ಹೋರಾಟ ಮಾಡಿಯೇ ಬೆಳೆವಿಮೆ ಪಡೆಯಬೇಕೇ?
ಬ್ಯಾಡಗಿ: ಬೆಳೆವಿಮೆ ಹಣವನ್ನು ಬೇರೆ ತಾಲೂಕಿನ ರೈತರು ಈಗಾಗಲೇ ಪಡೆದ ಬಗ್ಗೆ ವದಂತಿಯಿದೆ. ಆದರೆ ತಾಲೂಕಿನ ರೈತರಿಗೆ ಬಿಡುಗಾಸೂ ನೀಡಿಲ್ಲ. ಇದನ್ನೂ ಹೋರಾಟ ಮಾಡಿಯೇ ಪಡೆದುಕೊಳ್ಳಬೇಕೇ ಎಂದು ಗ್ರಾಮಸ್ಥರು ಗದ್ದಲವೆಬ್ಬಿಸಿದ ಘಟನೆ ತರೇದಹಳ್ಳಿ ಜನಸ್ಪಂದನದಲ್ಲಿ ಶನಿವಾರ ನಡೆಯಿತು.
ಬೆಳೆವಿಮೆ ಹಣ ಬಿಡುಗಡೆಯಾದರೆ ಈ ಬಾರಿ ಗೊಬ್ಬರ, ಬೀಜ ಖರೀದಿಸಲು ಆಯಿತೆಂದು ನಿರೀಕ್ಷಿಸಿದ್ದ ರೈತರಿಗೆ ನಿರಾಸೆಯಾಗಿದೆ. 2012ರಲ್ಲಿ ಬಹುತೇಕ ರೈತರು ವಿಮೆ ಕಂತನ್ನು ತುಂಬಿದ್ದಾರೆ. ಹಣ ಬಿಡುಗಡೆ ಆದ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳಷ್ಟೇ ಬರುತ್ತಿವೆ ಎಂದು ತರಾಟೆಗೆ ತೆಗೆದುಕೊಂಡರು.
ಸಹಾಯಕ ಕೃಷಿ ನಿರ್ದೇಶಕ ಟಿ.ಎಚ್. ನಟರಾಜ, ಜಿಲ್ಲೆಯಲ್ಲಿ ಯಾರಿಗೂ ಬೆಳೆವಿಮೆ ಬಿಡುಗಡೆ ಆಗಿಲ್ಲ. ತಾಲೂಕಿನಲ್ಲಿ 16 ಸಾವಿರ ರೈತರಿಗೆ ರು. 13.35 ಕೋಟಿ ಬೆಳೆವಿಮೆ ಬಿಡುಗಡೆಯಾಗಬೇಕಿದೆ. ಶೀಘ್ರದಲ್ಲೇ ರೈತರ ಖಾತೆಗೆ ಜಮೆಯಾಗಲಿದೆ ಎಂದರು.
ಸ್ಮಶಾನ ರಸ್ತೆ ಅಭಿವೃದ್ಧಿಪಡಿಸಿ
ಗ್ರಾಮದ ರುದ್ರಭೂಮಿಗೆ ತೆರಳುವ ರಸ್ತೆ ಕೆಸರು ಗದ್ದೆಯಂತಾಗಿದೆ. ಮಳೆಗಾಲದಲ್ಲಿ ಅಂತ್ಯಕ್ರಿಯೆಗೆ ಸಮಸ್ಯೆಯಾಗಿದೆ. ಕೂಡಲೇ ರುದ್ರಭೂಮಿ ಅಭಿವೃದ್ಧಿಪಡಿಸಿ, ಕಾಂಪೌಂಡ್ ನಿರ್ಮಿಸಬೇಕು. ರಸ್ತೆ ಸುಧಾರಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಸುಭಾಸ ಪುಲಾರೆ ಮಾತನಾಡಿ, ರುದ್ರಭೂಮಿ ಜಾಗೆಯನ್ನು ಹದ್ದುಬಸ್ತು ಮಾಡಿ, ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.
ಶಾಲೆಗೆ ಕೊಠಡಿ ಬೇಕು: ಗ್ರಾಮದ ಏಕೈಕ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ. ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಒಂದು ಕೊಠಡಿ ಮಂಜೂರು ಮಾಡಿ, ಶಾಲೆಗೆ ಆವರಣ ಗೋಡೆ ನಿರ್ಮಿಸಿ ಎಂದು ಆಗ್ರಹಿಸಿದರು. ಬಿಇಓ ಪ್ರಸನ್ನಕುಮಾರ ಪ್ರತಿಕ್ರಿಯಿಸಿ, ಖಾತ್ರಿ ಯೋಜನೆಯಲ್ಲಿ ಆವರಣ ಗೋಡೆ ಕಾಮಗಾರಿ ನಿರ್ವಹಿಸುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳ ಸಂಖ್ಯೆ ಪರಿಗಣಿಸಿ ಕೊಠಡಿ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ವಿದ್ಯುತ್ ಕಂಬ ಸ್ಥಳಾಂತರಿಸಿ
ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬವೊಂದು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದು, ಕೂಡಲೇ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ವೆಚ್ಚವನ್ನು ಗ್ರಾಪಂ ಭರಿಸಿದಲ್ಲಿ ಸಿದ್ಧ ಎಂದು ಹೆಸ್ಕಾಂ ಅಭಿಯಂತರ ತಿಳಿಸಿದರು.
ಡೆಂಘೀ ಜ್ವರದಿಂದ ತಾಲೂಕಿನಲ್ಲಿ ಮಕ್ಕಳು ಸಾವನ್ನಪ್ಪುತ್ತಿರುವ ಸುದ್ದಿ, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಆದರೂ ಗ್ರಾಪಂ ಫಾಗಿಂಗ್ ಮಾಡಿಸುತ್ತಿಲ್ಲ. ಚರಂಡಿ ಹೂಳು ತೆಗೆಸದೆ ಹಲವಾರು ತಿಂಗಳು ಕಳೆದಿವೆ ಎಂದು ದೂರಿದರು. ಅಲ್ಲದೆ, ಗ್ರಾಮದಿಂದ ನಾಲ್ಕು ಕಿ.ಮೀ. ದೂರದ ಮಲ್ಲೂರಿನಲ್ಲಿ ಪಡಿತರ ವಿತರಿಸಲಾಗುತ್ತಿದೆ. ಮಹಿಳೆಯರು, ವೃದ್ಧರು ಅದನ್ನು ತರುವುದು ಕಷ್ಟವಾಗುತ್ತಿದೆ. ಗ್ರಾಮದಲ್ಲೇ ಪಡಿತರ ವಿತರಿಸಿ ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

