿ ಬುಧವಾರ ಸಂತೆಯ ವ್ಯಾಪಾರದ ಸನ್ನಿವೇಶವನ್ನೊಳಗೊಂಡ ಚಲನ ಚಿತ್ರವೊಂದರ ಚಿತ್ರೀಕರಣ ನಡೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ದೇವಾಲಯ ಆವರಣ ಕಸಕಡ್ಡಿಗಳಿಂದ ತುಂಬಿ ತುಳುಕುವಂತಾಗಿತ್ತು. ಇದನ್ನು ಖಂಡಿಸಿದ ಕರವೇ ಕಾರ್ಯಕರ್ತರು ಚಿತ್ರೀಕರಣಕ್ಕೆ ಕಡೆ ಒಡ್ಡಿದರು.
ಬೆಂಗಳೂರಿನ ನಿಸರ್ಗ ಪ್ರೊಡಕ್ಷನ್ನ 'ಪ್ರೇಮ ಪಲ್ಲಕ್ಕಿ' ಚಿತ್ರದ ಚಿತ್ರೀಕರಣ ದೇವಾಲಯದ ಒಳ ಆವರಣದೊಳಗೆ ನಿನ್ನೆಯಿಂದ ನಡೆಯುತ್ತಿತ್ತು. ಇಂದು ದೇಗುಲದ ಒಳ ಆವರಣದ ಕಪ್ಪೆ ಚನ್ನಿಗರಾಯ ದೇಗುಲದ ಮುಂಭಾಗ ಸಂತೆ ವ್ಯಾಪಾರದ ಸನ್ನಿವೇಶದ ದೃಶ್ಯದ ಚಿತ್ರೀಕರಣಕ್ಕೆ ಸಿದ್ದತೆ ನಡೆದಿತ್ತು. ಇದಕ್ಕಾಗಿ ಬಟ್ಟೆ ಅಂಗಡಿ, ಪುರಿ ಬೋಂಡದ ಅಂಗಡಿ, ಟೊಪ್ಪಿಗಳ ಮಾರಾಟದ ಅಂಗಡಿಯ ಜತೆ ಐಸ್ಕ್ರೀಮ್, ಬಲೂನ್, ಕೊಳಲು ಮಾರಾಟದ ವ್ಯಾಪಾರಿಗಳು ತಮ್ಮ ಸರಕುಗಳ ಜೋಡಣೆಯಲ್ಲಿ ತೊಡಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಸಭೆ ಸದಸ್ಯ ಶ್ರೀನಿಧಿ, ಕರವೇ ಅಧ್ಯಕ್ಷ ಚಂದ್ರಶೇಖರ್ ಇನ್ನಿತರ ಕಾರ್ಯಕರ್ತರು ಹಾಗೂ ಕೆಲ ಸ್ಥಳೀಯರು ದೇಗುಲದ ಒಳ ಆವರಣದಲ್ಲಿ ಚಿತ್ರೀಕರಿಸುತ್ತಿರುವುದಕ್ಕೆ ಆಕ್ಷೇಪಿಸಿದರು.
ಈ ವೇಳೆ ಚಿತ್ರೀಕರಣ ತಂಡದ ಸದಸ್ಯರು ಹಾಗೂ ಕರವೇ ಮತ್ತು ಪುರಸಭ ಸದಸ್ಯರ ನಡುವೆ ಮಾತಿನ ಚಕುಮಕಿ ನಡೆಯಿತು.
ಈ ಸಂದರ್ಭ ಚಿತ್ರೀಕರಣ ತಂಡದ ಪ್ರಮುಖರು ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿ ತಂದಿರುವುದಾಗಿ ತಿಳಿಸಿ ಅನುಮತಿ ಪತ್ರ ನೀಡಿದರು.
ಅನುಮತಿಪತ್ರ ಪಡೆದು ಓದಿದ ಪುರಸಭ ಸದಸ್ಯ ಶ್ರೀನಿಧಿ ಹಾಗೂ ಕರವೇ ಪ್ರಮುಖರು, ಈ ಪತ್ರದಲ್ಲಿ ಸಂತೆ ದೃಶ್ಯಕ್ಕೆ ಒಳ ಆವರಣದಲ್ಲಿ ಅಂಗಡಿಗಳ ಜೋಡಣೆಗೆ ಅವಕಾಶ ನೀಡಿರುವುದಾಗಿ ಎಲ್ಲಿಯೂ ಪ್ರಸ್ತಾಪವಿಲ್ಲ. ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ ಅಷ್ಟೆ. ಹಾಗೆಂದ ಮಾತ್ರಕ್ಕೆ ಎಲ್ಲಿ ಹೇಗೆ ಬೇಕಾದರೂ ಚಿತ್ರೀಕರಣ ಮಾಡುವುದಕ್ಕೆ ಸಾಧ್ಯವಿಲ್ಲ. ಅನುಮತಿ ಪತ್ರ ಇದೆ ಎಂದು ಮಾಂಸ, ಮೀನನ್ನೂ ತಂದು ವ್ಯಾಪಾರದ ದೃಶ್ಯ ಚಿತ್ರೀಕರಿಸಲು ಸಾಧ್ಯವೆ ಎಂದು ಪ್ರಶ್ನಿಸಿ ಅವಕಾಶ ನಿರಾಕರಿಸಿದರು.
ಈ ವೇಳೆ ಮಾತನಾಡಿದ ಪುರಸಭೆ ಸದಸ್ಯ ಶ್ರೀನಿಧಿ ಹಾಗೂ ಕರವೇ ಅಧ್ಯಕ್ಷ ಚಂದ್ರಶೇಖರ್, ಈವರಗೆ ಅನೇಕ ಚಿತ್ರೀಕರಣ ಒಳಗಡೆ ನಡೆದಿದೆ. ಆದರೆ, ಈ ರೀತಿ ಸಂತೆಯ ವ್ಯಾಪಾರದ ದೃಶ್ಯಕ್ಕೆ ಅಂಗಡಿಗಳನ್ನು ಇಡುವುದು ನಡೆದಿಲ್ಲ. ಇದು ಪೂಜಾ ದೇಗುಲವೂ ಆಗಿರುವುದರಿಂದ ಇದಕ್ಕೆ ಅವಕಾಶ ನೀಡುವುದಿಲ್ಲ. ಇಂತಹ ಸಂಪ್ರದಾಯ ಹುಟ್ಟುಹಾಕುವುದು ಸರಿಯಲ್ಲ. ಯಾವುದೆ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಪಟ್ಟು ಹಿಡಿದರು. ಈ ವೇಳೆ ಕೇಂದ್ರ ಪುರಾತತ್ವ ಇಲಾಖೆ ಉನ್ನತಾಧಿಕಾರಿಯೊಂದಿಗೆ ಪುರಸಭ ಸದಸ್ಯ ಶ್ರೀನಿಧಿ ದೂರವಾಣಿಯಲ್ಲಿ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಚಿತ್ರೀಕರಣ ತಂಡವು ಕೆಲವರ ಸಲಹೆಯಂತೆ ಸಂತೆ ದೃಶ್ಯಕ್ಕೆ ಇರಿಸಲಾಗಿದ್ದ ವ್ಯಾಪಾರದ ವಸ್ತುಗಳನ್ನೆಲ್ಲ ಹೊರಗಡೆ ಜಗುಲಿಗೆ ಸ್ಥಳಾಂತರಿಸಿ, ಒಳ ಆವರಣದಲ್ಲಿ ಇತರ ದೃಶ್ಯಗಳ ಚಿತ್ರೀಕರಣ ಮುಂದುವರಿಸಿತು.
ಒಳ ಆವರಣದೊಳಕ್ಕೆ ಪ್ರವಾಸಿ ವಾಹನ: ಆತಂಕ
ಬೇಲೂರು: ಇಲ್ಲಿ ವಿಶ್ವವಿಖ್ಯಾತ ಶ್ರೀಚನ್ನಕೇಶವಸ್ವಾಮಿ ದೇವಾಲಯದ ಒಳ ಆವರಣದೊಳಕ್ಕೆ ಪ್ರವಾಸಿ ವಾಹನವೊಂದು ಪ್ರವೇಶಿಸಿ ಕೆಲ ಸಮಯ ಆತಂಕ ಸೃಷ್ಟಿಸಿದ ಘಟನೆ ಬುಧವಾರ ನಡೆಯಿತು.
ಚಲನ ಚಿತ್ರವೊಂದರ ಚಿತ್ರೀಕರಣ ಒಳಗಡೆ ನಡೆಯುತ್ತಿದ್ದ ಸಂದರ್ಭ ದೇಗುಲದ ಆನೆ ಬಾಗಿಲಿನಿಂದ (ದೊಡ್ಡಬಾಗಿಲು) ಒಳ ಪ್ರವೇಶಿಸಿದ ಸ್ಕಾರ್ಪಿಯೋ (ನಂ.ಕೆಎ.05-ಎಂಕೆ.9752) ವಾಹನವು ನೇರವಾಗಿ ಕಪ್ಪೆಚನ್ನಿಗರಾಯ ದೇಗುಲದ ಬಳಿ ಇರುವ ಉಯ್ಯಾಲೆ ಸ್ಥಂಭದ ಬಳಿ ಹೋಗಿ ನಿಂತಿತು. ವೇಗವಾಗಿ ಒಳ ಪ್ರವೇಶಿಸಿದ್ದನ್ನ ಕಂಡ ಕೆಲವರು ಆ ವಾಹನ ಚಿತ್ರೀಕರಣ ತಂಡದ್ದಿರಬೇಕು ಎಂದು ಭಾವಿಸಿದ್ದರು. ಆದರೆ ಹತ್ತಿರ ಹೋಗಿ ನೋಡಿದಾಗ ಗೊತ್ತಾದದ್ದು ಅದು ಪ್ರವಾಸಿಗರದು ಎಂದು.
ಪ್ರವಾಸಿಗರಿಂದ ಮಾಹಿತಿ ಪಡೆದಾಗ ಅಭಿಷೇಕ ಮಾಡಿಸಲು ಬಂದಿದ್ದೇವೆ. ದೊಡ್ಡಬಾಗಿಲು ತೆರೆದಿತ್ತು. ಅಲ್ಲಿ ಮೆಟ್ಟಿಗಳು ಇರಲಿಲ್ಲ. ಆ ದ್ವಾರದಲ್ಲಿ ವಾಹನ ಒಳಗೆ ಬರಬಹುದೆಂದು ಭಾವಿಸಿ ಒಳ ಬಂದೆವು ಎಂದು ತಿಳಿಸಿದರು.
ನಮಗೆ ಸಂಬಂಧಿಸಿದ್ದಲ್ಲ
ನಮ್ಮದೇನಿದ್ದರೂ ಪೂಜಾ ಕಾರ್ಯಕ್ಕೆ ಸಂಬಂಧಪಟ್ಟದ್ದು. ಚಿತ್ರೀಕರಣಕ್ಕೆ ಅನುಮತಿ ನೀಡುವುದು, ದೇಗುಲ ರಕ್ಷಣೆ ಇತ್ಯಾದಿ ವ್ಯವಸ್ಥೆ ಕೇಂದ್ರ ಪುರಾತತ್ವ ಇಲಾಖೆಗೆ ಸಂಬಂಧಪಟ್ಟದ್ದು. ಏನಿದ್ದರೂ ಅವರನ್ನೇ ಕೇಳಿಕೊಳ್ಳಬೇಕೆಂದು ಮುಜರಾಯಿ ಇಲಾಖೆಯ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಗುರುಪ್ರಸಾದ್ ತಿಳಿಸಿದರು.
ಎಲ್ಲಾ ಹಿರಿಯ ಅಧಿಕಾರಿಗಳದ್ದು
ದೇಗುಲದಲ್ಲಿರುವ ಕೇಂದ್ರ ಪುರಾತತ್ವ ಇಲಾಖೆಯ ನೌಕರ ಮಂಜುನಾಥ್ ಮಾತನಾಡಿ, ಚಿತ್ರೀಕರಣ ತಂಡದವರು ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದೇವೆಂದು ತಿಳಿಸಿದ್ದಾರೆ. ಮೇಲಾಧಿಕಾರಿಗಳು ಸಹ ಅನುಮತಿ ಪಡೆದಿರುವ ಬಗ್ಗೆ ತಿಳಿಸಿದ್ದಾರೆ. ಇಲ್ಲಿ ಸಂತೆ ನಡೆಸಬೇಕೆ ಬೇಡವೇ ಎಂಬುದರ ಬಗ್ಗೆ ನಮಗೇನೂ ಗೊತ್ತಿಲ್ಲ. ಉನ್ನತಾಧಿಕಾರಿಗಳು ತಿಳಿಸಿದ್ದಷ್ಟೆ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

