ಟಿಸಿಗೆ ಆಗ್ರಹಿಸಿ ಹೆಸ್ಕಾಂಗೆ ಬೀಗ
ಬ್ಯಾಡಗಿ: ರೈತರಿಗೆ ವಿದ್ಯುತ್ ಪರಿವರ್ತಕ ನೀಡುವಲ್ಲಿ ಹೆಸ್ಕಾಂ ಅಧಿಕಾರಿಗಳು ತೀವ್ರ ತೊಂದರೆ ನೀಡುತ್ತಿದ್ದಾರೆ ಎಂದು ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಸುಮಾರು ಎರಡು ತಾಸುಗಳ ಪ್ರತಿಭಟನೆ ನಡೆಸಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಹೊರಹಾಕಿ ಪ್ರತಿಭಟಿಸಿದರು. ಹೆಸ್ಕಾಂ ಕಾರ್ಯಾಲಯದ ಎದುರು ಸುಮಾರು 50ಕ್ಕೂ ಹೆಚ್ಚು ರೈತರು ಬಾಗಿಲ ಬಳಿ ಕುಳಿತು ಹುಬ್ಬಳ್ಳಿ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಮಿತಿ ಸದಸ್ಯ ಶಶಿಧರಸ್ವಾಮಿಮಿತ್ರದಮಠ ಮಾತನಾಡಿ, ರೈತರು ವಿದ್ಯುತ್ ಸಂಪರ್ಕ ಕೇಳಲು ಹೋದರೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ರೈತರಿಗೆ ಅನ್ಯಾಯ ನಡೆಯುತ್ತಿದ್ದರೂ ಕೇಳುವರೇ ಇಲ್ಲದಂತಾಗಿದೆ.
ಪರೀಕ್ಷೆಗೆ ತೊಂದರೆ: ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ನೀಡುವಂತೆ ಒತ್ತಾಯಿಸಿ, ಹಲವು ಬಾರಿ ಧರಣಿ ಹಾಗೂ ಮನವಿ ನೀಡಲಾಗಿದೆ. ಆದರೆ, ಅಧಿಕಾರಿಗಳು ಪುಡಿಗಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಆರೋಪಿಸಿದರು. ತಾಲೂಕಿನ ಅತ್ತಿಕಟ್ಟಿ, ದುಮ್ಮಿಹಾಳ, ಘಾಳಪೂಜಿ ಗ್ರಾಮಗಳಲ್ಲಿ ಸಂಜೆಯಾಗುತ್ತಿದ್ದಂತೆ ವಿದ್ಯುತ್ ಸಂಪರ್ಕ ನಿಲುಗಡೆಯಾಗುತ್ತದೆ. ಇದರಿಂದ ಪರೀಕ್ಷೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದರು.
ಉಗ್ರ ಹೋರಾಟದ ಎಚ್ಚರಿಕೆ: ಹೆಸ್ಕಾಂಗೆ ಕೇಳಲು ಹೋದರೆ ಒಬ್ಬ ಅಧಿಕಾರಿ ಸ್ಪಂದಿಸುತ್ತಿಲ್ಲ. ಕೂಡಲೇ ಇಂತಹ ಅಧಿಕಾರಿಗಳನ್ನು ಕಿತ್ತೊಗೆಯಿರಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಕೂಡಲೇ ತಾಲೂಕಿನ ಗ್ರಾಮಗಳಿಗೆ ವಿದ್ಯುತ್ ಪರಿವರ್ತಕಗಳನ್ನು ನೀಡದೇ ಹೋದರೆ ಉಗ್ರ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಕಳೆದ ತಿಂಗಳಿನಲ್ಲಿ ರಾಣಿಬೆನ್ನೂರಿನಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಆಗ ಬ್ಯಾಡಗಿ ತಾಲೂಕಿಗೆ 5 ವಿದ್ಯುತ್ ಪರಿಕರಗಳನ್ನು ನೀಡುವುದಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಕೇವಲ ಒಂದೇ ಒಂದು ವಿದ್ಯುತ್ ಪರಿಕರಗಳನ್ನು ಅಳವಡಿಸಲಾಗಿಲ್ಲ. ಹೀಗಾಗಿ ರೈತರಿಗೆ ಸಾಕಷ್ಟು ತೊಂದರೆಯುಂಟಾಗಿದೆ ಎಂದರು.
ಕಳೆದ ವಾರ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವಂತೆ ನಾಲ್ಕಾರು ರೈತರು ಸೇರಿಕೊಂಡು ತೆರಳಲಾಗಿತ್ತು. ಮುಖ್ಯಾಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಗಳು ಸ್ಪಂದಿಸಲಿಲ್ಲ. 150ಕ್ಕೂ ಹೆಚ್ಚು ಕಿಮೀವರೆಗೂ ಹೋದರೂ ರೈತರನ್ನು ನಿರ್ಲಕ್ಷಿಸಲಾಗಿದೆ. ಮುಖ್ಯಾಧಿಕಾರಿ ಕರೆಸುವಂತೆ ಒತ್ತಾಯಿಸಿ ಬಾಗಿಲ ಬಳಿ ಧರಣಿ ಕುಳಿತರು.
ಮಾತಿನ ಚಕಮಕಿ: ಈ ವೇಳೆ ಅಧಿಕಾರಿಗಳೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಸಮಾಧಾನಪಡಿಸಲು ಯತ್ನಿಸಿದ ಅಧಿಕಾರಿಗಳನ್ನು ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಮೂಲಕ ಮಾತು ವಿಕೋಪಕ್ಕೆ ಹೋಯಿತು. ಯಾವುದೇ ಕಾರಣಕ್ಕೂ ಬೀಗ ತೆರೆಯುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಕುಳಿತರು.
ಪ್ರತಿಭಟನೆ ಹಿಂದಕ್ಕೆ: ಘಟನೆ ಅರಿತು ಸ್ಥಳಕ್ಕಾಮಿಸಿದ ಪಿಎಸ್ಐ ಬಸವರಾಜ ಕಲ್ಲಮ್ಮನವರ ಹೆಸ್ಕಾಂನ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ರೈತ ಮುಖಂಡರನ್ನು ಹುಬ್ಬಳ್ಳಿ ಕಚೇರಿಗೆ ಹೆಸ್ಕಾಂ ಅಧಿಕಾರಿಗಳೊಂದಿಗೆ ವಾಹನದಲ್ಲಿ ಕಳುಹಿಸಿಕೊಟ್ಟರು. ನಂತರವೇ ರೈತರು ತಮ್ಮ ಎರಡು ಗಂಟೆಗಳ ಕಾಲ ನಡೆಸಿದ ಪ್ರತಿಭಟನೆ ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಉಪಾಧ್ಯಕ್ಷ ಶಿವಪುತ್ರಪ್ಪ ಕುಲಕರ್ಣಿ, ಹಿರೇಕೆರೂರು ರೈತಸಂಘದ ಅಧ್ಯಕ್ಷ ಅಧ್ಯಕ್ಷ ಮಹೇಶ ಕೊಟ್ಟೂರು, ಪ್ರಧಾನ ಕಾರ್ಯದರ್ಶಿ ಎನ್.ಎಂ. ಬಿದರಿ, ಉಜ್ಜಪ್ಪ ಚಿಕ್ಕಳ್ಳಿ, ಹುಚ್ಚಯ್ಯ ಹಮ್ಮಿಗಿ, ಮಲ್ಲನಗೌಡ ಶಿಡ್ರಳ್ಳಿ, ಮಹಾಂತಪ್ಪ ಹಂಚಿನಮನಿ, ಲಲಿತವ್ವ ಪಾರ್ವತೇರ, ನಾಗರಾಜ ಕೊಪ್ಪದ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

