ಹಾವೇರಿ

'ರೈತ ಗೀತೆ' ಕಡ್ಡಾಯ

Published On :

- ಜಿ. ಸೋಮಶೇಖರ
ಕೊಟ್ಟೂರು:
ರಾಷ್ಟ್ರಕವಿ ಡಾ. ಕುವೆಂಪು ಅವರ 'ಉಳುವ ಯೋಗಿಯ ನೋಡಲ್ಲಿ' ಗೀತೆ ಒಮ್ಮಿಲೆ ಸರ್ಕಾರಿ ವಲಯದಲ್ಲಿ ಖದರು ಪಡೆದುಕೊಳ್ಳುವತ್ತ ಸಾಗಿದೆ.
ಅನೇಕ ವರ್ಷಗಳ ಕಾಲ ಕೇವಲ ರೈತಪರ ಸಂಘಟನೆ, ಹೋರಾಟಗಳಿಗೆ ಪ್ರೇರಕ ಗೀತೆಯಾಗಿದ್ದ ರಾಷ್ಟ್ರಕವಿಯ ಈ ಗೀತೆಯನ್ನು ಬಿಜೆಪಿ ಸರ್ಕಾರ ಈ ಹಿಂದೆ ರೈತ ಗೀತೆಯನ್ನಾಗಿ ಅಂಗೀಕರಿಸಿ ಕೇವಲ ದಾಖಲೆಗಳಿಗೆ ಸೀಮಿತವಾಗಿರಿಸಿತ್ತು. ಇದನ್ನೇ ಆಧಾರವಾಗಿರಿಸಿಕೊಂಡು ಇದೀಗ ಕೃಷಿ ಮಾರಾಟ ಇಲಾಖೆ ರಾಜ್ಯದಲ್ಲಿನ ಎಲ್ಲಾ ಕೃಷಿ ಉತ್ಪನ್ನ ಮಾರಾಟ ಸಮಿತಿಗಳಲ್ಲಿ ರೈತ ಗೀತೆಯನ್ನು ಕಡ್ಡಾಯವಾಗಿಸಿಕೊಳ್ಳುವಂತೆ ಅಧಿಕೃತ ಆದೇಶ ನೀಡಿದೆ. ರಾಜ್ಯದಲ್ಲಿನ ಎಲ್ಲ ಎಪಿಎಂಸಿ ಮುಖ್ಯ ಪ್ರಾಂಗಣದ ಗಮನಾರ್ಹ ಸ್ಥಳದಲ್ಲಿ ನೇಗಿಲಯೋಗಿಯ ಈ ರೈತ ಗೀತೆಯನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕರು ರಾಜ್ಯದ ಎಲ್ಲ ಎಪಿಎಂಸಿಗಳಿಗೆ ಆದೇಶ ರವಾನಿಸಿದ್ದಾರೆ. ಈ ಆದೇಶ ಕಳೆದ ಫೆಬ್ರವರಿಯಲ್ಲಿ ಹೊರಡಿಸಲಾಗಿದ್ದರೂ ಇದೀಗ ಕಾರ್ಯರೂಪ ಪಡೆದಿದೆ. ಎಪಿಎಂ ಸಮಿತಿ ನೇಗಿಲ ಯೋಗಿಯ ರೈತ ಗೀತೆಯನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಲು 28 ಸಾವಿರ ವ್ಯಯಿಸಲು ನಿರ್ದೇಶಕರು ಅನುಮೋದನೆ ನೀಡಿದ್ದಾರೆ.
ಯಡಿಯೂರಪ್ಪ ಅವಧಿಯಲ್ಲೇ ಅಂಗೀಕಾರ: ಉಳುವ ಯೋಗಿಯ ನೋಡಲ್ಲಿ ಗೀತೆಯನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರೈತಗೀತೆಯನ್ನಾಗಿ ಅಂಗೀಕರಿಸಿ ಸಭೆ ಸಮಾರಂಭಗಳಲ್ಲಿ ಅಲ್ಲಲ್ಲಿ ಈ ಗೀತೆಯನ್ನು ವಾಚಿಸುವ ಪ್ರಯತ್ನ ಸಾಗಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ರೈತಗೀತೆ ಅಷ್ಟಾಗಿ ಪ್ರಭಾವಶಾಲಿಯಾಗಿ ರಾಜ್ಯದ ಕಚೇರಿಗಳಲ್ಲಿ ಪ್ರಭಾವ ಬೀರಲಿಲ್ಲ. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ರೈತ ಗೀತೆಯನ್ನಾಗಿ ಕಡ್ಡಾಯಗೊಳಿಸುವತ್ತ ಮುಂದಾಗಿದೆ.
ಎಪಿಎಂಸಿಯಲ್ಲಿ ಅಳವಡಿಕೆ: ಕೊಟ್ಟೂರು ಎಪಿಎಂಸಿಯ ಮುಖ್ಯ ಕಾರ್ಯಾಲಯಕ್ಕೆ ಪ್ರವೇಶಿಸುವ ಪ್ರಮುಖ ಸ್ಥಳದಲ್ಲೇ ರಾಷ್ಟ್ರಕವಿ ಕುವೆಂಪು ಅವರ ಉಳುವ ಯೋಗಿಯ ನೋಡಲ್ಲಿ ಎಂಬ ರೈತಗೀತೆಯನ್ನು ಈಗ್ಗೆ 3-4  ದಿನಗಳ ಹಿಂದೆ ಅಳವಡಿಸಿದ್ದೇವೆ. ಗ್ರಾನೈಟ್ ಕಲ್ಲಿನಲ್ಲಿ ಈ ಗೀತೆಯನ್ನು ಕೆತ್ತಿಸಲೆಂದೇ ಚಿತ್ರಕಾರನಿಗೆ 2 ತಿಂಗಳ ಹಿಂದೆ ನೀಡಲಾಗಿತ್ತು. ಆದರೆ ಆತ ಕಲ್ಲಿನಲ್ಲಿ ಕೆತ್ತಿಕೊಡಲು ಇಷ್ಟು ದಿನಗಳವರೆಗೆ ಕಾಲವಧಿ ಪಡೆದುಕೊಂಡ. ಹೀಗಾಗಿ ರೈತಗೀತೆಯ ಕಲ್ಲನ್ನು ಅಳವಡಿಸಿಕೊಡಲು ಸ್ವಲ್ಪ ತಡವಾಯಿತು. ಎಪಿಎಂಸಿ ರಾಜ್ಯ ನಿರ್ದೇಶಕರು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಲು ರು. 28 ಸಾವಿರ ವ್ಯಯಿಸಲು ಆದೇಶಿಸಿದ್ದರೂ ಇದಕ್ಕಿಂತಲೂ ಸ್ವಲ್ಪ ಕಡಿಮೆ ಖರ್ಚಿನಲ್ಲಿ ಇದನ್ನು ಕೆತ್ತಿಸಿ ಅಳವಡಿಸಿದ್ದೇವೆ ಎನ್ನುತ್ತಾರೆ ಸ್ಥಳೀಯ ಎಪಿಎಂಸಿ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ.
ಇದುವರೆಗೆ ಸರ್ಕಾರದ ಅನೇಕ ಯೋಜನೆಗಳು, ಘೋಷಣೆಗಳು ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿರುತ್ತಿದ್ದವು. ಅದರಲ್ಲೂ ಅನ್ಯ ಸರ್ಕಾರಗಳು ಹೊರಡಿಸಿದ ಉತ್ತಮ ಯೋಜನೆಗಳ ಹಲವು ಬಾರಿ, ಆಡಳಿತಕ್ಕೆ ಬಂದ ಎಷ್ಟೋ ಸರ್ಕಾರಗಳಿಂದ ತಿರಸ್ಕರಿಸಲ್ಪಟ್ಟಿವೆ. ಈ ಪಟ್ಟಿಗೆ ಕುವೆಂಪು ಅವರ ರೈತಗೀತ ಸೇರದಿರುವುದು ಸಂತಸದ ವಿಷಯ. ಈ ಗೀತೆಯನ್ನು ಕಡ್ಡಾಯಗೊಳಿಸಿದಂತೆ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಿದರೆ ಆಳುವ ಸರ್ಕಾರವನ್ನು ರಾಜ್ಯದ ಅನ್ನದಾತನ ಋಣ ತೀರಿಸಿದಂತಾಗುತ್ತದೆ.

ರಾಷ್ಟ್ರಗೀತೆ, ನಾಡಗೀತೆಗಳ ಸಾಲಿನಲ್ಲಿ ಉಳುವ ಯೋಗಿಯ ನೋಡಲ್ಲಿ ರೈತಗೀತೆ ಎಂದೋ ಸಾಗಬೇಕಿತ್ತು. ರೈತರ ಪ್ರಾತಿನಿಧಿಕ ಸಂಸ್ಥೆಯಾದ ಎಪಿಎಂಸಿಗಳಲ್ಲಿ ಸರ್ಕಾರ ಈಗಲಾದರೂ ಈ ಗೀತೆಯ ಮಹತ್ವವನ್ನು ಅರಿತು ಕಡ್ಡಾಯಗೊಳಿಸಿ ಅಳವಡಿಸಲು ಆದೇಶಿರುವುದು ನಿಜಕ್ಕೂ ಉತ್ತಮ ನಿರ್ಧಾರ. ಈ ಆದೇಶ ಬಹಳ ವರ್ಷಗಳ ಹಿಂದೆ ಜಾರಿಗೊಂಡಿದ್ದರೆ ಇನ್ನೂ ಒಳ್ಳೆಯದಿತ್ತು.
-ಜೆ.ಸಿ. ಶಶಿಧರ, ಕೊಟ್ಟೂರು ಎಪಿಎಂಸಿ ಅಧ್ಯಕ್ಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.