ಹಾವೇರಿ

ಕೀಳರಿಮೆ ಬಿಟ್ಟರೆ ಸುಂದರ ಬದುಕು

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 20
ಕೀಳರಿಮೆ ಬಿಟ್ಟು ಮುನ್ನುಗ್ಗಿದರೆ ಸುಂದರ ಬದುಕು ಕಟ್ಟಿಕೊಳ್ಳಬಹುದು. ಸಾಧನೆಗೆ ವಯಸ್ಸಲ್ಲ, ಮನಸ್ಸು ಮುಖ್ಯ ಎಂದು ಹೊಸಮಠ ಬಸವಶಾಂತಲಿಂಗ ಶ್ರೀ ಹೇಳಿದರು.
ಜಿಲ್ಲಾ ಆಡಳಿತ, ಜಿಪಂ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ, ಜಿಲ್ಲಾ ಅಂಗವಿಕಲರ ಸಂಘ, ಜಿಲ್ಲಾ ಅಂಗವಿಕಲರ ನೌಕರರ ಸಂಘ ಮತ್ತು ಎಸ್‌ಜೆಎಂ ದೈಹಿಕ ಅಂಗವಿಕಲರ ವಸತಿ ಪ್ರೌಢಶಾಲೆ ಆಶ್ರಯದಲ್ಲಿ ಶುಕ್ರವಾರ ನಗರದ ಹೊಸಮಠದಲ್ಲಿ ನಡೆದ ವಿಕಲಚೇತನರ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮನುಷ್ಯನಿಗೆ ನಂಬಿಕೆ, ವಿಶ್ವಾಸ, ಆತ್ಮಸ್ಥೈರ್ಯ ಅಗತ್ಯ ಎಂಬುದನ್ನು ವಿಕಲಚೇತನರು ಅರಿತುಕೊಂಡು ಸರ್ಕಾರಿ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಗುರಿ ಸಾಧನೆಯತ್ತ ಮುನ್ನಡೆಯಬೇಕು. ವಿಕಲಚೇತನರಿಗೆ ವೇದಿಕೆ ನಿರ್ಮಾಣ ಮಾಡಿ ಅವರ ಪ್ರತಿಭೆ ಹೊರಹಾಕಲು ಅವಕಾಶ ಮಾಡಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಧಾರವಾಡ ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಪ್ರವೀಣ ಕಡಿಬಾಗಿಲ ಮಾತನಾಡಿ, ತಮ್ಮ ಸಂಸ್ಥೆಯಿಂದ ಅಂಗವಿಕಲರಿಗೆ ಮೂರು ತಿಂಗಳಿಗೊಮ್ಮೆ ಉಚಿತ ಕಂಪ್ಯೂಟರ್ ತರಬೇತಿ, ವಿವಿಧ ವೃತ್ತಿ ಕೌಶಲ್ಯ ತರಬೇತಿ ನೀಡುವುದರ ಜತೆಗೆ ಉದ್ಯೋಗ ಅವಕಾಶ ಒದಗಿಸಲಾಗುವುದು. ಹಾವೇರಿ ಜಿಲ್ಲೆಯ ಅಂಗವಿಕಲರು ಸಮರ್ಥನಂ ಸಂಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಂಗವಿಕಲರ ಸಂಘದ ಪದಾಧಿಕಾರಿ ಎಂ.ಎಂ. ಕಚವಿ ಮಾತನಾಡಿ, ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗ. ಅವರಿಗೆ ಅನುಕಂಪ ತೋರಿಸದೇ ಅವಕಾಶ ಕೊಡಬೇಕು. ಸರ್ವರಿಗೂ ಸಮಬಾಳು ಎಂಬ ತತ್ವದಡಿ ಮಾನವ ಹಕ್ಕುಗಳನ್ನು ಒದಗಿಸುವ ಮೂಲಕ ಸಮಾಜದಲ್ಲಿ ಎಲ್ಲರಂತೆ ಬಾಳಲು ಅವಕಾಶ ಮಾಡಿಕೊಡಬೇಕು. ಅಂಗವಿಕಲರಿಗೆ ಕೇವಲ ಪಾನ್ ಅಂಗಡಿ, ಟೆಲಿಫೋನ್ ಬೂತ್‌ಗಳಲ್ಲಿ ಮಾತ್ರ ಅವಕಾಶ ನೀಡದೇ ಉಳಿದ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಕಲ್ಪಿಸಿಕೊಡಬೇಕು. ಉದ್ಯೋಗ ನೀಡಿಕೆಯಲ್ಲಿ ಈ ಬದಲಾವಣೆ ಅಗತ್ಯ ಎಂದರು.
ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ಸೈಕಲ್ ಹಾಗೂ ಕ್ರೀಡಾಕೂಟದಲ್ಲಿ ವಿಜೇತ ಅಂಗವಿಕಲರಿಗೆ ಬಹುಮಾನ ವಿತರಿಸಲಾಯಿತು.
ಅಂಗವಿಕಲರ ಸಂಘದ ಜಿಲ್ಲಾ ಅಧ್ಯಕ್ಷ ಪುಟ್ಟಪ್ಪ ಜಲದಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಅಧ್ಯಕ್ಷ ಅಲ್ಲಾಭಕ್ಷ, ಜಿಲ್ಲಾ ಉಪಾಧ್ಯಕ್ಷ ಮೌನೇಶ ಬಡಿಗೇರ, ಶಿಗ್ಗಾಂವಿ ತಾಲೂಕು ಅಧ್ಯಕ್ಷ ಬಾಲಕೃಷ್ಣ ಆರೇರ, ಸವಣೂರು ಅಧ್ಯಕ್ಷ ಬಸವರಾಜ, ಬ್ಯಾಡಗಿ ಅಧ್ಯಕ್ಷ ಪಾಂಡುರಂಗ, ಹಾವೇರಿ ಅಧ್ಯಕ್ಷ ಶಾಂತಪ್ಪ ಯಮನೂರ, ರಾಣೆಬೆನ್ನೂರ ಅಧ್ಯಕ್ಷ ಎಸ್.ಎಸ್. ಹೊನ್ನೆಗೌಡ್ರ, ಹಿರೆಕೇರೂರು ಅಧ್ಯಕ್ಷ ಎಚ್.ಕೆ. ರಾಜೂರ, ಹಾನಗಲ್ ಅಧ್ಯಕ್ಷ ಪರಶುರಾಮ, ಶಿವಕುಮಾರ, ವೆಂಕಟೇಶ, ಬಸವರಡ್ಡಿ ಇದ್ದರು.
ಜ್ಞಾನಜ್ಯೋತಿ ವಿದ್ಯಾ ಸಂಸ್ಥೆ ವಿದ್ಯಾರ್ಥಿನಿ ಗಂಗಮ್ಮ ಸಂಗಡಿಗರು ಪ್ರಾರ್ಥಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಸ್.ಎಸ್. ಅಡಿಗ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.