ಹಾವೇರಿ

ಪ್ರಬಲ ನಾಯಕತ್ವ ದೇಶಕ್ಕೆ ಅನಿವಾರ್ಯ

Published On :

ಬ್ಯಾಡಗಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನಡೆಸಿದ ದುರಾಡಳಿತದಿಂದ ದೇಶ 2ನೇ ಬಾರಿಗೆ ತುರ್ತು ಪರಿಸ್ಥಿತಿ (ಎಮರ್ಜನ್ಸಿ) ಎದುರಿಸುವಂತಾಗಿದೆ. ಪರ್ಯಾಯ ಸರ್ಕಾರ ಹಾಗೂ ನಾಯಕತ್ವ ದೇಶಕ್ಕೆ ಅನಿವಾರ್ಯ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ ಪರ ಪ್ರಚಾರಾರ್ಥವಾಗಿ ಭಾನುವಾರ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕೆಜೆಪಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
10 ವರ್ಷಗಳಿಂದ ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಯುಪಿಎ ಸರ್ಕಾರ ಸಾಲು ಸಾಲಾಗಿ ನಡೆಸಿದ ಲಕ್ಷ ಕೋಟಿಗೂ ಮೀರಿದ ಹಗರಣಗಳು ಇಂದು ದೇಶ ಆರ್ಥಿಕವಾಗಿ ದಿವಾಳಿಯಾಗಲು ಕಾರಣ. ಇದರ ಪರಿಣಾಮ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನದ ಪರಿಣಾಮ ವಿಪರ್ಯಾಸವೆಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರುಪಾಯಿಗೆ ಮಾನ್ಯತೆ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ದೇಶಕ್ಕೆ ಆರ್ಥಿಕ ಭದ್ರತೆಯೇ ಒಂದು ಸವಾಲಾಗಿ ಪರಿಣಮಿಸಿದ್ದು, ಒಬ್ಬ ಅರ್ಥಶಾಸ್ತ್ರಜ್ಞ ಎರಡು ಅವಧಿಗೆ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿದಾಗಲೂ ದೇಶಕ್ಕೆ ಇಂತಹ ಸ್ಥಿತಿ ಬಂದೊದಗಿರುವುದು ದುರಂತ. ಇಂತಹ ಸನ್ನಿವೇಶಗಳನ್ನು ನಿಭಾಯಿಸಲು ವಿಫಲವಾಗಿರುವ ಕಾಂಗ್ರೆಸ್ ಯಾವುದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಿದೆ ಎಂದು ಆರೋಪಿಸಿದರು.
ಪೀಪಲ್ ಪಾಲಿಟಿಕ್ಸ್: ಬರುವ ದಿನಗಳಲ್ಲಿ ಪವರ್ ಪಾಲಿಟಿಕ್ಸ್ ದೂರವಾಗಲಿದ್ದು, ಪೀಪಲ್ಸ್ ಪಾಲಿಟಿಕ್ಸ್ ಮಾತ್ರ ಉಳಿಯಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ಹರಿಹಾಯ್ದರು. ವ್ಯಕ್ತಿಗಿಂತ ರಾಜಕಾರಣ ದೊಡ್ಡದು ಎಂಬುದು ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಪಾಠ ಕಲಿತುಕೊಳ್ಳಬೇಕಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ, ಸಣ್ಣತನದ ರಾಜಕಾರಣ ನಡೆಸಿದ ಹಿನ್ನೆಲೆಯಲ್ಲಿ ಕೊನೆ ಹಂತದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಖೇದ ವ್ಯಕ್ತಪಡಿಸಿದರು.
ಎರಡು ಶಾಲಿನ ಒಗ್ಗಟ್ಟು: ಬಿಜೆಪಿ ಹಾಗೂ ಕೆಜೆಪಿ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳಬೇಕೆ ಅಥವಾ ವಿಲೀನಗೊಳಿಸಬೇಕೆ ಎಂಬುದರ ಕುರಿತು ವರಿಷ್ಠರ ಬಳಿ ಚರ್ಚೆಯಲ್ಲಿರುವಾಗಲೇ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಬಿಜೆಪಿ ಹಾಗೂ ಕೆಜೆಪಿ 2 ಪಕ್ಷದ ಶಾಲನ್ನು ಕೊರಳಲ್ಲಿ ಹಾಕಿಕೊಳ್ಳುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದ ಘಟನೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.