ಹಾವೇರಿ

ಆಶ್ರಯ ಮನೆ ರದ್ದು: ಫಲಾನುಭವಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 17
ತಮಗೆ ಮಂಜೂರಾಗಿದ್ದ ಆಶ್ರಯ ಮನೆಯನ್ನು ಗ್ರಾಪಂ ಸದಸ್ಯರೊಬ್ಬರ ಕುಮ್ಮಕ್ಕಿನಿಂದ ರದ್ದುಪಡಿಸಲಾಗಿದೆ ಎಂದು ಆರೋಪಿಸಿ ಫಲಾನುಭವಿಯೊಬ್ಬರು, ರದ್ದುಪಡಿಸಿದ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ತಾಲೂಕಿನ ತಡಸ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಮಂಗಳವಾರ ಜರುಗಿದೆ.
ಪ್ರಸಕ್ತ ಸಾಲಿನಲ್ಲಿ ಘೋಷಣೆಯಾದ ಆಶ್ರಯ ಮನೆ ಫಲಾನುಭವಿ ಎಂದು ಆಯ್ಕೆಯಾಗಿದ್ದ ತಡಸ ಗ್ರಾಮದ ಪಾರ್ವತೆವ್ವ ವಿರೂಪಾಕ್ಷಪ್ಪ ಕೆರೂರ ಎಂಬುವರ ಹೆಸರನ್ನು ಆಯ್ಕೆ ಪಟ್ಟಿಯಿಂದ ಕೈಬಿಟ್ಟು ಮಂಜೂರಾಗಿದ್ದ ಮನೆಯನ್ನು ರದ್ದುಪಡಿಸಲಾಗಿದೆ ಎಂದು ದೂರಿದ ಫಲಾನುಭವಿ, ಗಾಂಧಿ ಭಾವಚಿತ್ರದೊಂದಿಗೆ ಗ್ರಾಪಂ ಕಚೇರಿ ಎದುರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಬೆಂಬಲದೊಂದಿಗೆ ಪ್ರತಿಭಟನೆಗೆ ಮುಂದಾದರು.
ಕೆಲ ತಿಂಗಳ ಹಿಂದೆ ಪಾರ್ವತೆವ್ವ ಕೆರೂರ ಅವರಿಗೆ ಸೇರಿದ ಮನೆಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿತ್ತು. ಆಗ ನಿರಾಶ್ರಿತರಾದ ಪಾರ್ವತೆವ್ವಗೆ ಆಶ್ರಯ ಯೋಜನೆಯಲ್ಲಿ ಮನೆ ನೀಡುವುದಾಗಿ ಸ್ಥಳೀಯ ಗ್ರಾಪಂ ಆಡಳಿತ ಭರವಸೆ ನೀಡಿತ್ತು. ಆ ಪ್ರಕಾರ ಮನೆ ಮಂಜೂರಾಗಿತ್ತು. ಆದರೆ ಸದಸ್ಯರೊಬ್ಬರ ಕುಮ್ಮಕ್ಕಿನಿಂದ ಅದನ್ನು ಹಠಾತ್ತನೆ ರದ್ದುಪಡಿಸಲಾಗಿದೆ ಎಂದು ಆರೋಪಿಸಿ, ಮನೆಯನ್ನು ಮತ್ತೆ ಮಂಜೂರು ಮಾಡಿ, ಆದೇಶ ನೀಡಬೇಕೆಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಸೊರಟಿ ಮತ್ತು ಅಧಿಕಾರಿಗಳು ಪ್ರಕರಣವನ್ನು ಪರಿಶೀಲಿಸಿ ಕ್ರಮ ಜರುಗಿಸುವ ಭರವಸೆ ನೀಡಿದರೂ ಜಗ್ಗದ ಪ್ರತಿಭಟನಾಕಾರರು ಆದೇಶ ಪ್ರತಿಯೊಂದಿಗೆ ಸ್ಥಳದಿಂದ ಮೇಲೇಳುವುದಾಗಿ ಪಾರ್ವತೆವ್ವ ಮತ್ತು ಅವರ ಬೆಂಬಲಕ್ಕೆ ನಿಂತ ಜನ ಪಟ್ಟು ಹಿಡಿದರು. ಅಧ್ಯಕ್ಷೆ ಹಾಗೂ 18 ಗ್ರಾಪಂ ಸದಸ್ಯರು, ಡಿ. 22ರ ಒಳಗಾಗಿ ರದ್ದಾಗಿರುವ ಆಶ್ರಯ ಮನೆಯನ್ನು ಪುನಃ ಮಂಜೂರು ಮಾಡಿ ಆದೇಶ ಪತ್ರ ನೀಡುವುದಾಗಿ ಲಿಖಿತ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. ಕೃಷ್ಣಾ ಚವಡಾಳ, ಚಂದ್ರು ಬೆಂಡಿಗೇರಿ, ರತ್ನಾಕರ ರೇವಣಕರ, ಮಹದೇವಪ್ಪ ಕಾಯಿಯವರ, ರಾಯಪ್ಪ ಕರಗುದರಿ, ಅಶೋಕ ರೇವಣಕರ, ಸುಭಾಸ ಗೊಟಗೋಡಿ, ಭೀಮಪ್ಪ ದೊಡ್ಡಮನಿ, ವಿನಾಯಕ ರೇವಣಕರ, ಜಗದೀಶ ಕೌದಿ, ಮಲ್ಲಯ್ಯ ಬಿನ್ನಾಳಿಮಠ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.