ಹಾವೇರಿ

ಹಾವೇರಿ: ಶೇ. 99.85 ಮತದಾನ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಆ. 22
ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಗುರುವಾರ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಶೇ. 99.85ರಷ್ಟು ಮತದಾನವಾಗಿದ್ದು, ಸಂಪೂರ್ಣ ಶಾಂತ ರೀತಿಯಿಂದ ಸಂಪನ್ನಗೊಂಡಿತು.
ಹಾವೇರಿ ಜಿಲ್ಲೆಯ 216 ಮತ ಕೇಂದ್ರಗಳಲ್ಲಿ 3298 ಮತದಾರರಿದ್ದರು. ಈ ಪೈಕಿ 3293 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೇವಲ ಐವರು ಮತದಾನ ಮಾಡಿಲ್ಲ. ಹೀಗಾಗಿ, ಶೇ. 99.85ರಷ್ಟು ಮತದಾನವಾಯಿತು. ಶಿಗ್ಗಾಂವಿ, ಹಾವೇರಿ ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ಶೇ. 100ರಷ್ಟು ಮತದಾನವಾಗಿದ್ದು ವಿಶೇಷ. ಸವಣೂರು ಶೇ. 99.36, ಹಾನಗಲ್ ಶೇ. 99.82, ರಾಣಿಬೆನ್ನೂರು ಶೇ. 99.84 ಹಾಗೂ ಹಿರೇಕೆರೂರಲ್ಲಿ ಶೇ. 99.82 ಮತದಾನ ದಾಖಲಾಗಿದೆ.
ಹುಬ್ಬಳ್ಳಿ-ಧಾರವಾಡ ಹಾಗೂ ಗದಗ ಜಿಲ್ಲೆಗಳಿಗಿಂತಲೂ ಹೆಚ್ಚಿನ ಮತದಾರರನ್ನು ಹಾವೇರಿ ಜಿಲ್ಲೆ ಹೊಂದಿದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಇಲ್ಲಿನ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ವಿಶೇಷ ಕರಸತ್ತು ನಡೆಸಿದ್ದರು.
ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಹಾವೇರಿ ಜಿಲ್ಲೆಯಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮತದಾನ ನಡೆಯಿತು.
ಸಂಸದ ಶಿವಕುಮಾರ ಉದಾಸಿ, ಶಾಸಕ ರುದ್ರಪ್ಪ ಲಮಾಣಿ ತಮ್ಮ ಬೆಂಬಲಿಗರೊಂದಿಗೆ ಬೆಳಗ್ಗೆ 11.30ರ ಸುಮಾರಿಗೆ ಹಾವೇರಿ ಜಿಪಂ ಮತ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಶಿಗ್ಗಾಂವಿ ತಾಪಂನಲ್ಲಿ ಮಾಜಿ ಸಚಿವ, ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಬೆಂಬಲಿಗರೊಂದಿಗೆ ತೆರಳಿ ಮತ ಚಲಾಯಿಸಿದರು. ತಮ್ಮ ಪಕ್ಷಗಳ ಹಿರಿಯ ನಾಯಕರೊಂದಿಗೆ ತೆರಳಿ ಮತ ಚಲಾಯಿಸಲು ಅನೇಕ ಚುನಾಯಿತ ಪ್ರತಿನಿಧಿಗಳು ಕಾಯುತ್ತ ನಿಂತಿದ್ದು ಕಂಡು ಬಂದಿತು.
ಬೆಳಗ್ಗೆ ಮತದಾನ ಪ್ರಕ್ರಿಯೆ ನೀರಸವಾಗಿತ್ತಾದರೂ ಮಧ್ಯಾಹ್ನದ ವೇಳೆ ಚುರುಕು ಪಡೆದುಕೊಂಡಿತು. ಕೇವಲ 23 ಮತಗಳನ್ನು ಹೊಂದಿದ್ದ ದೇವಗಿರಿ ಗ್ರಾಪಂದಲ್ಲಿ ಮಧ್ಯಾಹ್ನ 12.30ರ ಹೊತ್ತಿಗೆ ಪೂರ್ಣ ಪ್ರಮಾಣದ ಮತದಾನವಾಗಿತ್ತಲ್ಲದೆ, ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದು ಕಂಡು ಬಂದಿತು. ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಮಧ್ಯಾಹ್ನ 3ರ ಹೊತ್ತಿಗೆ ಮತದಾನ ಪ್ರಕ್ರಿಯೆ ಸಂಪನ್ನಗೊಂಡಿತ್ತು.
ಮುಖಂಡರ ದಂಡು
ಕಾಂಗ್ರೆಸ್, ಬಿಜೆಪಿ ಮತ್ತು ಕೆಜೆಪಿ ಮುಖಂಡರು ಜಿಲ್ಲೆಯ ವಿವಿಧ ಮತ ಕೇಂದ್ರಗಳಿಗೆ ಭೇಟಿ ನೀಡಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಮತದಾನ ಮಾಡುವಂತೆ ವಿನಂತಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ಪ್ರಥಮ ಬಾರಿಗೆ ಗ್ರಾಪಂಗಳಿಗೆ ಚುನಾಯಿತರಾಗಿರುವ ಪ್ರತಿನಿಧಿಗಳಿಗೆ ಪರಿಷತ್ ಚುನಾವಣೆಯಲ್ಲಿ ಯಾವ ರೀತಿಯಾಗಿ ಮತದಾನ ಮಾಡಬೇಕು ಎಂಬುದನ್ನು ಕೆಲ ಮುಖಂಡರು ತಿಳಿಸುತ್ತಿರುವುದೂ ಕಂಡು ಬಂದಿತು.
ಪೊಲೀಸ್ ಬಂದೋಬಸ್ತ್
ಪರಿಷತ್ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ನಡೆದ ಚುನಾವಣೆಯಲ್ಲಿ ಎಲ್ಲಿಯೂ ಅಹಿತಕರ ಘಟನೆಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.