ಕಾಂಗ್ರೆಸ್ನಲ್ಲೇ ಇರುತ್ತೇನೆ: ಪಠಾಣ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 18
ಕಾಂಗ್ರೆಸ್ ಪಕ್ಷ ಬಿಡೋಲ್ಲ. ಚುನಾವಣಾ ಪ್ರಚಾರಕ್ಕೆ ಹೋಗದೆ ತಟಸ್ಥನಾಗಿರುತ್ತೇನೆ. ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯಕ್ಕಾಗಿ ನನ್ನ ಹೋರಾಟ ನಿಲ್ಲಿಸೊಲ್ಲ, ಬೇರೆ ಪಕ್ಷದ ಪರ ಆಂತರಿಕ ಅಥವಾ ಬಾಹ್ಯ ಪ್ರಚಾರದ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ, ಹಾನಗಲ್ಲ ವಿಧಾನಸಭಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಯಾಸೀರ್ಖಾನ ಪಠಾಣ ತಮ್ಮ ಮನದಾಳದ ಮಾತು ಬಿಚ್ಚಿಟ್ಟರು.
ಹಾನಗಲ್ಲಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾನಗಲ್ಲ ವಿಧಾನಸಭೆ ಟಿಕೆಟ್ಗಾಗಿ ಪ್ರಾಮಾಣಿಕ ಯತ್ನ ಮಾಡಿದೆ. ರಾಜ್ಯ, ರಾಷ್ಟ್ರ ನಾಯಕರು ನನ್ನ ಪರ ಯೋಚಿಸಿದರು. ಆದರೆ, ಹಾವೇರಿ ಜಿಲ್ಲೆ ಕಾಂಗ್ರೆಸ್ ನಾಯಕರು ನನಗೆ ಟಿಕೆಟ್ ತಪ್ಪಿಸಿದರು. ಇದರಿಂದ ನನಗೆ ನೋವಾಗಿದೆ. ಆದ್ದರಿಂದಲೇ ನಾನು ಈ ಬಾರಿ ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕೆ ಹೋಗುವುದಿಲ್ಲ, ನಾನು ತಟಸ್ಥನಾಗಿರುವೆ ಎಂದರು.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಒಂದಾದರೂ ಕ್ಷೇತ್ರಕ್ಕೆ ಮುಸ್ಲಿಂ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ನೀಡುವರೆಂಬ ನಿರೀಕ್ಷೆ ಸುಳ್ಳಾಗಿದೆ. ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ 40 ಸಾವಿರ ಮುಸ್ಲಿಂ ಮತಗಳಿವೆ. ಕೊನೆ ಗಳಿಗೆಯವರೆಗೂ ಟೆಕೆಟ್ ನೀಡುವರೆಂಬ ಭರವಸೆ ಹಾವೇರಿ ಜಿಲ್ಲೆಯ ಕಾಂಗ್ರೆಸ್ ನಾಯಕರಿಂದ ಕೈತಪ್ಪಿತು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 3 ಲಕ್ಷಕ್ಕೂ ಅಧಿಕ ಮುಸ್ಲಿಂ ಮತಗಳಿವೆ ಎಂಬುದನ್ನು ಕಾಂಗ್ರೆಸ್ ಪಕ್ಷದ ನಾಯಕರು ಅರಿಯಲಿಲ್ಲ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡದ್ದು ದುರಂತ. ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಏನೇ ಆದರೂ ನಾನು ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ. ನನಗೆ ಕಾಂಗ್ರೆಸ್ ಪಕ್ಷದ ಹೊರತಾಗಿ ಬೇರೆ ಪಕ್ಷದಲ್ಲಿ ಗುರುತಿಸಿಕೊಳ್ಳುವ ಇಚ್ಛೆ ಇಲ್ಲ. ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗಲಿಲ್ಲ ಎಂದು ಬೇರೆ ಪಕ್ಷಗಳ ಅಭ್ಯರ್ಥಿಯಾಗಲು ಆಹ್ವಾನ ಬಂದರೂ ನಾನದಕ್ಕೆ ಮಣಿದಲ್ಲ. ನನಗೆ ನನ್ನ ಬೆಂಬಲಿಗರು ಹಾಗೂ ರಾಜ್ಯ ಹಾಗೂ ರಾಷ್ಟ್ರ ನಾಯಕರು ಮುಖ್ಯ. ನನಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ನೀಡುವರು ಎಂಬ ಭರವಸೆ ಇದೆ. ಆದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವೆನು. ಬೆಂಬಲಿಗರ ಇಚ್ಛೆಯಂತೆ ಕಾಂಗ್ರೆಸ್ ಪಕ್ಷದ ಪರ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗದೇ ತಟಸ್ಥನಾಗಿರುವೆ. ಕಾಂಗ್ರೆಸ್ ಪಕ್ಷದ ಪರವಾಗಿದ್ದ ಮುಸ್ಲಿಂ ಸಮುದಾಯ ಈ ಎಲ್ಲ ಕಾರಣಕ್ಕಾಗಿ ಬೇರೆ ಪಕ್ಷಗಳಿಗೆ ಸೇರ್ಪಡೆಯಾಗುತ್ತಿರುವುದನ್ನು ಗಮನಿಸಿದ್ದೇನೆ. ಆದರೆ, ಈ ಬಗ್ಗೆ ನಾನೂ ಏನೂ ಪ್ರತಿಕ್ರಿಯಿಸುವುದಿಲ್ಲ. ನಾನು ಮಾತ್ರ ಕಾಂಗ್ರೆಸ್ಗೆ ನಿಷ್ಠ ಎಂದು ಪಠಾಣ ತಿಳಿಸಿದರು.
ಕಾಂಗ್ರೆಸ್ ಪಕ್ಷದ ವೊಟ್ಬ್ಯಾಂಕ್ ಎಂದೇ ಗುರುತಿಸಲ್ಪಟ್ಟ ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕೇವಲ 19 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದೆ. ಕನಿಷ್ಠ 30 ಕ್ಷೇತ್ರಗಳಲ್ಲಿಯಾದರೂ ಮುಸ್ಲಿಂರಿಗೆ ಟಿಕೆಟ್ ನೀಡಬೇಕಾಗಿತ್ತು. ರಾಜಕೀಯವಾಗಿ ಮುಸ್ಲಿಮ್ರನ್ನು ಹಿಂದೆ ದೂಡುತ್ತಲಿದ್ದಾರೆ. ಈಗ ಮುಸ್ಲಿಮರು ಸಾಮಾಜಿಕ, ಆರ್ಥಿಕವಾಗಿ ಸಬಲರಾಗಿದ್ದಾರೆ. ಶೈಕ್ಷಣಿಕವಾಗಿಯೂ ಮುಂದುವರೆದಿದ್ದಾರೆ. ಆದಾಗ್ಯೂ ರಾಜಕೀಯ ಸ್ಥಾನಮಾನ ನೀಡುವಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದೆ ಎಂದರು. ಮೆಹಬೂಬಲಿ ಹೊಂಡದ, ರಷೀದ ವಾಗಿನಕೊಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

