ಕಾಲುಬಾಯಿ ರೋಗ: ವೈದ್ಯರಿಂದ ಪರಿಶೀಲನೆ
ಬ್ಯಾಡಗಿ: ತಾಲೂಕಿನ ಕೆಲವೆಡೆ ಜಾನುವಾರುಗಳಲ್ಲಿ ಕಾಲು ಬೇನೆ ರೋಗದ ಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ತಾಲೂಕು ಪಶು ವೈದ್ಯಾಧಿಕಾರಿ ಡಾ ಎಚ್. ನಾಗರಾಜ ಅವರು ಘಾಳಪೂಜಿ ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದರು. ವಾರದಿಂದ ತಾಲೂಕಿನ 36 ಜಾನುವಾರುಗಳಲ್ಲಿ ಕಾಲುಬಾಯಿ ಬೇನೆ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿತ್ತು. ವೈದ್ಯಾಧಿಕಾರಿಗಳ ತಂಡ ರೋಗಗ್ರಸ್ತ ಜಾನುವಾರುಗಳಿಗೆ ಲಸಿಕೆ ಹಾಕಲು ಮುಂದಾಗಿದೆ. ಡಾ ನಾಗರಾಜ ಮಾತನಾಡಿ, ಕಾಲುಬಾಯಿ ಬೇನೆ ಇರುವ ಜಾನುವಾರನ್ನು ಒಂದು ತಿಂಗಳ ಕಾಲ ಹೊರಗೆ ಬಿಡಬಾರದು. ಕೆರೆ, ಹೊಂಡಗಳಲ್ಲಿ ನೀರು ಕುಡಿಸಬಾರದು. ಕೃಷಿ ಚಟುವಟಿಕೆಗೆ ಬಳಸಕೂಡದು. ಜಾತ್ರೆ, ಸಂತೆಗಳಿಗೆ ತೆರಳುವ ದನಗಳಲ್ಲಿ ಈ ರೋಗದ ಲಕ್ಷಣಗಳು ಕಂಡು ಬಂದಿದ್ದು, ದನದ ಕೊಟ್ಟಿಗೆಗೆ ಅಡುಗೆ ಸೋಡಾದ ನೀರು ಚಿಮಕಿಸುವುದು, ವರ್ಷಕ್ಕೆರಡು ಬಾರಿ ರೋಗ ನಿರೋಧಕ ಲಸಿಕೆ ಹಾಕಿಸುವುದು ಅಗತ್ಯ ಎಂದರು. ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಚಿಕ್ಕಬಾಸೂರು ವ್ಯಾಪ್ತಿಯ 20 ಜಾನುವಾರುಗಳಲ್ಲಿ ಬೇನೆ ಕಾಣಿಸಿಕೊಂಡಿದ್ದು, ಒಂದು ವಾರ ಗತಿಸಿದರೂ ಚಿಕಿತ್ಸೆ ನೀಡಲು ವೈದ್ಯರು ಬಂದಿಲ್ಲ. ಇಂಥ ಘಟನೆ ಮರುಕಳಿಸಿದರೆ ಸಹಿಸುವುದಿಲ್ಲ. ಪಶು ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ರೋಗ ಹರಡಿದೆ. ಹಳ್ಳಿಗಳಲ್ಲಿ ಚಿಕಿತ್ಸೆಗಾಗಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ಆರೋಪಗಳಿದ್ದು, ಇಲಾಖೆ ಮುಖ್ಯಸ್ಥರು ಕಡಿವಾಣ ಹಾಕಬೇಕು. ಇಲ್ಲದಿದ್ದರೆ, ಪಶು ಇಲಾಖೆ ಎದುರಿಗೆ ಜಾನುವಾರುಗಳೊಂದಿಗೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

