ಮರಳು, ಕಲ್ಲು ಸಾಗಿಸಲು ಅಡ್ಡಿ ಬೇಡ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 5
ಮರಳು, ಜಲ್ಲಿ, ಕಲ್ಲು ಮುಂತಾದ ಕಟ್ಟಡ ಸಾಮಗ್ರಿಗಳ ಸಾಗಾಟಕ್ಕೆ ಹಾಕಿರುವ ಕಡಿವಾಣವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸಿವಿಲ್ ಗುತ್ತಿಗೆದಾರರು, ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕೂಲಿ ಕಾರ್ಮಿಕರ ಜಂಟಿ ಹೋರಾಟ ಸಮಿತಿ ಸದಸ್ಯರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಹಳೇ ಪುರಸಭೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನೂರಾರು ಸದಸ್ಯರು ಸರ್ಕಾರದ ಮರಳು ನೀತಿ ವಿರುದ್ಧ ಘೋಷಣೆ ಹಾಕುತ್ತಾ ತಹಸೀಲ್ದಾರ್ ಕಚೇರಿ ತಲುಪಿದರು. ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ತಿಮ್ಮಣ್ಣ ವಡ್ಡರ ಮಾತನಾಡಿ, ದೇಶದಲ್ಲಿ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂಬಂತಾಗಿದೆ. ಕೂಲಿ ಕಾರ್ಮಿಕರ ಸಮಸ್ಯೆಯಿಂದ ಬಳಲುತ್ತಿರುವ ಸಿವಿಲ್ ಗುತ್ತಿಗೆದಾರರಿಗೆ ಮರಳು ಹಾಗೂ ಕಲ್ಲು ಗಣಿಗಾರಿಕೆ ನೀತಿಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ದಂಡ ತುಂಬುವ ಭೀತಿ
ಗುತ್ತಿಗೆದಾರರು ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ಟೆಂಡರ್ ಮೂಲಕ ಪಡೆದು ಆರಂಭಿಸಿದ್ದು, ಕಾಮಗಾರಿ ಪೂರ್ತಿಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಆದರೆ ಕಾಮಗಾರಿಗೆ ಅವಶ್ಯವಿರುವ ಕಚ್ಚಾ ಸಾಮಗ್ರಿಗಳು ನಿಗದಿತವಾಗಿ ಪೂರೈಕೆಯಾಗದೆ ಇಲಾಖೆಗಳಿಗೆ ದಂಡ ಭರಿಸಬೇಕಾದ ಭಯ ಕಾಡುತ್ತಿದೆ. ಅಲ್ಲದೆ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಬೇಕಾಗಿದೆ. ನಮ್ಮದಲ್ಲದ ತಪ್ಪಿಗೆ ನಮಗೇಕೆ ಶಿಕ್ಷೆ? ಕೂಡಲೇ ಪರಿಶೀಲಿಸಿ, ಕಾಲಮಿತಿ ಸಡಿಲಗೊಳಿಸಿ ಎಂದು ಒತ್ತಾಯಿಸಿದರು.
ಟೆಂಡರ್ ಸ್ಥಗಿತಗೊಳಿಸಿ: ಸರ್ಕಾರದ ಹೊಸ ಮರಳು ನೀತಿ ಸಮಸ್ಯೆ ಇತ್ಯರ್ಥ ಆಗುವ ತನಕ ಯಾವ ಕಾರಣಕ್ಕೂ ಹೊಸ ಕಾಮಗಾರಿಗೆ ಟೆಂಡರ್ ಕರೆಯಬಾರದು. ಅಲ್ಲಿಯ ತನಕ ಹಾಲಿ ಟೆಂಡರ್ ಕಾಮಗಾರಿಗಳನ್ನು ಪೂರ್ಣಗೊಳಿಸದಿರಲು ತೀರ್ಮಾನಿಸಲಾಗಿದೆ. ಕಟ್ಟಡ ಕಾಮಗಾರಿಗೆ ಬೇಕಾಗುವ ಪರಿಕರಗಳು ಸುಲಭವಾಗಿ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತಿಗೆ ಕಡಿವಾಣ ಹಾಕುವುದಾದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು ಎಂದರು.
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಉಜನಿ ಮಾತನಾಡಿ, ಸರ್ಕಾರದ ಮರಳು ನೀತಿಯಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ. ಕಾರ್ಮಿಕರನ್ನು ನಿರುದ್ಯೋಗಿಗಳಾಗಿದ್ದು, ಸಾಲ ಮಾಡಿ ಜೀವನ ನಿರ್ವಹಿಸುತ್ತಿರುವ ಕಾರ್ಮಿಕರು ಇನ್ನೆಷ್ಟು ದಿನ ಕಾಯಲು ಸಾಧ್ಯ? ಮಾಡಿದ ಸಾಲಕ್ಕೆ ವಿಷ ತೆಗೆದುಕೊಳ್ಳುವುದಷ್ಟೇ ಬಾಕಿ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಲ್ಲೇಶಪ್ಪ ಒಳಗುಂದಿ, ರವೀಂದ್ರ ಹೊನ್ನಾಳಿ, ರಾಜೇಸಾಬ್ ಏರೆಶೀಮಿ, ಫಕ್ಕೀರಪ್ಪ ಮ್ಯಾಗೇರಿ, ಬಿ.ಎಸ್. ಸಂಕಣ್ಣನವರ, ಎಸ್. ರಾಮಾ ಜೋಯಿಸ್, ಬಸವರಾಜ ಹಲಗೇರಿ, ಅಂದಾನೆಪ್ಪ ಮುಚ್ಚಟ್ಟಿ, ಹನುಮಂತಪ್ಪ ಹಾದಿಮನಿ, ಮಲ್ಲಿಕಾರ್ಜುನ ದೊಡ್ಮನಿ, ಎನ್.ಕೆ. ಪೂಜಾರ, ಕೆ.ವಿ. ದೊಡ್ಮನಿ, ಶಿವಪ್ಪ ಪೋಟೇರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

