ಪತ್ತಿನ ಸಂಘ ನೂತನ ನಿಯಮ ಮರುಪರಿಶೀಲಿಸಿ
ಹಾನಗಲ್ಲ: ರಾಜ್ಯದಲ್ಲಿ ಪತ್ತಿನ ಸಹಕಾರಿ ಸಂಘಗಳ ಬದಲು ಡಿಸಿಸಿ ಬ್ಯಾಂಕ್ಗಳ ಮೂಲಕವೇ ರೈತರಿಗೆ ಸಾಲ ವಿತರಿಸುವ ಹೊಸ ಯೋಜನೆ, ರೈತ ಸಮುದಾಯವನ್ನು ಸೌಲಭ್ಯಗಳಿಂದ ವಂಚಿತಗೊಳಿಸುವುದು ಹಾಗೂ ಪತ್ತಿನ ಸಹಕಾರಿ ಸಂಘಗಳನ್ನು ಪರೋಕ್ಷವಾಗಿ ಮುಚ್ಚುವ ಕ್ರಮವಾದೀತು. ಈ ನಿಯಮ ಜಾರಿಗೆ ಮರು ಪರಿಶೀಲನೆ ಆಗುವ ಅಗತ್ಯವಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಗುರುವಾರ ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ತಿನ ಸಹಕಾರಿ ಸಂಘಗಳು ಲಾಭದಲ್ಲಿಲ್ಲ. ಸಾಲ ವಸೂಲಿಯಲ್ಲಿ ಸಕಾರಾತ್ಮಕವಾಗಿಲ್ಲ. ಆರ್ಥಿಕವಾಗಿ ಸಬಲವಿಲ್ಲ ಎಂಬ ಆರೋಪಗಳು ಇವೆಯಾದರೂ, ಈ ಆರೋಪಗಳು ಎಲ್ಲ ಸಂಘಗಳಿಗೂ ಅನ್ವಯಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕಾನೂನು ಕ್ರಮ ಜರುಗಿಸಬೇಕು.
ಸಾಕಷ್ಟು ಸಬಲ ಹಾಗೂ ಅಲ್ಲಿನ ರೈತ ಸಮುದಾಯಕ್ಕೆ ಅತ್ಯುತ್ತಮ ಸೇವೆ ನೀಡುವ ಸಹಕಾರಿ ಸಂಘಗಳು ಇವೆ. ಕೋಟಿಗಟ್ಟಲೆ ಠೇವಣಿಗಳನ್ನು ಸಂಗ್ರಹಿಸಿದ ಪತ್ತಿನ ಸಹಕಾರಿ ಸಂಘಗಳೂ ಇವೆ ಎಂದರು.
ಕ್ರಮ ಜರುಗಿಸಿ: ಅಪೆಕ್ಸ್ ಬ್ಯಾಂಕ್ ನಿರ್ಣಯದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮ ಜಾರಿಯಾಗುವುದರಿಂದ ನೇರವಾಗಿ ಕೆಸಿಸಿ ಬ್ಯಾಂಕುಗಳೇ ಸಾಲ ನೀಡುವ ಹಾಗೂ ಸಾಲ ವಸೂಲಿ ಮಾಡುವ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಈಗಿರುವ ಪತ್ತಿನ ಸಹಕಾರಿ ಸಂಘಗಳ ಕೆಲಸ ಏನು ಇಲ್ಲಿರುವ ನೌಕರರು ಮುಂದೆ ಏನು ಮಾಡಬೇಕು ಎಂಬ ಪ್ರಶ್ನೆಗಳು ಉದ್ಭವವಾಗುತ್ತವೆ. ಪತ್ತಿನ ಸಹಕಾರಿ ಸಂಘಗಳಲ್ಲಿ ಕೆಲವು ಸಂಘಗಳು ಕೆಸಿಸಿ ಬ್ಯಾಂಕ್ ನಿಯಮಗಳಡಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅಂಥ ಸಂಘಗಳ ಮೇಲೆ ಕ್ರಮ ಜರುಗಿಸಬೇಕೆ ವಿನಃ ಆ ಕಾರಣಕ್ಕಾಗಿ ಇಡೀ ವ್ಯವಸ್ಥೆ ಮೇಲೆಯೇ ಕೆಟ್ಟ ಪರಿಣಾಮ ಬೀರುವುದು ಸಲ್ಲದು. ನೆಗಡಿಗೆ ಪರಿಹಾರ ಮೂಗನ್ನೇ ಕೊಯ್ಯುವುದಲ್ಲ ಎಂದು ಉದಾಸಿ ಉದಾಹರಿಸಿದರು.
ಜಿಲ್ಲಾವಾರು ಸಾಲ ವಿತರಣೆ: ಗದಗ ಜಿಲ್ಲೆಯಲ್ಲಿ 21 ಸಾವಿರ ರೈತರು ಸದಸ್ಯರಾಗಿದ್ದು, ರು. 66 ಕೋಟಿ ಸಾಲ ವಿತರಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 30 ಸಾವಿರ ರೈತರು ಸದಸ್ಯರಾಗಿದ್ದು ರು. 80 ಕೋಟಿ ಸಾಲ ವಿತರಿಸಲಾಗಿದೆ. ಈ ಮೂರು ಜಿಲ್ಲೆಯ ಪತ್ತಿನ ಸಹಕಾರಿ ಸಂಘಗಳಲ್ಲಿ 15 ನೂರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಈ ಮೂರು ಜಿಲ್ಲೆಗಳಲ್ಲಿರುವ ಕೇವಲ 13 ಕೆಸಿಸಿ ಬ್ಯಾಂಕ್ ಶಾಖೆಗಳು ಎಲ್ಲ ಕಾರ್ಯನಿರ್ವಹಿಸಲು ಕಷ್ಟ.
ಈ ಹೊಸ ನಿಯಮ ಮರು ಪರಿಶೀಲಿಸಿ, ಸಹಕಾರಿ ಸಂಘಗಳನ್ನು ಸದೃಢಗೊಳಿಸುವ ಯೋಜನೆಗಳನ್ನು ರೂಪಿಸಬೇಕು. ಸಂಸ್ಥೆಯ ಲಾಭದ ಜತೆಗೆ ಸಾರ್ವಜನಿಕರ ಸಹಕಾರಕ್ಕೆ ಇಂಥ ಸಂಘಗಳು ನಿಲ್ಲುವ ಅಗತ್ಯವಿದೆ ಎಂದರು.
ಪುನಶ್ಚೇತನ ಅಗತ್ಯ: ಪತ್ತಿನ ಸಹಕಾರಿ ಸಂಘಗಳನ್ನು ಸಬಲಗೊಳಿಸಿದರೆ ರೈತರಿಗೆ ರಾಸಾಯನಿಕ ಗೊಬ್ಬರದಂತಹ ಸಾಮಗ್ರಿ ಸಕಾಲಿಕವಾಗಿ ಸರಿಯಾದ ಬೆಲೆಯಲ್ಲಿ ರೈತರಿಗೆ ಸಿಗಲು ಸಾಧ್ಯ. ಇಲ್ಲವಾದರೆ ಕಾಳಸಂತೆಗೆ ರೈತ ಮಾರುಹೋಗುವ ಸಂದರ್ಭಗಳಿವೆ. ಇಲ್ಲದಿದ್ದರೆ ಈ ಸಂಘಗಳು ಕೇವಲ ರೇಷನ್ ಹಂಚಲು ಸೀಮಿತವಾಗುತ್ತವೆ. ರೈತರು ಬೆಳೆ ವಿಮೆ ಪಾವತಿಸಲು ಹಾಗೂ ಯಶಸ್ವಿನಿ ಆರೋಗ್ಯ ವಿಮೆ ಸೌಲಭ್ಯಕ್ಕೆ ಕೂಡ ಈ ಸಂಘಗಳು ಸಹಕಾರಿಯಾಗಿರುವಾಗ ಇಂಥ ಸಂಘಗಳನ್ನು ಬಲಾಢ್ಯ ಮಾಡುವ ಅಗತ್ಯವಿದೆ ಎಂದು ಸಲಹೆ ಮಾಡಿದರು.
ಕೆಸಿಸಿ ಬ್ಯಾಂಕ್ ಕೂಡ ಈಗ ಪುನಶ್ಚೇತನಗೊಂಡಿದೆ. ಈಗ ಗ್ರಾಮೀಣ ಪ್ರದೇಶದಲ್ಲಿ ಕೃಷಿಕರ ಸಹಕಾರಕ್ಕೆ ನಿಲ್ಲುವ ಪತ್ತಿನ ಸಹಕಾರಿ ಸಂಘಗಳನ್ನು ಪುನಶ್ಚೇತನಗೊಳಿಸುವ ಯೋಜನೆಗಳನ್ನು ಸರ್ಕಾರ ತರಬೇಕು. ಅಪೆಕ್ಸ್ ಬ್ಯಾಂಕ್ ನಿಯಮಗಳನ್ನು ಅನುಸರಿಸಲೇಬೇಕು. ಆದರೆ, ಅದು ಯಾವುದೋ ಕೆಲ ಸಂಘಗಳು ಮಾಡಿದ ಲೋಪಕ್ಕೆ ಇಡೀ ವ್ಯವಸ್ಥೆಯನ್ನೇ ದೂರುವ ಹಾಗೂ ಅದರಂತೆ ಕ್ರಮ ಜರುಗಿಸುವ ಕಾರ್ಯ ಸಲ್ಲದು. ಬಹುಸಂಖ್ಯಾತ ರೈತರಿಗೆ ಈ ಪತ್ತಿನ ಸಹಕಾರಿ ಸಂಘಗಳಿಂದಲೇ ಸಾಲ ಸೌಲಭ್ಯ ಸಿಗುವಂತೆ ಅಪೆಕ್ಸ್ ಬ್ಯಾಂಕ್ ಹಾಗೂ ಸರ್ಕಾರ ಯೋಜನೆಗಳನ್ನು ರೂಪಿಸಿದರೆ ಇದು ರೈತ ಸಮುದಾಯ ಹಾಗೂ ಪತ್ತಿನ ಸಂಘಗಳ ಹಿತ ಕಾಯಬಲ್ಲದು ಎಂದು ಅವರು ರಾಜ್ಯ ಸರ್ಕಾರಿ ಹಾಗೂ ಅಫೆಕ್ಷ ಬ್ಯಾಂಕ್ ಆಡಳಿತ ಮಂಡಳಿಗೆ ಮಾಜಿ ಸಚಿವ ಸಿ.ಎಂ. ಉದಾಸಿ ಸಲಹೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

