ಹಾವೇರಿ

ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಏ. 12
ಜಿಲ್ಲೆಯ ಏಳು ತಾಲೂಕುಗಳು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆಯಾದ ನಿಮಿತ್ತ ಅಕ್ಷರ ದಾಸೋಹದ ಬಿಸಿಯೂಟ ಕಾರ್ಯಕ್ರಮವನ್ನು ಏಪ್ರಿಲ್ ಮತ್ತು ಮೇ ರಜಾ ಅವಧಿಯಲ್ಲಿ ಮುಂದುವರೆಸುವ ಕುರಿತು ಆದೇಶವಾಗಿದ್ದರಿಂದ ಜಿಲ್ಲೆಯ ಎಲ್ಲಾ ಸರಕಾರಿ ಅನುದಾನಿತ ಶಾಲೆಗಳಲ್ಲಿ 1ರಿಂದ 7ನೇ ತರಗತಿಯವರಿಗೆ ಬಿಸಿಯೂಟ ಕಾರ್ಯಕ್ರಮವನ್ನು ಮುಂದುವರಿಸಿಬೇಕೆಂದು ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಝೆಡ್.ಎಂ. ಖಾಜಿ ಅವರು ಎಲ್ಲ ಶಾಲೆಗಳಿಗೆ ಸೂಚಿಸಿದ್ದಾರೆ.
ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರು ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಉಪಸ್ಥಿತರಿದ್ದು, ಚಿತ್ರಕಲೆ, ನೃತ್ಯ, ಜಾನಪದ ಹಾಡು, ಶುದ್ಧ ಬರವಣೆಗೆ, ಮತ್ತು ವಿವಿಧ ಕಲಿಕಾ ಚಟುವಟಿಕೆ ಮುಖಾಂತರ ಮಕ್ಕಳಿಗೆ ಶಾಲೆಯಲ್ಲಿ ಉಳಿಸಿಕೊಂಡು ಸರಿಯಾಗಿ 1 ಗಂಟೆಗೆ ಮಧ್ಯಾಹ್ನ ಬಿಸಿಯೂಟವನ್ನು ನೀಡಿ ಮನೆಗೆ ಕಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಶಿಕ್ಷಕರು ಜವಾಬ್ದಾರಿ ವಹಿಸಿ: ಒಂದು ವೇಳೆ ಯಾವುದೇ ಶಾಲೆಯ ಎಲ್ಲಾ ಮಕ್ಕಳು ಊಟ ಮಾಡಲು ನಿರಾಕರಿಸಿದರೆ ಸಂಬಂಧಿಸಿದ ಮುಖ್ಯೋಪಾಧ್ಯಾಯರು ಎಸ್‌ಡಿಎಂಸಿಯಿಂದ ಠರಾವು ಮಾಡಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಒಂದು ವೇಳೆ ಮುಖ್ಯೋಪಾಧ್ಯಾಯರು ಅನಿವಾರ್ಯ ಕಾರಣಗಳಿಂದ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸದರೆ ಅಂತಹ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕರಿಗೆ ಸಂಪೂರ್ಣ ಜವಾಬ್ದಾರಿ ನೀಡಬೇಕು ಮತ್ತು ಗಳಿಕೆ ರಜೆಯನ್ನು ಜವಾಬ್ದಾರಿ ವಹಿಸಿಕೊಂಡ ಶಿಕ್ಷಕರಿಗೆ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ನೀಡಬೇಕು.
ಬರಗಾಲ ಪ್ರಯುಕ್ತ ನೀಡಿದ ಊಟಗಳ ವಿವರ, ಫಲಾನುಭವಿಗಳ ವಿವರ, ತಾಲ್ಲೂಕಾ ಅಕ್ಷರ ದಾಸೋಹ ಅಧಿಕಾರಿ ಮುಖಾಂತರ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಸದರಿ ಬರಗಾಲದ ಅವಧಿಯಲ್ಲಿ ಯಾವುದೇ ರಜೆಗಳು ಇರುವುದಿಲ್ಲ.
ಸೂಕ್ತ ಕ್ರಮ: ಭಾನುವಾರ ಹಾಗೂ ಸರಕಾರಿ ರಜಾ ದಿನಗಳಲ್ಲಿ ಕೂಡಾ ಮುಖ್ಯೋಪಾಧ್ಯಾಯರು ಕಡ್ಡಾಯವಾಗಿ ಕರ್ತವ್ಯವನ್ನು ನಿರ್ವಹಿಸಬೇಕು. ಈ ರಜಾ ಅವಧಿಯಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಶಾಲೆಗಳಿಗೆ ಸಂದರ್ಶನ ನೀಡಬೇಕಾಗಿರುವುದರಿಂದ ಸಂದರ್ಶನ ವೇಳೆಯಲ್ಲಿ ಶಾಲೆಗೆ ಬೇಟೆ ನೀಡಿದಾಗ ನಿಗದಿತ ಸಮಯದಲ್ಲಿ ಶಾಲೆಗೆ ಬೀಗ ಹಾಕಿದ್ದಲ್ಲಿ ಅಥವಾ ಬಿಸಿಯೂಟ ನೀಡದಿದ್ದಲ್ಲಿ ಅವರ ಮೇಲೆ ಇಲಾಖಾ ನಿಯಾಮನುಸಾರ ಕ್ರಮ ಜರುಗಿಸಲಾಗುವುದು.
ಈಗಾಗಲೇ ಬರಗಾಲ ಪ್ರಯಕ್ತ ಆಹಾರ ಧಾನ್ಯಗಳು, ಅಡುಗೆಯವರ ಸಂಭಾವನೆ ಮತ್ತು ಸಾದಿಲ್ವಾರು ಹಣದ ವ್ಯವಸ್ಥೆ, ಸಿಲಿಂಡರ್‌ಗಳ ಸರಬರಾಜು, ಆಗಿರುವುದರಿಂದ ಎಲ್ಲಾ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಅಡುಗೆಯವರನ್ನು ದಿನನಿತ್ಯ ಶಾಲೆಗೆ ಬಂದು ಮಧ್ಯಾಹ್ನ 12.30ಕ್ಕೆ ಊಟವನ್ನು ಸಿದ್ದಪಡಿಸಿ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಬಿಸಿಯೂಟ ಪೂರೈಕೆಗಾಗಿ ಬೇರೆ ಶಾಲೆಗೆ ಸೇರಿಸಲ್ಪಟ್ಟಿರುವ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಮಕ್ಕಳನ್ನು ಅಡುಗೆ ಕೇಂದ್ರವಿರುವ ಶಾಲೆಗಳಿಗೆ ಊಟ ಮಾಡಲು ಕಳುಹಿಸಬೇಕು.
ಶಾಲೆಯ ಮುಖ್ಯೋಪಾಧ್ಯಾಯರಿಗೆ ಗಳಿಕೆ ರಜೆ ನೀಡಲಾಗುವುದಿಲ್ಲ. ನಿಯಾಮನುಸಾರ ಬೇಸಿಗೆ ರಜೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಪ್ರಾಮಾಣಿಕವಾಗಿ ಪರಿಶೀಲಿಸಿ ಗಳಿಕೆ ರಜೆಯನ್ನು ನೀಡಲಾಗುವುದು. ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕಾದ ಸಂದರ್ಭದಲ್ಲಿ ಎಲ್ಲಾ ಮುಖ್ಯೋಪಾಧ್ಯಾಯರು ಅಡುಗೆಯವರಿಗೆ ಆಹಾರ ಧಾನ್ಯಗಳನ್ನು ನೀಡಿ,ಬಿಸಿಯೂಟ ಸ್ಥಗಿತಾಗದಂತೆ ನೊಡಿಕೊಳ್ಳಬೇಕು. ಅಡುಗೆ ಮಾಡುವಾಗ ಶುದ್ದ ನೀರು, ಆಹಾಧಾನ್ಯಗಳ ಸ್ವಚ್ಛತೆ, ಪಾತ್ರೆಗಳ ಸ್ವಚ್ಛತೆ, ಗುಣಮಟ್ಟದ ತರಕಾರಿಯನ್ನು ಉಪಯೋಗಿಸಿ ಅಗತ್ಯ ದಾಖಲೆಗಳನ್ನು ಇಡಬೇಕು.
ಯಾವುದೇ ದುಶ್ಚಟಕ್ಕೆ ಅವಕಾಶ ನೀಡದೇ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸಗಲ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.