ಪಂ. ಪುಟ್ಟರಾಜರು ಅನಾಥರ ಬಾಳಿನ ಉದ್ಧಾರಕ
ಹಾನಗಲ್ಲ: ವಿಶ್ವಮಾನ್ಯ ಸಂಗೀತ ಶ್ರೇಷ್ಠ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಒಬ್ಬ ವ್ಯಕ್ತಿಯಾಗಿ ಉಳಿಯದೆ ಅಂಧ-ಅನಾಥರ ಬಾಳಿನ ಉದ್ಧಾರಕರಾಗಿ ಬೆಳಗಿದ ಮಹಾಪುರುಷ ಎಂದು ಭಾರತ ಸರ್ಕಾರದ ನೆಹರು ಯುವ ಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್ ನುಡಿದರು.
ಹಾನಗಲ್ಲಿನಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಭಾವಬಿಂಬದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಡೆ-ನುಡಿಯೊಂದಿಗೆ ದೇವಮಾನವರಾದ ಗವಾಯಿಗಳು ಈ ಜಗತ್ತಿನ ಲೀಲಾ ಪುರುಷರೇ ಹೌದು. ಗುರುಭಕ್ತಿ, ಶಕ್ತಿ ಏನೆಂಬುದನ್ನು ನಾಡಿಗೆ ಪರಿಚಯಿಸಿದ ಮಹಾ ಮಾನವರು. ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಬಾಹ್ಯ ನೇತ್ರವಿಲ್ಲದಿದ್ದರೂ ಅಂತರಂಗದ ಕಣ್ಣಿನಿಂದ ಒಬ್ಬ ಅವತಾರಿ ಪುರುಷನಷ್ಟೆ ಶ್ರೇಷ್ಠ ಸಾಧನೆ ಮಾಡಿ ತೋರಿದ ಮಹಾಗುರು ಪಂ. ಪುಟ್ಟರಾಜ ಕವಿ ಗವಾಯಿಗಳವರಿಗೆ ಇಡೀ ಜಗತ್ತು ತಲೆ ಬಾಗಬೇಕು ಎಂದರು.
ಹಾನಗಲ್ಲಿನಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಹೆಸರಿನಲ್ಲಿ ಅವರ ಸತ್ಕಾರ್ಯಗಳನ್ನು ನೆನೆಪಿಸುವ ಒಂದು ಸಂಗೀತ ಶಾಲೆ, ರಂಗಮಂದಿರ ಹಾಗೂ ನಗರದ ಗೌರವಯುತ ಸ್ಥಳದಲ್ಲಿ ಗವಾಯಿಗಳವರ ಪುತ್ಥಳಿ ಸ್ಥಾಪನೆಗೆ ತಮ್ಮ ಪೂರ್ಣ ಸಹಕಾರ ವ್ಯಕ್ತಪಡಿಸಿ, ಸರ್ಕಾರದ ಅನುದಾನ ಸಮಾಜದ ದಾನದೊಂದಿಗೆ ಅರ್ಥಪೂರ್ಣ ಕಾರ್ಯ ಪೂರೈಸುವ ಇಚ್ಛೆ ವ್ಯಕ್ತಪಡಿಸಿದರು.
ಶಾಸಕ ಮನೋಹರ ತಹಸೀಲ್ದಾರ್ ಮಾತನಾಡಿ, ಹಾನಗಲ್ಲ ಕ್ಷೇತ್ರದವರಾದ ಲಿಂ. ಪಂ. ಪುಟ್ಟರಾಜ ಕವಿಗವಾಯಿಗಳವರು ಸಂಗೀತ ಸಾಮ್ರಾಟರಾಗಿದ್ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ಮೂಲಕ ಶತಶತಮಾನಗಳವರೆಗೂ ಜೀವಂತವಾಗಿಯೇ ಇರುತ್ತಾರೆ. ಜಾತ್ಯತೀತ ಶ್ರೀಗಳಾಗಿ ತುಲಾಭಾರದ ಚಕ್ರವರ್ತಿ ಎನಿಸಿಕೊಂಡಿರುವ ಗವಾಯಿಗಳವರಿಗೆ ಸರ್ಕಾರ ಮರಣೋತ್ತರವಾಗಿಯಾದರೂ ಕರ್ನಾಟಕ ರತ್ನ ನೀಡಲೇ ಬೇಕು. ಗುರುಗಳ ಹೆಸರಿನಲ್ಲಿ ಹಾನಗಲ್ಲಿನಲ್ಲಿ ಒಂದು ಸ್ಮಾರಕ ಸ್ಥಾಪಿಸಿ ಅವರ ಹೆಸರಿನಲ್ಲಿ ನಿತ್ಯ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಅನುಷ್ಠಾನಗೊಳ್ಳುವಂತೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭ ಲಿಂ. ಪಂ. ಪುಟ್ಟರಾಜ ಗವಾಯಿಗಳವರ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ನಾಗೇಶ ಪಡೆಪ್ಪನವರ, ಖಜಾಂಚಿ ನಾಗಪ್ಪ ಸವದತ್ತಿ, ಜಿಪಂ ಸದಸ್ಯ ಮಹದೇವಪ್ಪ ಭಾಗಸರ, ತಾಪಂ ಸದಸ್ಯೆ ವಿಜಯಲಕ್ಷ್ಮೀ ಹಿರೇಮಠ, ಯಲ್ಲಪ್ಪ ಕಿತ್ತೂರ, ನ್ಯಾಯವಾದಿ ಜಿ.ವಿ. ಕಂಬಾಳಿಮಠ, ಸಿ.ಎಸ್. ಬಡಿಗೇರ, ಏಳುಕೋಟೆಪ್ಪ ಹಾವಳೇರ, ಆರ್.ಸಿ. ಹಿರೇಮಠ, ಕೆ.ಎಲ್. ದೇಶಪಾಂಡೆ, ವಿಷ್ಣುಕಾಂತ ಜಾಧವ, ಮುತ್ತಣ್ಣ ನಾಶಿಕ, ಗಜಾನನ ದೋಂಗಡೆ, ಪ್ರಭು ದೊಡ್ಡಕುರುಬರ, ಪುರಸಭೆ ಸದಸ್ಯ ಅಶೋಕ ಆರೇಗೊಪ್ಪ, ಪ್ರಕಾಶ ಸಿಂಧೂರ, ಪಿ.ಕೆ.ಪಾರಗಾಂಕರ, ಅರುಣ ನಾಗಜ್ಜನವರ, ಹಾಶಂಪೀರ ಇನಾಮದಾರ, ಶಿವಾನಂದ ಕನ್ನಕ್ಕನವರ ಇತರರು ಇದ್ದರು.
ನಡೆ-ನುಡಿಯೊಂದಿಗೆ ದೇವಮಾನವರಾದ ಗವಾಯಿಗಳು ಜಗತ್ತಿನ ಲೀಲಾ ಪುರುಷರೇ ಹೌದು. ಗುರುಭಕ್ತಿ, ಶಕ್ತಿ ಏನೆಂಬುದನ್ನು ನಾಡಿಗೆ ಪರಿಚಯಿಸಿದ ಮಹಾ ಮಾನವರು. ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಬಾಹ್ಯ ನೇತ್ರವಿಲ್ಲದಿದ್ದರೂ ಅಂತರಂಗದ ಕಣ್ಣಿನಿಂದ ಒಬ್ಬ ಅವತಾರಿ ಪುರುಷನಷ್ಟೆ ಶ್ರೇಷ್ಠ ಸಾಧನೆ ಮಾಡಿ ತೋರಿದ ಮಹಾಗುರು.
- ಸಲೀಂ ಅಹ್ಮದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

