ಹಾವೇರಿ

ಖಾತ್ರಿ: ಕಾರ್ಮಿಕರಿಗೆ ರು. 4.04 ಕೋಟಿ ಬಾಕಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 3
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಯಲ್ಲಿ ಬೆವರು ಸುರಿಸಿ ದುಡಿದ ಕಾರ್ಮಿಕರಿಗೆ ಕೂಲಿ ಪಾವತಿಯಾಗುತ್ತಿಲ್ಲ. ಯೋಜನೆಯಡಿ 2012-13ನೇ ಸಾಲಿನ ರು. 4.04 ಕೋಟಿ ಪಾವತಿ ಇನ್ನೂ ಬಾಕಿಯಿದೆ.
ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಉದ್ಯೋಗ ಬಯಸಿ ಬಂದ ಎಲ್ಲರಿಗೂ ಕೆಲಸ ನೀಡುವ ಭರವಸೆಯಿದೆ. ಆದರೆ, ಕೆಲಸ ಮಾಡಿದವರಿಗೆ ಕೂಲಿ ಹಣ ಪಾವತಿಸಲು ಮಾತ್ರ ಯಾರೂ ಕಾಳಜಿ ತೋರುತ್ತಿಲ್ಲ. ಆದ್ದರಿಂದ ಜಿಲ್ಲೆಯ ಸಾವಿರಾರು ಬಡ ಕುಟುಂಬಗಳು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದರೂ ಅವರಿಗೆ ಹಣ ಪಾವತಿಯಾಗುತ್ತಿಲ್ಲ. 2012-13ನೇ ಸಾಲಿನಲ್ಲಿ ಹಾವೇರಿ ತಾಲೂಕಿನಲ್ಲೇ ರು. 1.29 ಕೋಟಿ ಪಾವತಿ ಬಾಕಿಯಿದೆ. ಬ್ಯಾಡಗಿ ತಾಲೂಕಿನಲ್ಲಿ ರು. 17 ಲಕ್ಷ, ಹಾನಗಲ್ಲ ರು. 14 ಲಕ್ಷ, ಹಿರೇಕೇರೂರಿನಲ್ಲಿ ರು. 1.39 ಕೋಟಿ, ರಾಣಿಬೆನ್ನೂರಿನಲ್ಲಿ ರು. 16 ಲಕ್ಷ, ಸವಣೂರಿನಲ್ಲಿ ರು. 66 ಲಕ್ಷ ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ರು. 20 ಲಕ್ಷವನ್ನು ಕಾರ್ಮಿಕರಿಗೆ ಪಾವತಿಸುವುದು ಬಾಕಿಯಿದೆ. ಕೆಲಸ ಮಾಡಿ ವರ್ಷ ಕಳೆದರೂ ಇನ್ನೂ ಅದರ ಕೂಲಿ ಸಿಗದೆ ಕಾರ್ಮಿಕರು ಕಚೇರಿ ಅಲೆದಾಡುವಂತಾಗಿದೆ.
ಪೂರ್ಣಗೊಳ್ಳದ ಕಾಮಗಾರಿ: ಜಿಲ್ಲೆಯಲ್ಲಿ ಖಾತ್ರಿ ಯೋಜನೆಯಡಿ ನೋಂದಾಯಿತ 1.71 ಲಕ್ಷ ಕುಟುಂಬಗಳಿವೆ. ಅವುಗಳ ಪೈಕಿ 1.70 ಲಕ್ಷ ಜಾಬ್ ಕಾರ್ಡುಗಳನ್ನು ವಿತರಣೆ ಮಾಡಲಾಗಿದೆ. 19 ಸಾವಿರ ಕುಟುಂಬಗಳು ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ್ದು, 18,906 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ. ಇದುವರೆಗೆ 16,273 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಕೇವಲ 1,453 ಕಾಮಗಾರಿ ಪೂರ್ಣಗೊಂಡಿವೆ. ಅದರಲ್ಲಿ ಹಿಂದಿನ ಸಾಲಿನ 1,246 ಕಾಮಗಾರಿಗಳಿವೆ. ಈ ಆರ್ಥಿಕ ವರ್ಷ ಮುಕ್ತಾಯಗೊಳ್ಳಲು ಇನ್ನು ನಾಲ್ಕೇ ತಿಂಗಳು ಬಾಕಿಯಿದ್ದರೂ 207 ಕಾಮಗಾರಿಗಳಷ್ಟೇ ಪೂರ್ಣಗೊಂಡಿವೆ.
ಶೇ. 71ರಷ್ಟು ಸಾಧನೆ: 2013-14ನೇ ಸಾಲಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರು. 200.58 ಕೋಟಿಯ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ರು. 67.71 ಕೋಟಿ ಮುಂಗಡ ಬಜೆಟ್ ಗುರಿ ಹೊಂದಲಾಗಿದೆ. ಈ ಬಾರಿ ಸರ್ಕಾರದಿಂದ ರು. 49.93 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆರಂಭಿಕ ಶಿಲ್ಕು ಸೇರಿದಂತೆ ಜಿಲ್ಲಾ ಪಂಚಾಯ್ತಿ ಬಳಿ 58.50 ಕೋಟಿ ಅನುದಾನ ಲಭ್ಯವಿದೆ. ಇದರಲ್ಲಿ ರು. 39.88 ಕೋಟಿ ಅನುದಾನ ಬಳಕೆ ಮಾಡಲಾಗಿದ್ದು, ಶೇ. 71ರಷ್ಟು ಸಾಧನೆ ಮಾಡಲಾಗಿದೆ ಎಂಬುದು ಜಿಪಂ ಅಂಕಿ-ಅಂಶಗಳು ಹೇಳುತ್ತವೆ. ಆದರೆ ಖಾತ್ರಿ ಕಾಮಗಾರಿಗಳು ಎಲ್ಲೂ ಕಣ್ಣಿಗೆ ಕಾಣುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಸಿಗದ ಕಾರ್ಮಿಕರು: ಕೂಲಿ ಮಾಡಿದರೂ ವರ್ಷಾನುಗಟ್ಟಲೆ ಹಣ ಸಿಗದ್ದರಿಂದ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗೆ ಕಾರ್ಮಿಕರು ಬರುತ್ತಿಲ್ಲ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಕೈಗೊಂಡರೆ ಖಾತ್ರಿಗಿಂತ ದುಪ್ಪಟ್ಟು ಕೂಲಿ ಸಿಗುತ್ತದೆ. ಹೀಗಿರುವಾಗ ಕೆಲಸ ಮಾಡಿ ಬಿಲ್ಲಿಗಾಗಿ ಕಾಯುವ ಅಗತ್ಯ ಕಾರ್ಮಿಕರಿಗಿಲ್ಲ. ಇದರಿಂದ ಖಾತ್ರಿ ಯೋಜನೆಗೆ ಹಿನ್ನಡೆಯಾಗುತ್ತಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಾರ್ಮಿಕರಿಗೆ ಶೀಘ್ರ ಹಣ ಪಾವತಿ ವ್ಯವಸ್ಥೆ ಆಗಬೇಕಿದೆ. ನಗದು ನೇರ ವರ್ಗಾವಣೆಗೆ ಕ್ರಮ ಕೈಗೊಂಡರೂ ಅದೂ ತಡವಾಗುತ್ತಿದೆ ಎಂಬುದು ಕಾರ್ಮಿಕರ ಅಳಲು.
ಶೀಘ್ರ ಪಾವತಿಗೆ ಕ್ರಮ: ಹಿಂದಿನ ಸಾಲಿನಲ್ಲಿ ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಶೀಘ್ರದಲ್ಲಿ ಹಣ ಪಾವತಿಸಲು ಜಿಪಂ ಕ್ರಮ ಕೈಗೊಳ್ಳುತ್ತಿದೆ. ಈ ಕುರಿತು ಜಿಪಂ ಉಪಕಾರ್ಯದರ್ಶಿ ಜಿ. ಗೋವಿಂದಸ್ವಾಮಿ ಅವರನ್ನು ಕೇಳಿದಾಗ, ಕಳೆದ ಮಾಚ್‌ನಲ್ಲಿ ಅನುದಾನದ ಕೊರತೆಯಿತ್ತು. ಈಗಿಲ್ಲ. ಆದರೆ ಕೆಲ ತಾಂತ್ರಿಕ ಸಮಸ್ಯೆಯಿಂದ ಬಾಕಿ ಹಣ ಪಾವತಿಸಲು ಸಾಧ್ಯವಾಗಿಲ್ಲ.
ವೆಬ್‌ಸೈಟ್‌ನ ತಾಂತ್ರಿಕ ವ್ಯವಸ್ಥೆ ಸರಿಪಡಿಸಬೇಕಿದೆ. ಆದ್ದರಿಂದ ಡಿ. 4ರಂದು ಹಾವೇರಿ ಜಿಲ್ಲೆಯ ಖಾತ್ರಿ ಬಾಕಿ ಪಾವತಿ ಬಗ್ಗೆ ವೆಬ್‌ಸೈಟ್‌ನಲ್ಲಿ ದಾಖಲಿಸಲು ಬೆಂಗಳೂರಿಗೆ ಬರುವಂತೆ ತಿಳಿಸಲಾಗಿದೆ.
ನಮ್ಮ ಸಿಬ್ಬಂದಿ ಅಲ್ಲಿಗೆ ಹೋಗಿ ತಾಂತ್ರಿಕ ಸಮಸ್ಯೆ ಬಗೆಹರಿಸಲಿದ್ದಾರೆ. ವಾರದೊಳಗೆ ಕಾರ್ಮಿಕರಿಗೆ ಬಾಕಿಯಿರುವ ಕೂಲಿ ಪಾವತಿಸಲಾಗುವುದು ಎಂದರು.
- ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.