ಮಾಸೂರು ಆರೋಗ್ಯ ಕೇಂದ್ರ ಸರಿಪಡಿಸಿ
ಕನ್ನಡಪ್ರಭ ವಾರ್ತೆ, ಹಿರೆಕೇರೂರು, ಏ.3
ತಾಲೂಕಿನ ಸರ್ವಜ್ಞನ ಮಾಸೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ದುರವಸ್ಥೆ ಸರಿಪಡಿಸಿ ಜನತೆ ಆರೋಗ್ಯ ಕಾಪಾಡಲು ಮುಂದಾಗಬೇಕೆಂದು ಆಗ್ರಹಿಸಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಾಲೂಕು ವೈದ್ಯಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.
ತಾಲೂಕು ಕರವೇ ಅಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಸರ್ಕಾರದಿಂದ ಅಪಾರ ಅನುದಾನ ವ್ಯಯ ಮಾಡಿ ಮಾಸೂರು ಗ್ರಾಮದ ಸುತ್ತಲಿರುವ ಜನತೆ ಆರೋಗ್ಯ ಕಾಪಾಡಲೆಂದು ನೂತನ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಅಳವಡಿಸದೆ ಇರುವುದರಿಂದ ಈ ಭಾಗದ ಜನತೆ ಕಟ್ಟಡ ಇದ್ದರೂ ಸಮುದಾಯ ಆರೋಗ್ಯ ಕೇಂದ್ರ ಚಿಕಿತ್ಸೆಗಾಗಿ ಜನತೆ ಪಾಲಿಗೆ ಇಲ್ಲದಂತಾಗಿದೆ. ಶೀಘ್ರ ಮೂಲಸೌಲಭ್ಯ ಪೂರೈಸಬೇಕೆಂದು ವೈದ್ಯಾಧಿಕಾರಿಗಳ ಗಮನ ಸೆಳೆದರು.
ಅಲ್ಪ ಸಿಬ್ಬಂದಿ: ಸುಮಾರು 25ಕ್ಕೂ ಹೆಚ್ಚು ಗ್ರಾಮಗಳ ಜನತೆಗೆ ಸೇವೆ ನೀಡುವ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟಾರೆ ವೈದ್ಯರು ಸೇರಿದಂತೆ 34 ಸಿಬ್ಬಂದಿ ಇರಬೇಕು. ಆದರೆ, ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೇವಲ 6 ಜನ ಮಾತ್ರ. ವೈದ್ಯರಿಲ್ಲದ ಸಮುದಾಯ ಕೇಂದ್ರ ಸ್ವಚ್ಛಗೊಳಿಸುವವರೂ ಇಲ್ಲದಂತಾಗಿದ್ದು, ಆಸ್ಪತ್ರೆ ಸೇವಕರು ಇಲ್ಲದಂತಾಗಿದೆ.
ಆಸ್ಪತ್ರೆ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳ ಪರೀಕ್ಷೆಗೆ ಎಕ್ಸರೆ ಯಂತ್ರ ಪೂರೈಸಬೇಕು, ವಿದ್ಯುತ್ ಕೈಕೊಟ್ಟಾಗ ಕಗ್ಗತ್ತಲೆಯಿಂದ ಆರೋಗ್ಯ ಕೇಂದ್ರ ಬಿಕೋ ಎನ್ನುವದನ್ನು ಹೋಗಲಾಡಿಸಲು ಸೋಲಾರ್ ಇಲ್ಲವೆ ಯುಪಿಎಸ್ ಅಳವಡಿಸಬೇಕು, ಕಾಂಪೌಂಡ್ ನಿರ್ಮಿಸಬೇಕು, ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಮತ್ತು ದಾದಿಯರು ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ತಕ್ಷಣ ನೇಮಿಸಬೇಕೆಂದು ಆಗ್ರಹಿಸಿ ಮನವಿಯನ್ನು ತಾಲೂಕು ಸಮುದಾಯ ಆರೋಗ್ಯಾಧಿಕಾರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಎಂ.ಎಸ್. ಹಿರೇಮಠ, ತಾಲೂಕು ಕಾರ್ಯದರ್ಶಿ ರೇವಣಪ್ಪ ಚೌಡಣ್ಣನವರ, ಕಾರ್ಯಕರ್ತರಾದ ಅಭಿಲಾಷ ನ್ಯಾಮತಿ, ಭಾಸ್ಕರ ಶೆಟ್ಟರ್, ಸುರೇಶ ಹೊಳಬಸಣ್ಣನವರ, ಮಂಜುನಾಥ ಹಿರೇಮಠ, ಶಿವರಾಜ ಹೊರಟ್ಟಿ, ಪ್ರಶಾಂತ ಹಿರೇಮಠ, ಚೇತನ ಮಳಗಿ, ಮಹಾಂತೇಶ ಲಿಂಗದಳ್ಳಿ, ಮಹಾಂತೇಶ ಪೂಜಾರ, ಹನುಮಂತ ಶಿಂದೋಳ, ವೆಂಕಟೇಶ ವರ್ಣೇಕರ, ಈರಪ್ಪ ಭೋವಿ, ರವಿ ಕನ್ನಕ್ಕನವರ, ಈಶ್ವರ ಹೊನ್ನಾಳಿ, ಶೇಕಪ್ಪ ತಡಕನಹಳ್ಳಿ, ಚನ್ನಬಸಪ್ಪ ಹಡಪದ, ಹನುಮಂತ ಕನ್ನಕ್ಕನವರ ರಾಜು ಹೊಳಬಸಣ್ಣನವರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

