ಪೊಲೀಸ್ ವಸತಿ ಗೃಹಕ್ಕೆ ಶಂಕು
ಕನ್ನಡಪ್ರಭ ವಾರ್ತೆ ಹಾಸನ ಮೇ 30
ಇದು ರೀತಿ ವಿಲಕ್ಷಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ಎಂದೇ ಹೇಳಲಾಗುತ್ತಿದೆ.
ಜನಪ್ರತಿನಿಧಿಗಳು ಇಲ್ಲದೇ 70 ಎಕರೆ ಜಮೀನಿನಲ್ಲಿ ಮೀಸಲು ಪಡೆಯ ನಾನಾ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ವಸತಿಗೃಹಗಳನ್ನು ನಿರ್ಮಿಸುವ ಕಾಮಗಾರಿಗೆ ಶುಕ್ರವಾರ ಹಠಾತ್ ಚಾಲನೆ ನೀಡಲಾಗಿದೆ. ಗುರುವಾರ ಸಂಜೆಯಷ್ಟೇ ಕಾರ್ಯಕ್ರಮ ರದ್ದಾಗಿದೆ ಎಂದು ಘೋಷಣೆ ಮಾಡಿ, ಶುಕ್ರವಾರ ಬೆಳಗ್ಗೆ 10 ಕ್ಕೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಧ್ಯಮದವರಿಗೆ ಮಿಂಚಂಚೆ ಕಳುಹಿಸಲಾಯಿತು.
ಶಾಂತಿಗ್ರಾಮ ಹೋಬಳಿ ಎ.ಜಿ.ಕೊಪ್ಪಲು ಬಳಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋದರೆ ಅಲ್ಲಿ ಯೋಜನೆ ಅನುಷ್ಠಾನಕ್ಕೆ ಕಾರಣರಾದ ಲೋಕಸಭೆ ಸದಸ್ಯರಾಗಲಿ, ಶಾಸಕರಾಗಲಿ ಇರಲಿಲ್ಲ. ಅದು ಹೋಗಲಿ ಜಿಲ್ಲಾಡಳಿತದ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿಯೂ ಹಾಜರಿರಲ್ಲಿಲ್ಲ. ಮೀಸಲು ಪಡೆಯ ಸಿಬ್ಬಂದಿ ಬಿಟ್ಟರೇ ಇನ್ಯಾರು ಇರಲಿಲ್ಲ.
ಇಂತಹ ಸನ್ನಿವೇಶದಲ್ಲಿ ಕೆಎಸ್ಆರ್ಪಿ ಕಮಾಂಡೆಂಟ್ ಕೃಷ್ಣಪ್ಪ ಗುದ್ದಲಿ ಪೂಜೆ ಮಾಡುವ ಮೂಲಕ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಅಧಿಕೃತವಾಗಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಮರ್ಥನೆ ನೀಡಿದರು.
ಭೂಸ್ವಾಧೀನಕ್ಕೆ ಹರಸಾಹಸ:ಮೈಸೂರು, ಕೊಡಗು, ಚಿಕ್ಕಮಗಳೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾದ ಸಂದರ್ಭದಲ್ಲಿ ತುರ್ತು ಮೀಸಲು ಪಡೆಯನ್ನು ಕಳುಹಿಸಿಕೊಡುವ ಸದುದ್ದೇಶದಿಂದ ಸಾವಿರಾರು ಸಿಬ್ಬಂದಿಗೆ ವಸತಿ ಗೃಹಗಳನ್ನಲ್ಲದೇ, ಆಡಳಿತ ಕಚೇರಿ ಪರೇಡ್ ಮೈದಾನ ಮತ್ತಿತರ ಅತ್ಯಾಧುನಿಕ ಸೌಲಭ್ಯಗಳನ್ನು ಯೋಜನೆಗೆ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳು ಇದ್ದಾಗ ಆಡಳಿತಾತ್ಮಕ ಒಪ್ಪಿಗೆ ಪಡೆದುಕೊಳ್ಳಲಾಗಿತ್ತು.
ಇದಕ್ಕಾಗಿ ಬೇಕಾಗಿದ್ದ ನೂರಾರು ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಆಗ ಉಸ್ತುವಾರಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಮತ್ತು ಶಾಸಕ ಎಚ್.ಎಸ್. ಪ್ರಕಾಶ್ ಮತ್ತಿತರರು ಹರಸಾಹಸ ಪಟ್ಟಿದ್ದರು. ರೈತರ ಪ್ರತಿಭಟನೆಯನ್ನೂ ಎದುರಿಸಿದ್ದರು. ಈಗ ಈ ಯೋಜನೆಗೆ ಕಾರಣಕರ್ತರಾದವರನ್ನೇ ದೂರವಿಟ್ಟು ಕಾರ್ಯಕ್ರಮ ನಡೆಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.
ಜನಪ್ರತಿನಿಧಿಗಳು ಯಾರು ಬಾರದಿದ್ದಾಗ ಕರ್ನಾಟಕ ರಾಜ್ಯ ಮೀಸಲು ಪಡೆಯ 11ನೇ ಬಿಟಾಲಿಯನ್ ಸಿಬ್ಬಂದಿಗೆ ಪೊಲೀಸ್ ಆಧುನೀಕರಣ ಯೋಜನೆ ಅಡಿಯಲ್ಲಿ ನಿರ್ಮಾಣವಾಗುವ ವಸತಿಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮುಂದೂಡಬಹುದಿತ್ತು. ಹಾಗೆ ಮಾಡದೇ ಜನಪ್ರತಿನಿಧಿಗಳಿಗೆ ಅಗೌರವ ತೋರಿಸಲಾಗಿದೆ ಎಂದು ನಾಗರಿಕ ಸೇವಾ ಸಮಿತಿ ಸಂಚಾಲಕ ಚಂದ್ರನಾರಾಯಣ ತೀವ್ರವಾಗಿ ವಿರೋಧಿಸಿದ್ದಾರೆ. ಶಂಕುಸ್ಫಾಪನೆ ನೆರವೇರಿಸಿದ ಕೆಎಸ್ಆರ್ಪಿ ಕಮಾಡೆಂಟ್ ಕೃಷ್ಣಪ್ಪ ಮಾತನಾಡಿ, ರಾಜ್ಯ ಸರ್ಕಾರದ ಅದೇಶದ ಮೇಲೆ ಕೆಎಸ್ಆರ್ಪಿ 11ನೇ ಪಡೆ ಘಟಕವನ್ನು ಹಾಸನದಲ್ಲಿ ಪ್ರಾರಂಭಿಸಲಾಗಿದೆ. ಈ ಪಡೆಗೆ ನಾನಾ ದರ್ಜೆಯ ಅಧಿಕಾರಿಗಳು, ಸಿಬ್ಬಂದಿಗಳ 1055 ಹುದ್ದೆಗಳಿಗೆ ಅಗತ್ಯ ವಾಹನಗಳಿಗೆ ಮತ್ತು ಉಪಕರಣಗಳನ್ನು ಖರೀದಿಸಲು ಸಹ ಮಂಜೂರು ದೊರಕಿದೆ. ಆದರೆ, ಪ್ರಸ್ತುತ 340 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿಕೆ ಹುದ್ದೆಗಳು ಭರ್ತಿಯಾಗಬೇಕಿದೆ ಎಂದರು.
ಈ ಹಿಂದೆ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ಈ ಪಡೆ ನಿರ್ಮಿಸಲು ಪ್ರತಿ ಎಕರೆಗೆ 4 ಲಕ್ಷರು. ನಂತೆ 200 ಎಕರೆ ಜಮೀನು ವಶಕ್ಕೆ ಅನುಮತಿ ದೊರಕಿದ್ದು, ನಗರಾಭಿವೃದ್ಧಿ ಪ್ರಾಧಿಕಾರವು ಸ್ವಾಧಿನ ಪಡಿಸಿಕೊಳ್ಳುವುದಕ್ಕೂ ಮೊದಲು ಜಮೀನುದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಪಡೆಗೆ ಭೂಮಿ ಲಭ್ಯವಾಗಲಿಲ್ಲ. ನಂತರ 11ನೇ ಪಡೆ ಸ್ಥಾಪನೆಗಾಗಿ ಶಾಂತಿಗ್ರಾಮ ಗಾಡೇನಹಳ್ಳಿಯಲ್ಲಿ ಒಟ್ಟು 70 ಎಕರೆ ಸರ್ಕಾರಿ ಜಮೀನು ಮಂಜೂರು ಆಗಿದೆ.
ಇಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದಲ್ಲಿ ವಸತಿಯೇತರ ಕಟ್ಟಡಗಳಾದ ಆಡಳಿತ ಕಚೇರಿ, ಆವರಣ ಗೋಡೆ, ಎಂಟಿ ಶೆಡ್, ಆಯುಧಾಗಾರ, ಸಿಬ್ಬಂದಿ ವಾಸ್ಥವ್ಯಕ್ಕಾಗಿ ವಸತಿ ನಿಲಯ, ಭೋಜನಾಲಯ ನಿರ್ಮಾಣವಾಗಲಿದೆ. ಒಟ್ಟು 25 ಕೋಟಿ ವೆಚ್ಚದಲ್ಲಿ ನೀಲಿನಕ್ಷೆ ಮತ್ತು ಅಂದಾಜು ವೆಚ್ಚ ಪಟ್ಟಿ ಪಡೆಯಲಾಗಿದ್ದು, ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಸರ್ಕಾರವು ಮುಂಜಾಗೃತ ಮೀಸಲು ಪಡೆಯನ್ನು ತುರ್ತಾಗಿ ಬಳಸಿಕೊಳ್ಳುತ್ತಿದೆ. ಅವರ ಕ್ಷೇಮಕ್ಕಾಗಿ ಸೂಕ್ತ ಸ್ಥಳಕ್ಕಾಗಿ ವಾಸಸ್ಥಳ ಗುರುತಿಸಲಾಗಿದೆ. ಸಮಾಜದಲ್ಲಿ ಯಾವುದೇ ಅಹಿತಕರ, ಗಲಾಟೆಗಳು ನಡೆಯದಂತೆ ಮೀಸಲು ಪಡೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸಾಕಷ್ಟು ಉಪಯೋಗವಾಗುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕೆಎಸ್ಆರ್ಪಿಯ ಮಾಧವ್, ಸಿದ್ದಲಿಂಗಪ್ಪ, ಶ್ರೀನಾಥ್, ಜನಾರ್ದನ್, ಚಂದ್ರಶೇಖರ್, ಶ್ರೀನಾಥ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

