ಹಾವೇರಿ

ಪ್ರಾದೇಶಿಕ ಪಕ್ಷದಿಂದ ಹಗರಣಗಳಿಗೆ ಕೊನೆ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 29
ಇತ್ತೀಚಿನ ರಾಜಕೀಯ ವ್ಯವಸ್ಥೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಅವರಿಂದ ಹಿಡಿದು ಗ್ರಾಪಂ ಸದಸ್ಯನವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರುವ ಮೂಲಕ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ಹಗರಣಗಳಿಗೆ ಕೊನೆ ಹಾಡಲಿವೆ ಎಂದು ಹಿರಿಯ ಸಾಹಿತಿ, ಕೆಜೆಪಿಯ ಚಂದ್ರಶೇಖರ ಪಾಟೀಲ್ ಪ್ರತಿಪಾದಿಸಿದರು.
ಕೆಜೆಪಿ ಚುನಾವಣಾ ಪ್ರಚಾರಾರ್ಥ ಸೋಮವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಎಲ್ಲರಿಗೂ ರಾಜಕೀಯ ಅವಶ್ಯ: ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಮುಕ್ತ ರಾಜಕೀಯ ವ್ಯವಸ್ಥೆ ಕಾಣಲು ಬಹುಶಃ ಸಾಧ್ಯವಿಲ್ಲವೇನೋ ಎನ್ನಿಸುತ್ತಿದೆ. ಆದರೂ ರಾಜಕಾರಣ ಕೂಲಿ ಕಾರ್ಮಿಕನಿಂದ ಹಿಡಿದು ಸಾಹಿತಿಗಳವರೆಗೂ ಅವಶ್ಯಕತೆಯಿದೆ ಎಂದರು.
ಪರ್ಯಾಯ ಶಕ್ತಿ: ರಾಷ್ಟ್ರೀಯ ಪಕ್ಷಗಳ ದಬ್ಬಾಳಿಕೆ ಸಂಸ್ಕೃತಿಯಿಂದಾಗಿ ದೇಶದಲ್ಲಿರುವ ವಿದ್ಯಾವಂತರು, ಪ್ರಜ್ಞಾವಂತರು, ಸಮಾಜ ಸೇವಕರು, ಪ್ರಾಮಾಣಿಕರು ರಾಜಕೀಯ ವ್ಯವಸ್ಥೆಯಿಂದ ದೂರ ಸರಿಯುತ್ತಿದ್ದಾರೆ. ತಮ್ಮ ವಿರುದ್ಧ ಧ್ವನಿ ಎತ್ತಿದವರ ಬಾಯಿ ಮುಚ್ಚಿಸುವ ಕೆಲಸಗಳಲ್ಲಿ ತೊಡಗಿರುವ ರಾಷ್ಟ್ರೀಯ ಪಕ್ಷಗಳಿಗೆ ಕಡಿವಾಣ ಹಾಕಲು ಮೂರನೇ ಅಥವಾ ಪರ್ಯಾಯ ಶಕ್ತಿಯಾಗಿರುವ ಪ್ರಾದೇಶಿಕ ಪಕ್ಷವೊಂದು ರಾಜ್ಯಕ್ಕೆ ಅನಿವಾರ್ಯವಾಗಿದೆ ಎಂದರು.
ಗಟ್ಟಿತನ ಬೇಕು: ಸಾರ್ವಜನಿಕ ಸೇವೆಯಲ್ಲಿರುವವರಿಗೆ ಗಟ್ಟಿತನ ಬೇಕು. ಕೆಜೆಪಿ ನಾಯಕ ಬಿಎಸ್‌ವೈ ದಿಟ್ಟತನ ಹೋರಾಟದ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ಅವರನ್ನೇ ಮುಂದುವರೆಸಿದರೆ ಮುಂದಿನ 20 ವರ್ಷ ರಾಜಕೀಯ ಸನ್ಯಾಸ ಸ್ವೀಕರಿಸುವ ಭಯದಲ್ಲಿ ಕುತಂತ್ರದಿಂದ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ ಎಂದರು.
ನಂಗ್ಯಾವುದೂ ಆಸೆ ಇಲ್ರೀ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚಂಪಾ, ಯಾವುದೇ ಆಸೆ ಅಥವಾ ಅಕಾಂಕ್ಷೆಗಳನ್ನಿಟ್ಟುಕೊಂಡು ರಾಜಕೀಯ ಪ್ರವೇಶಿಸಿಲ್ಲ. ಕಸಾಪ ರಾಜ್ಯಾಧ್ಯಕ್ಷನಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಅನುಭವಿಸಿದ್ದೇನೆ. ಅದಕ್ಕಿಂತ ಹೆಚ್ಚು ಅಲ್ಲೇನಿದೆ ಎಂದರು.
ಈ ಸಂದರ್ಭದಲ್ಲಿ ಅನಿತ ಸುಬ್ರಹ್ಮಣ್ಯ, ಗಂಗಣ್ಣ ಎಲಿ, ಬಸವರಾಜ ಛತ್ರದ, ಹೇಮಾ ಸಜ್ಜನರ, ಸುಧಾ ಕಳ್ಳಿಹಾಳ, ರೋಹಿಣಿ ಹುಣಸಿಮರದ ಚೇತನ ಮೂಡ್ವಿ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.