ಕಾವ್ಯ ಹರಿಯುವ ನದಿ ಇದ್ದಂತೆ: ಶ್ರೀನಿವಾಸ
ಹಾವೇರಿ: ಕಾವ್ಯ ಹರಿಯುವ ನದಿ ಇದ್ದಂತೆ. ಅನೇಕ ಹೊರಳು ಪಡೆಯುತ್ತ ತನ್ನ ಅನನ್ಯತೆಯಲ್ಲಿ ಕಾಲದ ಭಾವಕೋಶಗಳ ಪ್ರಕಟಿಸುವುದು ಕಾವ್ಯದ ಗುಣ. ಬಚ್ಚಿಡುವುದಕ್ಕಿಂತ, ಕಾವ್ಯಕ್ಕೆ ಬಿಚ್ಚಿಡುವ ಗುಣವಿರಬೇಕು. ಕಾಲದ ಅಗ್ನಿ ಪರೀಕ್ಷೆ ಗೆದ್ದು ಬದುಕುವುದೇ ನಿಜವಾದ ಕಾವ್ಯ ಎಂದು ಕವಿ ಬಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕನ್ನಡ ಕಾವ್ಯ ಭಾಷೆ-ಒಂದು ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಬೀಳಗಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ, ಕವಿ ಶಂಕರ ಕಟಗಿ, ಪ್ರತಿಯೊಬ್ಬ ಕವಿ ತನ್ನ ಕಾವ್ಯ ಭಾಷೆಯ ಬಳಕೆಯ ಬಗ್ಗೆ ಜಾಗೃತನಾಗಿರಬೇಕು. ಬೆಳಕನ್ನು ಕುಡಿದು, ಬೆಳಕನ್ನೇ ತಿಂದು ಬದುಕುವ ಚಕೋರಿಯಂತೆ ಬೆಳಕು ಭಾವಗಳನ್ನು ತಿಂದು-ಕುಡಿದು ಕವಿತೆ ಹೊರ ಹೊಮ್ಮಬೇಕು. ಕವಿತೆಯ ಭಾಷೆ ಚಕೋರಿಯ ಭಾಷೆ ಎಂದು ಕಟಗಿ ಹೇಳಿದರು.
ಕಾವ್ಯ-ಭಾಷಾ ಸಂವಾದದ ಅಧ್ಯಕ್ಷತೆಯನ್ನು ಹಿರಿಯ ಕವಿ ಸತೀಶ ಕುಲಕರ್ಣಿ ವಹಿಸಿ, ಕಾವ್ಯ ಕಾಲದ ಭಾಷೆ. ಪ್ರತಿಯೊಂದು ಕಾಲಘಟ್ಟದಲ್ಲಿ ಸಂಕೀರ್ಣ, ಸಡಿಲು, ಸಹಜ ಬೇರೆ ಬೇರೆ ಪಾತಳಿಗಳನ್ನು ತಾಳಿದೆ. ಪಂಪ, ಬಸವ, ಕುವೆಂಪು ಹಾಗೂ ನವ್ಯ ಬಂಡಾಯದಲ್ಲಿ ಬಳಕೆಯಾದ ಕಾವ್ಯ ಭಾಷೆ ಕಾಲದ ಭಾಷೆಯೇ ಆಗಿದೆ ಎಂದರು.
ನಂತರ ನಡೆದ ಸಂವಾದದಲ್ಲಿ ತುಂಬ ಗಂಭೀರ ಪ್ರತಿಕ್ರಿಯೆಗಳನ್ನು ಸಂವಾದಕರು ನೀಡಿದರು. ಪುಷ್ಪಾ ಶೆಲವಡಿಮಠ ಕಾವ್ಯದ ಭಾಷೆ ಭಾವಪೂರ್ಣವಾಗಿರಬೇಕು ಎಂದರು. ಪ್ರೊ. ಎಂ.ಕೆ. ಕಲ್ಲಜ್ಜನವರ ಐರಿಶ್ ಭಾಷೆಯಲ್ಲಿ ಇಂಗ್ಲಿಷ್ ಕಾವ್ಯವು ಯಶಸ್ವಿಯಾದಂತೆ, ಕವಿ ಬೇರೆ ಭಾಷೆಯಲ್ಲಿಯೂ ಬರೆಯುವಂತಾಗ ಬೇಕೆಂದರು.
ಪ್ರಾಚಾರ್ಯ ಹೇಮಂತ ಘಂಟೇರ, ತಾವೊಬ್ಬ ಓದುಗನಾಗಿ ಕಾವ್ಯ ಭಾಷೆ ಮತ್ತು ವಾಸ್ತವ ನಿರೂಪಣೆ ಅಂತರಗಳು ಕವಿಗೆ ಗೊತ್ತಿದ್ದಾಗ ಮಾತ್ರ ಜನರಿಗೆ ಹಿತವೆನಿಸುವ ಕವಿತೆ ಬರೆಯಲು ಸಾಧ್ಯ ಎಂದು ವಾದ ಮಂಡಿಸಿದರು. ಡಾ. ಜಗನ್ನಾಥ ಗೇನಣ್ಣವರ ಸಿದ್ದಲಿಂಗಯ್ಯನವರ ಕಾವ್ಯ ಭಾಷೆಯ ಪಾವಿತ್ರ್ಯದ ಬಗ್ಗೆ ಮಾತನಾಡಿದರು. ಪ್ರೊ. ಜಿ.ಜಿ. ಕಮ್ಮಾರ ಹಲವು ಕವಿಗಳ ಭಾಷೆಗೆ ಸರಿಯಾದ ಕವಿತೆಗಳ ಉದಾಹರಣೆಗಳನ್ನು ನೀಡಿ ಪ್ರತಿಯೊಬ್ಬ ಕವಿಗೆ ತನ್ನದೇಯಾದ ಕಾವ್ಯ ಭಾಷೆಯಿದೆ ಎಂದರು. ಡಾ. ನಿಂಗಪ್ಪ ಮುದೇನೂರ, ಕಾವ್ಯ ಭಾಷೆ ಏಕರೂಪದ್ದಲ್ಲ ಬಹುರೂಪಿ. ಧ್ವನಿ, ರಸ, ಸಂರಚನೆ ಇವೆಲ್ಲ ಕಾವ್ಯ ಭಾಷೆಯನ್ನು ರೂಪಿಸುತ್ತವೆ ಎಂದರು. ಜಿ.ಬಿ. ಮಾಸಣಗಿ, ಯುವಕವಿ ಲಿಂಗರಾಜ ಸೊಟ್ಟಪ್ಪನವರ, ಡಾ. ಸುಮಂಗಲಾ ಅತ್ತಿಗೇರಿ, ಡಾ. ಶೋಭಾ ತಪಶಿ, ಮಲ್ಲಿಕಾರ್ಜುನ ಶಾಂತಗಿರಿ, ಗುರುರಾಜ ಶಿರಹಟ್ಟಿ, ಚಂ.ಸು. ಪಾಟೀಲ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಂವಾದವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವೀರೂಪಾಕ್ಷ ಪಡಿಗೋದಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

