ಹಾವೇರಿ

ಸರ್ದಾರ್ ಪ್ರತಿಮೆ ನಿರ್ಮಾಣ: ನಾಳೆ ಏಕತಾ ಓಟ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 13
ಸರ್ದಾರ್ ವಲ್ಲಭಬಾಯಿ ಪಟೇಲ್ ಏಕತಾ ಪ್ರತಿಮೆ ನಿರ್ಮಾಣ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಡಿ. 15ರಂದು ನಗರದಲ್ಲಿ ಏಕತಾ ಓಟ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಮೆ ಲೋಹ ಸಂಗ್ರಹಣಾ ಸಮಿತಿ ಜಿಲ್ಲಾ ಸಂಚಾಲಕ ಪಾಲಾಕ್ಷಗೌಡ ಪಾಟೀಲ ತಿಳಿಸಿದರು.
ಶುಕ್ರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭಬಾಯಿ ಪಟೇಲ್ ಏಕತಾ ಪ್ರತಿಮೆ ಸಮಿತಿ ರಾಜ್ಯ ಘಟಕದ ಕರೆ ಮೇರೆಗೆ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಏಕತಾ ಓಟ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಓಟ ಆಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಇದು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮ. ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ. ಏಕತಾ ಓಟಕ್ಕೆ ಮಠಾಧೀಶರು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಬೇವಿನಮರದ ಹಾಗೂ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಚಾಲನೆ ನೀಡುವರು ಎಂದರು.
ಲೋಹ ಸಂಗ್ರಹ ಅಭಿಯಾನ
ಪಟೇಲ್ ಪ್ರತಿಮೆ ನಿರ್ಮಾಣದ ಹಿನ್ನೆಲೆಯಲ್ಲಿ ಜ. 15ರಿಂದ 26ರವರೆಗೆ ಜಿಲ್ಲೆಯಲ್ಲಿ ಲೋಹ ಸಂಗ್ರಹ ಅಭಿಯಾನ ನಡೆಯಲಿದೆ. ಎಲ್ಲ ಗ್ರಾಪಂಗಳಲ್ಲಿ ಸಂಚರಿಸಿ, ಪ್ರತಿ ಗ್ರಾಪಂನಿಂದ 1 ಕೆಜಿ ಲೋಹ ಹಾಗೂ 100 ಗ್ರಾಂ ಮಣ್ಣು ಸಂಗ್ರಹಿಸಲಾಗುವುದು. ರೈತರು ಉಪಯೋಗಿಸುವ ಲೋಹದ ಕೃಷಿ ಸಾಮಗ್ರಿಗಳನ್ನು, ಕಬ್ಬಿಣದ ವಸ್ತುಗಳನ್ನು ನೀಡಬಹುದು ಎಂದರು. ಜಿಲ್ಲಾ ಸಮಿತಿ ಸಂಗ್ರಹಿಸಿದ ಲೋಹ ಹಾಗೂ ಮಣ್ಣನ್ನು ರಾಜ್ಯ ಸಮಿತಿಗೆ ಕಳುಹಿಸಲಾಗುವುದು. ಗುಜರಾತ್ ರಾಜ್ಯದ ನರ್ಮದಾ ಸರೋವರ ಅಣೆಕಟ್ಟೆ ಸಮೀಪ ದ್ವೀಪವೊಂದರಲ್ಲಿ ದೇಶದಲ್ಲೇ ಅತಿ ಎತ್ತರದ (182 ಮೀಟರ್) ಪಟೇಲ್ ಪ್ರತಿಮೆಯನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ಸ್ಥಾಪಿಸಲಾಗುತ್ತಿದೆ. ಅಲ್ಲಿಗೆ ಹೋಗಲು ದೋಣಿ ವ್ಯವಸ್ಥೆ, ಪ್ರತಿಮೆ ವೀಕ್ಷಿಸಲು 500 ಅಡಿ ಎತ್ತರದ ವೀಕ್ಷಣಾ ಗೋಪುರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ರು. 2600 ಕೋಟಿ ವ್ಯಯಿಸಲಾಗುತ್ತಿದೆ ಎಂದು ಪಾಲಾಕ್ಷಗೌಡ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಗಂಗಾಧರ ಮಲೆಬೆನ್ನೂರು, ರಮೇಶ ಪಾಲನಕರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.