ಹಾವೇರಿ

ಬೀರೇಶ್ವರ ಜಾತ್ರೆಯಲ್ಲಿ ಭಕ್ತರ ಮೇಲೆ ಲಾಠಿ: ಮೆಡ್ಲೇರಿ ಉದ್ವಿಗ್ನ

Published On :

ಹಾವೇರಿ: ಬೀರಲಿಂಗೇಶ್ವರ ದೇವರ ಪಾಲಕಿ ಉತ್ಸವದ ಮೆರವಣಿಗೆಯಲ್ಲಿ ಭಕ್ತರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಐದು ದಿನಗಳ ಉತ್ಸವದ ಕೊನೆಯ ದಿನವಾದ ಮಂಗಳವಾರ ಬೀರಲಿಂಗೇಶ್ವರ, ಕಡೂರ ಶಿದ್ದೇಶ್ವರ (ಕಡ್ರಪ್ಪಜ್ಜ), ತಳಿಲಿಂಗೇಶ್ವರ ದೇವರ ಪಾಲಕಿ ಉತ್ಸವದ ಮೆರವಣಿಗೆ ದೇವಸ್ಥಾನದ ಹೊರ ಗುಡಿಯಿಂದ ಒಳಗುಡಿಗೆ ಪ್ರವೇಶ ಮಾಡುವ ದಾರಿಯಲ್ಲಿ ಈ ಘಟನೆ ಸಂಭವಿಸಿದೆ.
ಬಟ್ಟೆ ವ್ಯಾಪಾರಿ ಮಂಜಪ್ಪ ಪುಠಾಣಕರನ ಅಂಗಡಿಯ ಹತ್ತಿರ ಪಾಲಕಿ ಬಂದಾಗ ತಳ್ಳಾಟ ಉಂಟಾಗಿ ಪೊಲೀಸರು ತಡೆದಿದ್ದೇ ಗಲಾಟೆಗೆ ಕಾರಣವಾಗಿದೆ ಎನ್ನಲಾಗಿದೆ. ನೆರೆದಿದ್ದ ಸಹಸ್ರಾರು ಭಕ್ತರನ್ನು ಚದರಿಸಲು ಲಾಠಿ ಪ್ರಹಾರ ಮಾಡಿದರು. ಘಟನೆಯಲ್ಲಿ 10ಕ್ಕೂ ಅಧಿಕ ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಾಠಿ ಪ್ರಹಾರಕ್ಕೆ ಹೆದರಿದ ಭಕ್ತರು ದಾರಿಯಲ್ಲೇ ಪಲ್ಲಕ್ಕಿ ಬಿಟ್ಟು ಓಡಿಹೋಗಿದ್ದಾರೆ. ಆಮೇಲೆ ಪೊಲೀಸರೇ ಪಾಲಕಿ ಹೊತ್ತು ಗರ್ಭಗುಡಿಗೆ ತರುವಂತೆ ಭಕ್ತರು ಪಟ್ಟು ಹಿಡಿದು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ, ಧರಣಿ ನಡೆಸಿದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಭಕ್ತರು ಮತ್ತು ಗ್ರಾಮಸ್ಥರ ಜೊತೆ ಎರಡು ತಾಸು ಚರ್ಚಿಸಿ, ಪರಿಸ್ಥಿತಿ ತಿಳಿಗೊಳಿಸಿದರು.
ಘಟನೆಗೆ ಕಾರಣ: ಪುಠಾಣಕರ ಎಂಬಾತ ದೇವಸ್ಥಾನಕ್ಕೆ ಸೇರಿದ 21 ಗುಂಟೆ ಜಾಗೆಯನ್ನು ಬೇರೆಯವರಿಗೆ ಖರೀದಿ ಮಾಡಿಕೊಡುವಲ್ಲಿ ಮಧ್ಯಸ್ಥಗಾರನಾಗಿದ್ದ. ಇದೇ ಕಾರಣಕ್ಕಾಗಿ ಪುಠಾಣಕರ, ವಾರದ ಹಿಂದೆ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಮನವಿ ಮಾಡಿದ್ದ ಎಂದು ಹೇಳಲಾಗಿದೆ. ಆಸ್ತಿ ವ್ಯವಹಾರದ ಕುರಿತು ಗ್ರಾಮಸ್ಥರಲ್ಲಿ ತಪ್ಪು ಅಭಿಪ್ರಾಯ ಮೂಡಿತ್ತು. ಆದರೂ, ಘಟನೆಗೆ ಅಸಲಿ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಗ್ರಾಮದಲ್ಲಿ ಎರಡು ಡಿಆರ್, ಎರಡು ಕೆಎಸ್‌ಆರ್‌ಪಿ ಹಾಗೂ ಅರೆಸೇನಾ ತುಕುಡಿ ್ನ ನಿಯೋಜಿಸಲಾಗಿದೆ. ಘಟನೆ ಸಂಬಂಧ ಹಲವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.