ಹಾವೇರಿ

ಅಪಘಾತಕ್ಕೆ ರೈತ ಬಲಿ: ಹೆದ್ದಾರಿ ಬಂದ್

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 11
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಕಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬುಧವಾರ ನಸುಕಿನಲ್ಲಿ ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಜನತೆ 5 ಗಂಟೆಗೂ ಅಧಿಕ ಕಾಲ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಬಂಕಾಪುರ ಪಟ್ಟಣದ ಹನುಮಂತಪ್ಪ ಮಾನೆಗಾರ (55) ಎಂದಿನಂತೆ ಕೃಷಿ ಚಟುವಟಿಕೆಗಾಗಿ ಹೊಲಕ್ಕೆ ಹೋಗಲು ಹೆದ್ದಾರಿ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ವೇಗವಾಗಿ ಡಿಕ್ಕಿ ಹೊಡೆದಿದ್ದು, ರೈತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಘಟನೆ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿ ಬಂದ್: ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಿದ್ದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಆಕ್ರೋಶಗೊಂಡ ಬಂಕಾಪುರ ರೈತರು ಹಾಗೂ ನಾಗರಿಕರು ಹೆದ್ದಾರಿ ಬಂದ್ ಮಾಡಿ ಹಠಾತ್ ಪ್ರತಿಭಟನೆಗೆ ಇಳಿದರು. ಐದು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಗ್ರಾಮಸ್ಥರು ಹಾಗೂ ರೈತ ಸಂಘಟನೆಯ ಸದಸ್ಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿ, ಅಪಘಾತದಲ್ಲಿ ಪ್ರಾಣ ಬಿಟ್ಟ ಹನುಮಂತ ಮಾನೆಗಾರ ಶವವನ್ನು ಹೆದ್ದಾರಿಯಲ್ಲಿಟ್ಟು ಪ್ರತಿಭಟನೆಗೆ ಕುಳಿತರು. ಸುದ್ದಿ ಹರಡಿ, ಜನ ತಂಡೋಪತಂಡವಾಗಿ ಹೆದ್ದಾರಿಯತ್ತ ಆಗಮಿಸಿದ್ದರಿಂದ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿತು. ಶಿಗ್ಗಾಂವಿ ಸಿಪಿಐ ಮಲ್ಲನಗೌಡ ಹೊಸಮನಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು, ಜಿಲ್ಲಾಧಿಕಾರಿ ಮತ್ತು ಎಸ್ಪಿ ಆಗಮಿಸಿ ಪರಿಹಾರ ಕಲ್ಪಿಸಬೇಕು. ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಹೆದ್ದಾರಿ ಸರಿಪಡಿಸಿ ಪ್ಲೈ ಓವರ್ ಹಾಗೂ ಹೆದ್ದಾರಿಯ ಎರಡೂ ಕಡೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಆಗಮಿಸಿದ ಎಸ್ಪಿ ಎನ್. ಶಶಿಕುಮಾರ ಪ್ರತಿಭಟನಾ ನಿರತ ರೈತರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಇದಕ್ಕೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ನಂತರ ಹೆದ್ದಾರಿ ಮಧ್ಯದಲ್ಲಿದ್ದ ಶವವನ್ನು ತೆಗೆಯಲು ಅನುಮತಿ ನೀಡಿದ ರೈತರು ಹಾಗೂ ನಾಗರಿಕರು ಹೆದ್ದಾರಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸುವಂತೆ ಒತ್ತಾಯಿಸಿದರು.
ಜನರ ಅನುಕೂಲಕ್ಕೆ ತಕ್ಕಂತೆ: ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಾಳಾದ ಗೋಪಾಲ ಗುಜ್ಜಾ, ಚಂದ್ರಶೇಖರ ಬಟಗಿ ಜನರಿಂದ ತೀವ್ರ ತರಾಟೆಗೆ ಒಳಗಾದರು. ಕೆಲವೇ ದಿನದಲ್ಲಿ ಹೆದ್ದಾರಿ ಷಟ್ಪಥವಾಗಿ ಪರಿವರ್ತನೆ ಮಾಡುವ ಕಾಮಗಾರಿ ಪ್ರಾರಂಭವಾಗಲಿದೆ. ಆಗ ಜನರ ಅನುಕೂಲಕ್ಕೆ ತಕ್ಕಂತೆ ಪ್ಲೈ ಓವರ್ ಮತ್ತು ತಡೆಗೋಡೆ ನಿರ್ಮಿಸುವ ಭರವಸೆ ನೀಡಿದರು. ಮೃತಪಟ್ಟ ರೈತ ಹನುಮಂತಪ್ಪ ಮಾನೆಗಾರ ಅವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಪ್ರಾಧಿಕಾರದಿಂದ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಸಾಲುಗಟ್ಟಿದ ವಾಹನಗಳು: ಐದು ತಾಸಿಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಆಗಿದ್ದ ಪರಿಣಾಮ ವಾಹನಗಳು ಹತ್ತಾರು ಕಿ.ಮೀ.ವರೆಗೂ ಸಾಲುಗಟ್ಟಿ ನಿಂತಿದ್ದವು. ಮೃತಪಟ್ಟ ರೈತನ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸವಣೂರು ಉಪವಿಭಾಗಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಹೆಚ್ಚುವರಿ ಎಸ್ಪಿ ಜಗಮಯ್ಯನವರ, ತಹಸೀಲ್ದಾರ್ ಎಸ್.ಎ. ಚೌಗಲೆ ಸ್ಥಳಕ್ಕೆ ಭೇಟಿ ನೀಡಿದರು. ಬಂಕಾಪುರ ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ರಾಣೋಜಿ, ಮಾಜಿ ಸದಸ್ಯ ಗುಡ್ಡಪ್ಪ ಮತ್ತೂರ, ಸದಸ್ಯರಾದ ಸತೀಶ ಆಲದಕಟ್ಟಿ, ಹೊನ್ನಪ್ಪ ಹೂಗಾರ, ರಾಘು ಗಬ್ಬೂರ, ವೆಂಕಣ್ಣ ಮುಳಗುಂದ, ಚೆನ್ನಪ್ಪ ಹಳವಳ್ಳಿ, ಮಲ್ಲೇಶಪ್ಪ ಸುಂಕದ, ಸಿದ್ದಪ್ಪ ಹರವಿ, ಮಾಂತೇಶ ಹರವಿ ಪಾಲ್ಗೊಂಡಿದ್ದರು.

ಸರ್ವೀಸ್ ರಸ್ತೆ ಮಾಡಿ ಪ್ರಾಣ ಉಳಿಸಿ
ಶಿಗ್ಗಾಂವಿ: ಅಪರಿಚಿತ ವಾಹನ ಹಾಯ್ದ ಪರಿಣಾಮ ರೈತನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಕಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಪರಿಣಾಮ, ಬಂಕಾಪುರ ಪುರಸಭೆಯ ಮಾಜಿ ಅಧ್ಯಕ್ಷ ರಾಮಣ್ಣಾ ರಾಣೋಜಿ ತೀವ್ರ ಆತಂಕ ವ್ಯಕ್ತಪಡಿಸಿ, ಸರ್ವೀಸ್ ರಸ್ತೆ ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ಕಳಕಳಿಯ ವಿನಂತಿ ಮಾಡಿದರು.
ನೋಡಿ ಸ್ವಾಮಿ, ನಾವು ಯಾರಾದರೂ ಸತ್ತರೆ ಅವರ ಅಂತ್ಯ ಸಂಸ್ಕಾರಕ್ಕೂ ಹೆದ್ದಾರಿ ದಾಟಿ ಹೋಗಬೇಕು. ಸರ್ವೀಸ್ ರಸ್ತೆ ಇಲ್ಲದೆ ಅಪಘಾತಕ್ಕೆ ಈಡಾಗುವಂತಾಗಿದೆ. ನೀವು  ನಾಲ್ಕು ಪಥ, ಷಟ್ಪಥ, ಹನ್ನೆರಡು ಪಥದ ರಸ್ತೆ ಬೇಕಾದ್ರೂ ಮಾಡಿಕೊಳ್ಳಿ. ಆದರೆ ನಮಗೆ ಸರಿಯಾಗಿ ಸರ್ವೀಸ್ ರಸ್ತೆ ಮಾಡಿಕೊಡಿ. ವೇಗ ನಿಯಂತ್ರಕವನ್ನು ಅಳವಡಿಸಿ. ಕೈಮುಗಿದು, ಕಾಲುಬಿದ್ದು ಕೇಳಿಕೋಳ್ಳುತ್ತೇನೆ. ನಮ್ಮ ಪ್ರಾಣ ಉಳಿಸಿ ಎಂದು ಅಧಿಕಾರಗಳ ಎದುರು ಮನವಿ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.