ಹಾವೇರಿ

ಲಂಚ: ದ್ವಿತೀಯ ದರ್ಜೆ ಭೂಮಾಪಕರಿಗೆ ಸಜೆ

Published On :

ಹಾವೇರಿ: ಲಂಚ ಪಡೆದ ಆರೋಪದಲ್ಲಿ ಹಾನಗಲ್ನ ದ್ವಿತೀಯ ದರ್ಜೆ ಭೂಮಾಪಕ ಎನ್. ಶಿವಸ್ವಾಮಿ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮೂರು ವರ್ಷ ಶಿಕ್ಷೆ ಹಾಗೂ ರು. 15 ಸಾವಿರ ದಂಡ ವಿಧಿಸಿದೆ. ಹಾನಗಲ್ ತಾಲೂಕು ಹರವಿಯ ತಿರುಕಪ್ಪ ಬಸಪ್ಪ ಜಾವೂರ ಎಂಬುವರು ತಾವು ಖರೀದಿಸಿದ ಎರಡು ಎಕರೆ ಜಮೀನಿನ ಪೋಡಿ ಅಳತೆ ಮಾಡಿಕೊಡಲು ಹಾನಗಲ್ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಭೂಮಾಪಕ ಎನ್. ಶಿವಸ್ವಾಮಿ ಅವರು ರು. 2 ಸಾವಿರ ಲಂಚ ಕೇಳಿದ್ದಾರೆ ಎಂದು 2007ರ ಜು. 13ರಂದು ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸಿ, ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯಕ್ಕೆ 2008ರ ಮಾ. 4ರಂದು ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಆರೋಪ ಸಾಬೀತಾಗಿ, ಆರೋಪಿಗೆ ಲಂಚ ನಿರ್ಮೂಲನಾ ಕಾಯ್ದೆ ಕಲಂ 7, 13(1)ಡಿ ಮತ್ತು 13(2)ರ ಅನುಸಾರ ಒಟ್ಟು 3 ವರ್ಷ ಸಜೆ ಹಾಗೂ ರು. 15 ಸಾವಿರ ದಂಡ ವಿಧಿಸಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶ ಎಚ್.ಪಿ. ಸಂದೇಶ್ ತೀರ್ಪು ನೀಡಿದ್ದಾರೆ. ಹಾವೇರಿ ಲೋಕಾಯುಕ್ತ ಡಿಎಸ್ಪಿ ಎಂ.ಬಿ. ಪಾಟೀಲ್ ಮಾರ್ಗದರ್ಶನದಲ್ಲಿ ಪಿಐ ಜಿ. ಗುರುದತ್ತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ವಿಶೇಷ ಸಾರ್ವಜನಿಕ ಅಭಿಯೋಜಕ ವೈ.ಬಿ. ಹುಳಪಲ್ಲೆ ವಾದ ಮಂಡಿಸಿದ್ದರು. ಹಾವೇರಿ ಲೋಕಾಯುಕ್ತ ಪಿ.ಐ. ಕೆ. ಶ್ರೀನಿವಾಸರನ್ನು ಪೈರವಿ ಅಧಿಕಾರಿಯಾಗಿ ನೇಮಿಸಲಾಗಿತ್ತು ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಶೇ. 94 ಫಲಿತಾಂಶ
ರಾಣಿಬೆನ್ನೂರು: ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ 2013ರಲ್ಲಿ ನಡೆಸಿದ ಬಿಎ 6ನೇ ಸೆಮಿಸ್ಟರ್ ಪರೀಕ್ಷೆಗೆ ನಗರದ ಹಲಗೇರಿ ರಸ್ತೆಯಲ್ಲಿರುವ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯದಿಂದ ಹಾಜರಾಗಿದ್ದ 104 ವಿದ್ಯಾರ್ಥಿಗಳಲ್ಲಿ 98 ಮಂದಿ ಉತ್ತೀರ್ಣರಾಗಿ, ಶೇ. 94 ಫಲಿತಾಂಶ ಲಭಿಸಿದೆ. 54 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 39 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ, ಇಬ್ಬರು ದ್ವಿತೀಯ ಮೂವರು ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ೤ ಆರ್.ಎಂ. ಕುಬೇರಪ್ಪ, ಉಪ ಪ್ರಾಂಶುಪಾಲ ಪ್ರೊ೤ ಎನ್.ಕೆ. ರಾಮಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಡಿವೆಪ್ಪ ಕುಬಸದ ನಿಧನ
ಹಿರೇಕೆರೂರು: ಪಟ್ಟಣದ ಬಸವನ ಬೀದಿಯ ನಿವಾಸಿ, ಪಪಂ ಮಾಜಿ ಸದಸ್ಯ, ಸಮಾಜ ಸೇವಕ, ಅಡಿವೆಪ್ಪ (ಅಜ್ಜಪ್ಪ) ಕುಬಸದ (58) ಅನಾರೋಗ್ಯದಿಂದ ಬಳಲಿ, ಗುರುವಾರ ಮಧ್ಯರಾತ್ರಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧುಗಳು ಇದ್ದಾರೆ.
ಸಂತಾಪ: ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕರಾದ ಬಿ.ಸಿ. ಪಾಟೀಲ, ಬಿ.ಎಚ್. ಬನ್ನಿಕೋಡ, ವಿಧಾನ ಪರಿಷತ್ ಮಾಜಿ ಸಚೇತಕ ಡಿ.ಎಂ. ಸಾಲಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.