ಹಾವೇರಿ

ದುಶ್ಚಟ ದಾಸರಾಗುತ್ತಿರುವ ಯುವಕರು

Published On :

ಹಾವೇರಿ: ಆಧುನಿಕತೆಗೆ ಮಾರು ಹೋಗಿ ಯುವ ಜನತೆ ನಾಡಿನ, ದೇಶದ ಉತ್ತಮ ಸಾಹಿತ್ಯ, ಉನ್ನತ ಸಂಸ್ಕೃತಿ, ಧಾರ್ಮಿಕ ಆಚರಣೆ ಮರೆತು ಸಾಮಾಜಿಕ ಪಿಡುಗಿನಂತಿರುವ ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ ಎಂದು ಶಿರಹಟ್ಟಿ ಸಂಸ್ಥಾನಮಠದ ಜಗದ್ಗುರು ಫಕ್ಕೀರ ಸಿದ್ಧರಾಮ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಹೊಸರಿತ್ತಿ ಗ್ರಾಮದ ಪರಮೇಶ್ವರಯ್ಯ ಸಾಲಿಮಠ ಅವರ ತೋಟದಲ್ಲಿ ಈಶ್ವರ, ನಂದಿ ಹಾಗೂ ಮಾಲೆಮ್ಮ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನ ಉದ್ಘಾಟನಾ ಸಮಾರಂಭ ಹಾಗೂ ಜಂಗಮ ವಟುಗಳಿಗೆ ಶಿವ ದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧಾರ್ಮಿಕ ಆಚರಣೆಯಿಂದ ದಿನದ ಅಲ್ಪ ಸಮಯವಾದರೂ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು, ಯುವಕರು ಧಾರ್ಮಿಕತೆ ಬೆಳೆಸಿಕೊಂಡು, ಧ್ಯಾನ, ಯೋಗ ಮಾಡುವುನ್ನು ಬೆಳೆಸಿಕೊಳ್ಳಬೇಕು. ಇದರಿಂದ ದಿನನಿತ್ಯದ ಬದುಕಿನಲ್ಲಿ ಒಳ್ಳೆಯದನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ಮನುಷ್ಯ ಧರ್ಮ ಮಾರ್ಗದಲ್ಲಿ ನಡೆಯಬೇಕಾದರೆ ಭಕ್ತಿ ಶ್ರದ್ಧೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ನಾಗರಿಕರಾಗಬೇಕಾದರೆ ಧಾರ್ಮಿಕ ಕಾರ್ಯಗಳನ್ನು ನಡೆಸುವದು, ದೇವಸ್ಥಾನಗಳಿಗೆ ಹೋಗಿ ಭಕ್ತಿಯ ಕಾರ್ಯಗಳನ್ನು ಮಾಡುವದನ್ನು ಪ್ರತಿಯೊಬ್ಬರೂ ಮಾಡಿದಾಗ ಮಾತ್ರ ಸಾಧ್ಯವೆಂದು ನುಡಿದರು.
ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಗ್ರಾಮೀಣ ಪ್ರದೇಶದ ಯುವಕರು ಇತ್ತೀಚಿನ ದಿನದಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇವರೆಲ್ಲ ಮುಂಬರುವ ದಿನಗಳಲ್ಲಿ ಸ್ವಾಸ್ಥ್ಯ, ಸದೃಢ ಸಮಾಜ ನಿರ್ಮಾಣ ಮಾಡುವವರು, ಇಂತಹ ಯುವಕರು ಗುಟ್ಕಾ, ಮದ್ಯಪಾನ ವ್ಯಸನಕ್ಕೆ ಬಲಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ರುದ್ರಪ್ಪ ಲಮಾಣಿ, ಪರಮೇಶಪ್ಪ ಸಾಲೀಮಠ ಅವರು ಗ್ರಾಮದಿಂದ ದೂರವಿರುವ ಹೊಲದಲ್ಲಿ ಮೊದಲು ವಾಸಮಾಡಿದ್ದರು, ಈಗ ಸುತ್ತಲಿನ ಹೊಲಗಳ ಮಾಲೀಕರು ಮನೆಗಳನ್ನು ನಿರ್ಮಿಸಿ ವಾಸ ಮಾಡುತ್ತಿರುವುದರಿಂದ ಇದೊಂದು ಚಿಕ್ಕ ಗ್ರಾಮವಾದಂತೆ ಆಗಿದೆ, ಹೊಲಗಳಲ್ಲಿ ದುಡಿದು ಬಂದು ದೇಹಕ್ಕಾದ ದಣಿವನ್ನು ನೀಗಿಸಿಕೊಳ್ಳು ಹಾಗೂ ಮನಸ್ಸಿಗೆ ಶಾಂತಿಯನ್ನು ಕಂಡು ಕೊಳ್ಳಲು ದೇವಾಲಯಗಳು ಅವಶ್ಯಕ ಇದನ್ನು ತಮ್ಮ ಹೊಲದಲ್ಲಿ ಸಾಲಿಮಠ ಅವರು ನಿರ್ಮಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೆಗಳೂರು ಹಿರೇಮಠದ ಗುರುಶಾಂತ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ವಾಸ್ತು ಶಾಂತಿ, ನವಗ್ರಹ ಶಾಂತಿ ಹಾಗೂ ಜಂಗಮ ವಟುಗಳಿಗೆ ಶಿವ ದೀಕ್ಷಾ ಕಾರ್ಯಕ್ರಮವನ್ನು ನೆರವೇರಿಸಿದರು.
ಹೊಸರಿತ್ತಿಯ ಗುದ್ಲೇಶ್ವರ ಶ್ರೀ ಸಮ್ಮುಖ ವಹಿಸಿದ್ದರು. ಹೂವಿನಶಿಗ್ಲಿ ವಿರಕ್ತ ಮಠದ ಚನ್ನವೀರೇಶ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಸವರಾಜ ಶಿವಣ್ಣನವರ, ಜಿಪಂ ಮಾಜಿ ಸದಸ್ಯ ಎಂ.ಎಂ. ಹಿರೇಮಠ, ರಾಜಣ್ಣ ಪುರದ, ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ., ವೀರಯ್ಯ ಮಾಗಡಿಮಠ, ಹನುಮಂತಪ್ಪ ಅಗಾಡಿ, ಖಾದರಸಾಬ ಉಸ್ಮಾನಖಾನವರ, ದೇವೇಂದ್ರಪ್ಪ ತೋಟಗೇರ, ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.