ಹಾವೇರಿ

ಬೀಜ ನೀತಿ ಪ್ರಕಟಿಸದಿದ್ರೆ ಹೋರಾಟ

Published On :

ಬ್ಯಾಡಗಿ: ಕುಲಾಂತರಿ ಹಾಗೂ ಕಳಪೆ ಬೀಜ ಕಂಪನಿಗಳ ಜೊತೆ ಸರ್ಕಾರ ಕೈಜೋಡಿಸುತ್ತಿದೆ, ರೈತನ ಹಿತಾಸಕ್ತಿ ಕಾಪಾಡಲು ಬೀಜ ನೀತಿಯನ್ನು ಪ್ರಕಟಿಸದಿದ್ದಲ್ಲಿ ಸರ್ಕಾರದ ವಿರುದ್ಧ ಎಂತಹ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ರೈತ ಸಂಘದ ಅಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಎಚ್ಚರಿಸಿದರು.
ಕಳಪೆ ಬೀಜ ವಿತರಿಸಿದ ಜಿಯೋಸೀಡ್ಸ್ ಕಂಪನಿ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಸ್ಥಳೀಯ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ರೈತ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳಪೆ ಬೀಜ ಮಾರಾಟ ಮಾಡುವ ಮೂಲಕ ರೈತನಿಗೆ ಅನ್ಯಾಯವೆಸಗುತ್ತಿರುವ ಬೀಜ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುತ್ತಿಲ್ಲ. ಹೀಗಾದರೆ ದೇಶದ ರೈತರ ಗತಿ ಏನು? ಆತನಿಗಾದ ನಷ್ಟಕ್ಕೆ ಪರಿಹಾರ ನೀಡುವವರು ಯಾರು? ಎಂದು ಪ್ರಶ್ನಿಸಿದರು.
ಅತಿವೃಷ್ಟಿ, ಅನಾವೃಷ್ಟಿ, ವನ್ಯಜೀವಿಗಳ ಕಾಟ, ವೈಜ್ಞಾನಿಕ ಬೆಲೆ ನಿಗದಿಯಿಲ್ಲದೆ ಸದಾ ಪ್ರಕೃತಿ ಜತೆ ಸೆಣಸುತ್ತಿರುವ ಸಾಲದ ಕೂಪದಲ್ಲಿ ರೈತ ಸಿಲುಕಿದ್ದಾನೆ. ನಕಲಿ ಬೀಜ ಕಂಪನಿಗಳ ಹಾವಳಿ ಈಚೆಗೆ ಹೆಚ್ಚಿದ್ದು ಬಿತ್ತನೆಗೂ ಮುನ್ನ ನೀಡಿದ್ದ ಭರವಸೆಗಳು ಈಡೇರುತ್ತಿಲ್ಲ ಎಂದು ಆರೋಪಿಸಿದ ಅವರು, ಕೆರೂಡಿ ಗ್ರಾಮವೊಂದರಲ್ಲೇ ಸುಮಾರು 250ಕ್ಕೂ ಹೆಚ್ಚು ಎಕರೆ ಬೆಳೆ ನಾಶವಾಗಿದ್ದು ಜೀಯೋಸೀಡ್ಸ್ ಕಂಪನಿ ಇನ್ನೆಷ್ಟು ಅವಾಂತರ ಸೃಷ್ಟಿಸಿದೆ ಎಂಬುದು ತನಿಖೆಯಿಂದ ತಿಳಿದುಕೊಳ್ಳಬೇಕಾಗುತ್ತದೆ ಎಂದರು.
ವಿಜ್ಞಾನಿಗಳ ಶಾಮೀಲು: ಮುಖಂಡ ಗಂಗಣ್ಣ ಎಲಿ ಮಾತನಾಡಿ, ಕಳೆದ ಅ.21ರಂದು ವಿಜ್ಞಾನಿಗಳು ಸ್ಥಳ ಹಾಗೂ ಬೆಳೆ ಪರಿಶೀಲನೆ ನಡೆಸಿದ್ದು ಒಂದುವಾರ ಗತಿಸಿದ್ದರೂ ಈವರೆಗೂ ವರದಿ ಸಲ್ಲಿಸಿಲ್ಲ. ಹೀಗಾಗಿ ವಿಜ್ಞಾನಿಗಳು ಜಿಯೋ ಕಂಪನಿಯೊಂದಿಗೆ ಶಾಮೀಲಾಗಿರುವ ಕುರಿತು ರೈತರಲ್ಲಿ ಅನುಮಾನ ವ್ಯಕ್ತವಾಗುತ್ತಿದೆ ಎಂದರು.
ಅನಿರ್ದಿಷ್ಟ ಅವಧಿ ಮುಷ್ಕರ: ರೈತರು ಈ ಹಿಂದೆ ಮನವಿಯೊಂದನ್ನು ಸಲ್ಲಿಸಿದ್ದು ಪರಿಹಾರ ಒದಗಿಸಲು ಎಂಟು ದಿನ ಗಡುವು ನೀಡಲಾಗಿತ್ತು, ಆ ಒಳಗಾಗಿ ಪರಿಹಾರ ನೀಡದಿದ್ದಲ್ಲಿ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಅನಿರ್ದಿಷ್ಟ ಅವಧಿಯವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು.
ಅಧ್ಯಕ್ಷ ಚಿಕ್ಕಪ್ಪ ಛತ್ರದ, ಕೆ.ವಿ. ದೊಡ್ಡಗೌಡ್ರ, ಶಶಿಧರ ಛತ್ರದಮಠ, ಶಶಿಧರ ದೊಡ್ಮನಿ, ನಾಗರಾಜ ಬಿದರಿ, ರಮೇಶ ಮಾತನವರ, ರಾಜಪ್ಪ ಕೊಂಡಜ್ಜಿ, ಜಗದೀಶ ಸೇಲರ, ಶ್ರೀಧರ ಸಾಳುಂಕೆ, ಪ್ರಕಾಶ ಗಣೇಶಕರ, ಬಸನಗೌಡ್ರ ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.