ಹಾವೇರಿ

ಅಭಿವೃದ್ಧಿಯೇ ಬಿಜೆಪಿ ಗೆಲವಿಗೆ ಶ್ರೀರಕ್ಷೆ

Published On :

ಶಿಗ್ಗಾಂವಿ: ಕೇವಲ ಭರವಸೆಗಳ ಮೇಲೆ ಆಡಳಿತ ನಡೆಸಿದ ಕಾಂಗ್ರೆಸ್ ಕಾರ್ಯವೈಖರಿಯಿಂದ ರಾಜ್ಯದ ಮತದಾರರಿಗೆ ಜನಪ್ರತಿಧಿಗಳ ಮೇಲೆ ವಿಶ್ವಾಸ ಇಲ್ಲದಂತಾಗಿತ್ತು. ಬಿಜೆಪಿ ಅಧಿಕಾರ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತಮ್ಮ ಬಳಿ ಮತ ಕೇಳಲು ಬಂದಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಪಟ್ಟಣದ ಸಂತೆಬೈಲು ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ದೇಶದೆಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಒಂದು ರಾಜಕೀಯ ಶಕ್ತಿಯಾಗಿ ಬೆಳೆದು ಬಂದಿದೆ ಹೊರತು ಯಾವುದೇ ಒಂದು ಕುಟುಂಬದಿಂದ ಬಂದ ಬಳುವಳಿಯಲ್ಲ ಎಂದರು.
ರಾಜಕೀಯ ಸನ್ಯಾಸ ಕಾಡುತ್ತಿದೆ: ಕಳೆದ 50 ವರ್ಷಗಳಿಂದ ಕಾಂಗ್ರೆಸ್ ನಡೆಸಿದ ದುರಾಡಳಿತ ಹಾಗೂ ಪೊಳ್ಳು ಭರವಸೆಗಳಿಂದ ರಾಜ್ಯದ ಜನತೆ ಬಡತನದಲ್ಲಿಯೇ ಉಳಿಯುವಂತಾಗಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ ಮೂಲಸೌಕರ್ಯಗಳನ್ನು ನೀಡದಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಲು ನೈತಿಕ ಹಕ್ಕಿಲ್ಲ. ಬಿಜೆಪಿ ಅಧಿಕಾರ ಮುಂದುವರೆಸಿದರೆ ಮುಂದಿನ 20 ವರ್ಷಗಳ ಕಾಲ ರಾಜಕೀಯ ಸನ್ಯಾಸ ಅನುಭವಿಸಬೇಕಾದ ಭಯ ವಿಪಕ್ಷಗಳನ್ನು ಕಾಡುತ್ತಿದೆ ಎಂದರು.
ಬಾಡ, ಕಾಗಿನೆಲೆ ಪ್ರವಾಸಿ ತಾಣ: ಜಾತಿ ಆಧಾರಿತ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರ ಹೆಸರನ್ನು ದುರ್ಬಳಕೆ ಮಾಡುತ್ತಿದೆ. ಕ್ಷೇತ್ರದಲ್ಲಿ ಬರುವ ಕುರುಬ ಸಮುದಾಯದ ಆರಾಧ್ಯದೈವ ಕನಕದಾಸರ ಜನ್ಮಸ್ಥಳ ಬಾಡ ಗ್ರಾಮವನ್ನು ಅಭಿವೃದ್ಧಿಪಡಿಸದಿರುವ ಕಾಂಗ್ರೆಸ್, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಅನುದಾನ ಒದಗಿಸುವ ಮೂಲಕ ವಿಶ್ವಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲಾಗಿದೆ ಎಂದರು.
ಕ್ಷೇತ್ರದ ಗ್ರಾಮೀಣ ರಸೆಗ್ತಳನ್ನು ಶೇ. 80ರಷ್ಟು ಅಭಿವೃದ್ಧಿಪಡಿಸಿದ್ದೇನೆ. 50 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ತಮ್ಮ ಅಭಿವೃದ್ಧಿ ಬಹಿರಂಗಪಡಿಸುವಂತೆ ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಮಹತ್ವ ಪಡೆದುಕೊಳ್ಳುತ್ತಿದ್ದು ಸರ್ಕಾರ ಸಾಮಿತ್ಯದ ಐಟಿಐ, ಪಾಲಿಟೆಕ್ನಿಕ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಧ್ಯಯನಕ್ಕಾಗಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಿದ್ದು, ವಿಶ್ವದ ಭೂಪಟದಲ್ಲಿ ಶಿಗ್ಗಾವಿ ಗುರುತಿಸುವಂತೆ ಮಾಡಿದ್ದೇನೆ. ಭಾವೈಕ್ಯತೆಯ ಸಂಗಮ ಷರೀಫ ಶಿವಯೋಗಿಳಂತಹ ದಾರ್ಶನಿಕರು ಜನಿಸಿದ ಶಿಶುವಿನಹಾಳ ಗ್ರಾಮದಲ್ಲಿ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದ್ದೇನೆ ಎಂದರು.
ನಿರಂತರ ವಿದ್ಯುತ್ ಯೋಜನೆಯಡಿ ಗುಜರಾತ್ ಮಾದರಿಯಲ್ಲಿ ಕ್ಷೇತ್ರದ ಎಲ್ಲ ಗ್ರಾಮಗಳಿಗೂ 24 ಗಂಟೆ ಕಾಲ ಗೃಹಪಯೋಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಬಡವರಿಗಾಗಿ 14 ಸಾವಿರ ಮನೆಗಳನ್ನು ವಿತರಿಸಲಾಗಿದ್ದು, ಎಲ್ಲರಿಗೂ ಸೂರು ಒದಗಿಸುವ ಸಂಕಲ್ಪ ಮಾಡಿಕೊಂಡಿದ್ದೇನೆ ಎಂದರು.
ವೇದಿಕೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ವಿಪ ಸದಸ್ಯರಾದ ಗೋ. ಮಧುಸೂದನ್, ಸೋಮಣ್ಣ ಬೇವಿನಮರದ, ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ಸಿಂಧೂರ, ಜಿಪಂ ಸದಸ್ಯರಾದ ಶೋಭಾ ನಿಸ್ಸೀಮಗೌಡ್ರ, ಚನ್ನಬಸವನಗೌಡ, ಸರೋಜಾ ಆಡಿನ, ತಾಪಂ ಸದಸ್ಯೆ ಸುಜಾತಾ ಕಲಕಟ್ಟಿ, ತಾಪಂ ಅಧ್ಯಕ್ಷೆ ಉಷಾ ಬಿಳೇಕುದರಿ, ತಾಲೂಕು ಬಿಜೆಪಿ ಘಟಕ ಅಧ್ಯಕ್ಷ ದೇವಣ್ಣ ಚಾಕಲಬ್ಬಿ ಇನ್ನಿತರರು ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.