ಸಗಣಿ ಸುರ್ಕೊಂಡು ಪ್ರತಿಭಟನೆ ಇಂದು
ಬ್ಯಾಡಗಿ: ಪಟ್ಟಣದಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಅತಿಕ್ರಮಣ ತೆರವುಗೊಳಿಸಿ, ದ್ವಿಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ಹಳೇ ಪುರಸಭೆ ಎದುರು ಮುಖ್ಯರಸ್ತೆ ಹೋರಾಟ ಸಮಿತಿ ಆರಂಭಿಸಿರುವ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಎರಡು ದಿನ ಪೂರೈಸಿದ್ದು, ಬುಧವಾರ ಮೈಮೇಲೆ ಸಗಣಿ ಸುರುವಿಕೊಂಡು ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ.
ಅಧ್ಯಕ್ಷ ಸುರೇಶ ಚಲವಾದಿ ಮಾತನಾಡಿ, ಎರಡು ವರ್ಷಗಳಿಂದ ಮುಖ್ಯರಸ್ತೆ ಅಗಲೀಕರಣ ಹೋರಾಟಕ್ಕೆ ಬದ್ಧವಾಗಿದ್ದು, ಯಾರೊಂದಿಗೂ ರಾಜಿ ಪ್ರಶ್ನೆಯೇ ಇಲ್ಲ. ಜನರ ಬೆಂಬಲವಿದೆ, ಯಾವುದೇ ಭರವಸೆ ನಂಬುವುದಿಲ್ಲ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಶಂಕರ ನಾಯಕ್, ಸಿಪಿಐ ಹಾಲಮೂರ್ತಿ ರಾವ್, ಪುರಸಭೆ ಮುಖ್ಯಾಧಿಕಾರಿ ವೀರೇಶ್ ಕುಮಾರ್ ಸಂಧಾನಕ್ಕೆ ಯತ್ನಿಸಿದರೂ ಫಲ ನೀಡಲಿಲ್ಲ.
ತಹಸೀಲ್ದಾರ್ ಶಿವಶಂಕರ ನಾಯಕ್ ಮಾತನಾಡಿ, ಪ್ರತಿಭಟನೆ ಉದ್ದೇಶ ತಾಲೂಕು ಆಡಳಿತದ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ, ಅಗಲೀಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ, ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಅಲ್ಲಿಯವರೆಗೆ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು. ಇದರಿಂದ ಸಂತುಷ್ಟರಾಗದ ಪ್ರತಿಭಟನಾಕಾರರು ಅಗಲೀಕರಣದ ಆದೇಶವಿದ್ದರೆ ಮಾತ್ರ ನಮ್ಮ ಜತೆ ಮಾತನಾಡಿ, ಇಲ್ಲದಿದ್ದರೆ ಪ್ರತಿಭಟನೆಗೆ ತೊಂದರೆ ಕೊಡಬೇಡಿ ಎಂದರು.
ಮೈಮೇಲೆ ಸಗಣಿ...
ಹೋರಾಟ ಸಮಿತಿಯ ಬೇಡಿಕೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ, ಬುಧವಾರ ಮೈಮೇಲೆ ಸಗಣಿ ಸುರುವಿಕೊಂಡು ರಸ್ತೆ ತಡೆ ನಡೆಸಲು ಧರಣಿ ನಿರತರು ನಿರ್ಧರಿಸಿದ್ದಾರೆ. ನಮ್ಮ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನಮ್ಮ ಪ್ರತಿಭಟನೆಯಿಂದ ನಾಚಿಕೆಯಾಗಬೇಕು ಎಂದು ಜಿಲ್ಲಾ ಹಲಗೇರಿ ತಿಳಿಸಿದ್ದಾರೆ.
ಜೆಡಿಎಸ್ ಅಧ್ಯಕ್ಷ ಮೋಹನ ಬಿನ್ನಾಳ, ಅಜೀಜ್ ಸಾಬ್ ಬಿಜಾಪುರ, ಈರಪ್ಪ ಭೈರಾಪುರ, ಶಾಂತಪ್ಪ ಅರ್ಕಾಚಾರಿ, ಜಿತೇಂದ್ರ ಸುಣಗಾರ, ಎಸ್ಎಫ್ಐ ಅಧ್ಯಕ್ಷ ಮಂಜು ಪೂಜಾರ, ಪದವೀಧರರ ಸಂಘದ ಜಗದೀಶ್ ಹಾಲನಗೌಡ್ರ, ವಿನಾಯಕ ಶಿಗ್ಲಿ, ಕಾರ್ಯಕರ್ತರಾದ ಮಂಜು ಡಂಬ್ರಳ್ಳಿ, ಸಂತೋಷ ಗುದುಗಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

