ಕಾಸಿಗಾಗಿ ಸುದ್ದಿ: ಮಾಧ್ಯಮಗಳ ಮೇಲೆ ನಿಗಾಕ್ಕೆ ಸಮಿತಿ
ಹಾವೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಸಿಗಾಗಿ ಸುದ್ದಿ ಮತ್ತು ಜಾಹೀರಾತು ಪ್ರಕಟಿಸುವ ಮಾಧ್ಯಮಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಸಮಿತಿ ರಚಿಸುವಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ನಿಯಂತ್ರಣ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಈ ಸಮಿತಿಗೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಅಪರ ಜಿಲ್ಲಾಧಿಕಾರಿ ಹಾಗೂ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಸ್ಥಳೀಯ ಆಕಾಶವಾಗಿ ವರದಿಗಾರರು ಮತ್ತು ಜಿಲ್ಲಾ ವಾರ್ತಾಧಿಕಾರಿಗಳು ಸದಸ್ಯರಾಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಮಟ್ಟದ ಅಧಿಕಾರಿಗಳೇ ಪರಿಶೀಲಿಸಿ ಅನುಮೋದನೆ ನೀಡಬಹುದಾಗಿದೆ. ಆದರೆ, ಕಾಸಿಗಾಗಿ ಸುದ್ದಿ ಪ್ರಕಟವಾಗುವ ಸಂದರ್ಭದಲ್ಲಿ ಸಮಿತಿಯ ಎಲ್ಲ ಸದಸ್ಯರು ಪರಿಶೀಲಿಸಬೇಕು. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ನೆಟ್ವರ್ಕ, ಇಂಟರ್ನೆಟ್, ಮೊಬೈಲ್ ನೆಟ್ವರ್ಕ್ಗಳು ಸೇರಿದಂತೆ ಎಲ್ಲಾ ಮಾಧ್ಯಮಗಳ ಮೇಲೆ ನಿಗಾ ಇಟ್ಟು ಕಾಸಿಗಾಗಿ ಸುದ್ದಿ ಎಂದು ಅನುಮಾನಿಸಲಾದ ಸುದ್ದಿಗಳನ್ನು ಪರಿಶೀಲಿಸಿ, ಸಂಬಂಧಿಸಿದವರಿಗೆ ನೋಟೀಸ್ ನೀಡಿ ವಿವರಣೆ ಪಡೆಯಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಕಾಸಿಗಾಗಿ ಸುದ್ಧಿ ಪ್ರಕಟವಾದ ಸಂದರ್ಭದಲ್ಲಿ ಅಭ್ಯರ್ಥಿಯ ಹಣ ಪಾವತಿಸಿರಲಿ ಅಥವಾ ಇಲ್ಲದಿರಲಿ, ವಾರ್ತಾ ಇಲಾಖೆ ನಿಗದಿಪಡಿಸಿದ ಜಾಹಿರಾತು ದರವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲು ಚುನಾವಣಾ ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹಿರಾತುಗಳಿಗೆ ಅನುಮೋದನೆ ಪಡೆಯಲಾಗಿದೆಯೇ ಎಂಬುದನ್ನು ಸಮಿತಿ ಪರಿಶೀಲಿಸಬೇಕು. ಅಭ್ಯರ್ಥಿಯ ಒಪ್ಪಿಗೆ ಪಡೆದು ಅಥವಾ ಪಡೆಯದೆಯೂ ಪ್ರಕಟವಾಗುವ ಜಾಹೀರಾತುಗಳನ್ನು ಪರಿಶೀಲಿಸಿ ಚುನಾವಣಾಧಿಕಾರಿಗಳಿಗೆ ಮಾಹಿತಿಯನ್ನು ಸಮಿತಿ ನೀಡಬೇಕು. ಅಭ್ಯರ್ಥಿಯ ಒಪ್ಪಿಗೆಯಿಂದ ಪ್ರಕಟವಾಗುವ ಜಾಹೀರಾತುಗಳ ವೆಚ್ಚವನ್ನು ಲೆಕ್ಕಕ್ಕೆ ಸೇರಿಸಲಾಗುತ್ತದೆ. ಆದರೆ, ಅಭ್ಯರ್ಥಿಯ ಒಪ್ಪಿಗೆ ಇಲ್ಲದಿದ್ದಲ್ಲಿ, ಜಾಹೀರಾತು ಪ್ರಕಟಿಸಿದವರ (ಪ್ರಕಾಶಕರ) ವಿರುದ್ಧ ಭಾರತೀಯ ದಂಡ ಸಂಹಿತೆಯ 171(ಎಚ್) ಕಲಂನನ್ವಯ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಾಹಿರಾತುಗಳಲ್ಲಿ ಕರಪತ್ರ, ಪೋಸ್ಟರ್, ಮತ್ತಿತರ ಚುನಾವಣಾ ಸಾಮಗ್ರಿಯಲ್ಲಿ ಮುದ್ರಕರ ಮತ್ತು ಪ್ರಕಾಶಕರ ಹೆಸರು ನಮೂದಿಸುವುದು ಕಡ್ಡಾಯವಾಗಿರುತ್ತದೆ ಎಂದು ಆಯೋಗ ತಿಳಿಸಿದೆ.
ಅನುಸರಿಸುವ ಕ್ರಮ ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಸಮಿತಿ, ವೆಚ್ಚ ನಿರೀಕ್ಷಕರಿಗೆ ಪ್ರತಿ ದಿನವೂ ನಿಗದಿತ ನಮೂನೆಯಲ್ಲಿ ಈ ಸಂಬಂಧದ ವರದಿ ಸಲ್ಲಿಸುವುದು. ರಾಜ್ಯ ಮಟ್ಟದಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂಥದೇ ಸಮಿತಿ ಇದ್ದು, ಈ ಸಮಿತಿಯು ಜಿಲ್ಲಾ ಸಮಿತಿ ಹಾಗೂ ಚುನಾವಣಾ ಆಯೋಗದ ಜಂಟಿ ಅಥವಾ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಿಂದ ಜಾಹೀರಾತು ಸಂಬಂಧದ ಪ್ರಕರಣ ಅಪೀಲುಗಳನ್ನು ಪರಾಮರ್ಶಿಸುವುದು.
ಮಾಧ್ಯಮ ಸಂಬಂಧಿ ಪ್ರಕರಣಗಳನ್ನು ಚುನಾವಣಾ ಆಯೋಗ ಕ್ರಮಕ್ಕಾಗಿ ಭಾರತೀಯ ಪತ್ರಿಕಾ ಮಂಡಳಿಗೆ ರವಾನಿಸುವುದೆಂದು ಚುನಾವಣಾ ಆಯೋಗ ತಿಳಿಸಿದೆ.
ಮಾರ್ಗದರ್ಶಕ ಸೂತ್ರಗಳು
*ಜಿಲ್ಲಾ ಮಟ್ಟದ ಸಮಿತಿ, ಕಾಸಿಗಾಗಿ ಸುದ್ದಿ ಖಚಿತವೆನ್ನಿಸಿದ ಪ್ರಸಂಗದಲ್ಲಿ ಅಂಥ ಸುದ್ದಿಗಳನ್ನು ಜಾಹೀರಾತು ದರದಲ್ಲಿ ಪರಿಗಣಿಸಲು ಸುದ್ಧಿ ಸಂಸ್ಥೆಗಳ ತಿಂಗಳ ಮುಂಚಿನ ಜಾಹಿರಾತು ದರ ಇಲ್ಲವೆ ವಾರ್ತಾ ಇಲಾಖೆ ನಿಗದಿಗೊಳಿಸಿದ ಜಾಹಿರಾತು ದರಪಟ್ಟಿಗಳನ್ನು ಇಟ್ಟುಕೊಂಡಿರಬೇಕು.
* ಕಾಸಿಗಾಗಿ ಸುದ್ದಿ ಸಂಬಂಧದ ಮಾರ್ಗದರ್ಶಕ ಸೂತ್ರಗಳ ಬಗ್ಗೆ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆಯಲ್ಲಿ ನೀಡಬೇಕು ಇಂಥ ಜಾಹಿರಾತುಗಳನ್ನು ಪ್ರಕಟಿಸುವ ಪತ್ರಿಕೆಗಳು ಕಾಸಿಗಾಗಿ ಸುದ್ದಿ ಪ್ರಕಟಿಸದಂತೆ ತಮಗೆ ತಾವೇ ಸ್ವಯಂ ನಿಯಂತ್ರಣ ಹೊಂದಿರಬೇಕು.
* ಕಾಸಿಗಾಗಿ ಸುದ್ದಿ ಮನವಿ ಅಥವಾ ಜಾಹೀರಾತು ಪ್ರಕಟಗೊಂಡ, ಪ್ರಸಾರಗೊಂಡ ದೂರು ದಾಖಲಾದ ವಿಚಾರದಲ್ಲಿ ಜಿಲ್ಲಾ ಸಮಿತಿ ಕ್ರಮ ಜರುಗಿಸುವ ಮುನ್ನ ಕ್ಷೇತ್ರದ ಚುನಾವಣಾಧಿಕಾರಿಗಳು ಸಂಬಂಧಪಟ್ಟ ಅಭ್ಯರ್ಥಿಗೆ 4 ದಿನಗಳೊಳಗಾಗಿ (96 ಗಂಟೆ) ನೋಟಿಸು ಜಾರಿ ಮಾಡಿ, ಇಂಥ ಪ್ರಕಟಣೆ ವೆಚ್ಚವನ್ನು ನಿಗದಿತ ದರದಲ್ಲಿ ಅಭ್ಯರ್ಥಿಯ ಚುನಾವಣೆ ವೆಚ್ಚಕ್ಕೆ ಸೇರಿಬಾರದೇಕೆ ಎಂದು ಕೇಳುವರು.
* ಈ ನೋಟೀಸಿಗೆ ಅಭ್ಯರ್ಥಿ ಪಕ್ಷ ನೀಡುವ ಉತ್ತರವನ್ನು ಜಿಲ್ಲಾ ಸಮಿತಿ ಪರಿಶೀಲಿಸಿ ನಿರ್ಧಾರ ಕೈಕೊಳ್ಳುವುದು. ಒಂದು ವೇಳೆ ನೋಟೀಸು ಜಾರಿಯಾಗಿ 24 ಗಂಟೆಯಾದರೂ ಉತ್ತರ ಬಾರದಿದ್ದಲ್ಲಿ, ಜಿಲ್ಲಾ ಸಮಿತಿ ತೆಗೆದುಕೊಳ್ಳುವ ತೀರ್ಮಾನ ಅಂತಿಮವಾಗಿರುತ್ತದೆ.
* ಜಿಲ್ಲಾ ಸಮಿತಿಯ ತೀರ್ಮಾನ ಒಪ್ಪಿಗೆಯಾಗದಿದ್ದರೆ ಪಕ್ಷದಲ್ಲಿ ಅಭ್ಯರ್ಥಿಯಾಗಲಿ, ರಾಜಕೀಯ ಪಕ್ಷಗಳಾಗಲಿ, ರಾಜ್ಯ ಸಮಿತಿಗೆ ಅಪೀಲು ಹೋಗಬಹುದು.
*ಸಲ್ಲಿಕೆಯಾಗುವ ಅಪೀಲಿನ ಬಗ್ಗೆ ರಾಜ್ಯ ಸಮಿತಿ 4 ದಿನಗಳೊಳಗಾಗಿ ತನ್ನ ತೀರ್ಮಾನವನ್ನು ಪ್ರಕಟಿಸಿ, ಆದೇಶವನ್ನು ಸಂಬಂಧಪಟ್ಟ ಅಭ್ಯರ್ಥಿ ಪಕ್ಷಕ್ಕೆ ತಿಳಿಸುವುದು. ಈ ಆದೇಶವೂ ಅಭ್ಯರ್ಥಿ ಅಥವಾ ಪಕ್ಷಕ್ಕೆ ಒಪ್ಪಿಗೆಯಾಗದಿದ್ದಲ್ಲಿ ಅಂತಿಮವಾಗಿ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಬಹುದಾಗಿದ್ದು, ಚುನಾವಣಾ ಆಯೋಗ ನೀಡುವ ಆದೇಶ ಇಂಥ ಪ್ರಕರಣಗಳಲ್ಲಿ ಅಂತಿಮವಾದುದಾಗಿರುತ್ತದೆ.
* ಕಾಸಿಗಾಗಿ ಸುದ್ದಿಗೆ ಸಂಬಂಧಿಸಿದ ಇಂಥ ಪ್ರಕರಣಗಳು ಸಾಮಾನ್ಯವಾಗಿ ಆ ಚುನಾವಣಾ ಅವಧಿಯೊಳಗೆ ಪೂರ್ಣಗೊಳ್ಳಬೇಕಾಗುವುದು.
* ಕಾಸಿಗಾಗಿ ಸುದ್ದಿ ವಿಚಾರವಾಗಿ ಬಹಳಷ್ಟು ಪ್ರಕಣಗಳು ದಾಖಲಾಗಿ ಈ ಬಗ್ಗೆ ಕ್ರಮ ಕೈಕೊಳ್ಳುವುದು ಬಾಕಿ ಉಳಿಸುವುದನ್ನು ಚುನಾವಣಾ ಆಯೋಗ ಗಮನಿಸಿದ್ದು, ಇಂಥ ವಿಚಾರದಲ್ಲಿ ಪ್ರಕರಣಗಳನ್ನು ದಾಖಲಿಸುವ
* ಮುಂಚೆಯೇ ಜಿಲ್ಲಾ ಸಮಿತಿಗಳು ಪ್ರತಿಯೊಂದು ಪ್ರಕರಣದ ಬಗ್ಗೆಯೂ ಸಾಕಷ್ಟು ಚರ್ಚಿಸಿ, ವಿಶ್ಲೇಷಿಸಿ, ಅರ್ಹವಾದ ಪ್ರಕರಣಗಳನ್ನು ನಿರ್ಧರಿಸಿ, ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿರುತ್ತದೆ.
* ಕಾಸಿಗಾಗಿ ಸುದ್ದಿ ನಿಜವೆಂದು ಇತ್ಯರ್ಥವಾದ ಪ್ರಕರಣಗಳಲ್ಲಿ ಅಂಥ ವರದಿಗಳಿಗೆ ಸಾಮಾನ್ಯವಾಗಿ ವಿಧಿಸಬಹುದಾದ ವಸ್ತುನಿಷ್ಠ ಜಾಹೀರಾತು ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚವೆಂದು ಪರಿಗಣಿಸಿ ಅಭ್ಯರ್ಥಿಗೆ ತಿಳಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

