ಸಹೃದಯರ ಮನಗೆದ್ದ ಹರಿಶ್ಚಂದ್ರ ನಾಟಕ
ಹಾನಗಲ್ಲ: ರಂಗ ಗ್ರಾಮ ಶೇಷಗಿರಿಯಲ್ಲಿ ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಹಳಗನ್ನಡ ನಾಟಕ ಸಹೃದಯರ ಮನಗೆದ್ದಿತು. ಆದರ್ಶಗಳ ಅನುಸರಣೆ ಸಾಮಾಜಿಕ ಜೀವನದಲ್ಲಿ ಅತ್ಯಾವಶ್ಯಕ ಎಂಬ ಸಂದೇಶವನ್ನು ಸಾರಿತು.
ಶೇಷಗಿರಿಯ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ಮೈಸೂರಿನ ರಂಗಾಯಣದ ಭಾರತಿಯ ರಂಗ ಶಿಕ್ಷಣ ಕೇಂದ್ರದ ಕಲಾವಿದರು ರಾಘವಾಂಕ ಕವಿಯ ಹಳಗನ್ನಡ ಹರಿಶ್ಚಂದ್ರ ಕಾವ್ಯವನ್ನು ಸಿ.ಎಂ. ಉದಾಸಿ ಕಲಾ ಕ್ಷೇತ್ರದಲ್ಲಿ ಪ್ರದರ್ಶಿಸಿ ಸಹೃದಯರ ಮೆಚ್ಚುಗೆಗೆ ಪಾತ್ರರಾದರು.
ಹರಿಶ್ಚಂದ್ರ ಕಾವ್ಯದಲ್ಲಿ ರಾಘವಾಂಕ ಸತ್ಯವನ್ನು ಕೇಂದ್ರವಾಗಿಸಿದ್ದರೆ, ನಾಟಕದಲ್ಲಿ ನಿರ್ದೇಶಕರು ಕುಲವನ್ನೇ ಕೇಂದ್ರ ವಸ್ತು ಮಾಡಿದ್ದಾರೆ. ಆದರೆ ಸತ್ಯ, ಶೌಚ ಮುಂತಾದ ಅಂತರಂಗ ಶುದ್ಧಿಯನ್ನು ನಾಟಕ ಮರೆಯಲಿಲ್ಲ. ರಾಘವಾಂಕನ ದೃಷ್ಟಿಗೆ ಹೊಲೆಯ, ಹೊಲೆತನ ಇವು ಸಾಮಾಜಿಕ ಸ್ತರವನ್ನೂ ಅದಕ್ಕೆ ಸಂಬಂಧಿಸಿದ ವೃತ್ತಿಯನ್ನು ಪ್ರತಿನಿಧಿಸುವುದಕ್ಕಿಂತ ಮನಸ್ಸಿನ ಸ್ವಭಾವ ಹಾಗೂ ಪ್ರವೃತ್ತಿಗೆ ಸಂಬಂಧಿಸಿದ್ದು. ಹೊಲೆತನ ಎನ್ನುವುದು ವ್ಯಕ್ತಿಯ ಅಂತರಂಗದ ಅವಗುಣಗಳಿಗೆ ಸಂಬಂಧಿಸಿದ್ದು, ಜಾತಿಯ ಪ್ರಶ್ನೆಗಲ್ಲ ಎನ್ನುವ ಕವಿಯ ತಾತ್ವಿಕ ದೃಷ್ಟಿ ನಾಟಕದಲ್ಲಿ ವ್ಯಕ್ತವಾಯಿತು.
ವಿಶ್ವಾಮಿತ್ರನ ಲೀಲೆಯಿಂದಾಗಿ ಲೋಹಿತಾಶ್ವ ಅಸುನೀಗುತ್ತಾನೆ. ಚಂದ್ರಮತಿ ಲೋಹಿತಾಶ್ವನನ್ನು ಸ್ಮಶಾನಕ್ಕೆ ತಂದಾಗ ಮಸಣಕ್ಕೆ ಬಾಡಿಗೆ ನೀಡುವಂತೆ ಹರಿಶ್ಚಂದ್ರ ಹೇಳುತ್ತಾನೆ. ತನ್ನ ಮಗನೇ ಸಾವನ್ನಪ್ಪಿದರೂ ಕರ್ತವ್ಯ ಪ್ರಜ್ಞೆ ಮೆರೆಯುವ ಹರಿಶ್ಚಂದ್ರ ಕೊನೆಯಲ್ಲಿ ಚಂದ್ರಮತಿಯ ಶಿರಚ್ಛೇದನಕ್ಕೆ ಮುಂದಾದಾಗ ಈಶ್ವರ ಪ್ರತ್ಯಕ್ಷನಾಗುತ್ತಾನೆ. ವಿಶ್ವಾಮಿತ್ರ ಹರಿಶ್ಚಂದ್ರ ಕಳೆದುಕೊಂಡಿದ್ದನ್ನು ಮರಳಿಸುವ ಸನ್ನಿವೇಶ ಅದ್ಭುತವಾಗಿ ಮೂಡಿಬಂತು.
ಕಲಾವಿದರಾದ ಅವಿನಾಶ ಬಿ.ಆರ್., ಚಾಂದಿನಿ, ದತ್ತರಾಜ್ ಹೆಗಡೆ, ಜಯಂತ ಟಿ., ಕವಿತಾ ಎ.ಎಂ., ಕಿರಣ ಬಾಲವ್ಯನವರ, ಕೆ. ಮಾಬುಸಾಹೇಬ, ಮಹದೇವಸ್ವಾಮಿ ಎಸ್.ಎಂ., ಮೀನಾಕ್ಷಿ, ಮೋಹನರಾಜ್ ಟಿ., ಪ್ರದೀಪ ಬಿ.ಎಂ., ರಾಧಾರಾಣಿ ಬಿ.ಎಸ್., ಸತೀಶ ಬಿ.ಪಿ., ಶಿವಕುಮಾರ ಎಂ., ವಿಶಾಲ ಪಾಲಾಪುರೆ, ವಿವೇಕಸಿಂಹ ಜೆ. ರಂಗದ ಮೇಲೆ ಅಭಿನಯಿಸಿದರೆ, ಉಮೇಶ ಸಾಲಿಯಾನ, ಜನಾರ್ದನ, ಸಂತೋಷಕುಮಾರ ಕುಸನೂರು, ಪ್ರಮೀಳಾ ಬೇಂಗ್ರೆ, ಬಸವರಾಜು ಕಾಂಬ್ಳೆ, ಶ್ರುತಿ, ಕಿರಣ ಗರ್ಗಿ, ಗಣೇಶ ಮರಕಾಲ, ತಲಕಾಡು ಗುರುರಾಜ್, ಪ್ರಸಾದ ಕೃಷ್ಣಾಪುರ, ರಂಗನಾಥ, ಮಹೇಶ ಕಲ್ಲತ್ತಿ, ಎನ್. ರಂಗನಾಥ, ರವಿ ಹಿಂದೂಪುರ ರಂಗದ ಹಿಂದೆ ಕಾರ್ಯ ನಿರ್ವಹಿಸಿದರು.
ನಾಟಕ ಪ್ರದರ್ಶನ ಉದ್ಘಾಟಿಸಿದ ಹಾನಗಲ್ಲ ಪಿಎಸ್ಐ ಮಹದೇವ ಯಲಿಗಾರ, ಕಲೆಯನ್ನು ಪ್ರೋತ್ಸಾಹಿಸಿದರೆ ಸಂಸ್ಕೃತಿಯನ್ನೇ ಪ್ರೋತ್ಸಾಹಿಸಿದಂತೆ ಎಂದರು.
ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ, ಬಿ.ವೈ. ಬಂಡಿವಡ್ಡರ, ಜಿ.ಎಂ. ಅಪ್ಪಾಜಿ, ಶೇಷಗಿರಿ ಕಲಾತಂಡದ ಅಧ್ಯಕ್ಷ ಪ್ರಭು ಗುರಪ್ಪನವರ, ಪ್ರಮುಖರಾದ ಪಿ.ಎನ್. ನೋಟದ, ಸಿದ್ದಣ್ಣ ಕರಡಿ, ಶಂಕ್ರಣ್ಣ ಗುರಪ್ಪನವರ, ನಾಗಪ್ಪ ಹಾವೇರಿ, ನಾಗಪ್ಪ ಕೊಂಡೋಜಿ, ನಾಗರಾಜ್ ಅಡಿಗ, ಷಣ್ಮುಖಪ್ಪ ಮುಚ್ಚಂಡಿ, ಬಸವರಾಜ್ ಕೋರಿ, ಸಿದ್ದಪ್ಪ ರೊಟ್ಟಿ, ಉಪನ್ಯಾಸಕರಾದ ನಾಗರಾಜ ಧಾರೇಶ್ವರ, ಎಂ.ಆರ್. ಹೆಗಡೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

