ಸುದ್ದಿ ಸಂಕ್ಷೇಪ
ಇಂದಿನಿಂದ ಕುಡಪಲಿ ವೀರಮಹೇಶ್ವರ ಜಾತ್ರೆ
ಹಿರೇಕೆರೂರು: ತಾಲೂಕಿನ ಕುಡುಪಲಿ ಗ್ರಾಮದ ಪವಾಡ ಪುರುಷ ಶ್ರೀ ವೀರಮಹೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಡಿ. 23ರಿಂದ 27ರ ವರೆಗೆ ಜರುಗಲಿದೆ. ಗ್ರಾಮದ ಹಿಂದೂ-ಮುಸ್ಲಿಮರು ಭಾವೈಕ್ಯದಿಂದ ಆಚರಿಸುತ್ತಾ ಬಂದಿರುವ ಈ ಜಾತ್ರೆ ಇತಿಹಾಸ ಪ್ರಸಿದ್ಧವಾಗಿದೆ. ಚನ್ನಗಿರಿ ತಾಲೂಕಿನ ಚಿಕ್ಕ ಹೊಲಿಕೇರಿ ಗ್ರಾಮದಲ್ಲಿ ಮಹೇಶ್ವರ ಜಾತ್ರೆ, ಅನ್ನ ಸಂತರ್ಪಣೆ ಮತ್ತು ಜಾನುವಾರು ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿತ್ತು. ಕುಡಪಲಿ ಗ್ರಾಮದ ಭಕ್ತರು ಅಲ್ಲಿಗೆ ತೆರಳುತ್ತಿದ್ದರು. ವೀರ ಮಹೇಶ್ವರ ಜಾತ್ರೆಯನ್ನು ನಮ್ಮ ಗ್ರಾಮದಲ್ಲೂ ಆಚರಿಸೋಣ ಎಂದು ಕುಮದ್ವತಿ ನದಿ ದಂಡೆಯ ಬಯಲು ಜಾಗೆಯಲ್ಲಿ ಒಂದು ಮೂರ್ತಿ ಪ್ರತಿಷ್ಠಾಪಿಸಿದರು. ಇಲ್ಲಿನ ವಿಶೇಷವೆಂದರೆ, ಭಕ್ತರಿಗೆ ನೀಡಬೇಕಾದ ಅನ್ನ ಪ್ರಸಾದವನ್ನು ನೆಲದಲ್ಲಿ ಆಳವಾಗಿ ಗುಂಡಿ ತೋಡಿ ಹೂಳಲಾಗುತ್ತದೆ. ವರ್ಷದ ಬಳಿಕ ಜಾತ್ರೆಗೆ ಬರುವ ಭಕ್ತರಿಗೆ ಅದನ್ನು ವಿತರಿಸಲಾಗುತ್ತದೆ. ಸಂತಾನ ಭಾಗ್ಯವಿಲ್ಲದ ದಂಪತಿ ಈ ಪ್ರಸಾದ ಸ್ವೀಕರಿಸಿದರೆ ಮಕ್ಕಳಾಗುತ್ತವೆ ಎಂಬುದು ಪ್ರತೀತಿ. ಕುಮದ್ವತಿ ನದಿ ದಂಡೆಯ ಮೇಲೆ ವೀರಶೈವರಿಗೆ ಮಾತ್ರ ಪ್ರಸಾದ ವಿತರಣೆ ಆಗುತ್ತದೆ. ಜಾತ್ರೆಯ ಕೊನೆಯ ದಿನ ಎಲ್ಲರಿಗೂ ಅನ್ನ ಸಂತರ್ಪಣೆ ನಡೆಯುತ್ತದೆ ಎಂದು ಭಕ್ತ ಎಂ.ಬಿ. ಮರಿಗೌಡ್ರ ವಿವರಿಸುತ್ತಾರೆ. ಶ್ರೀ ವೀರ ಮಹೇಶ್ವರ ಹಾಗೂ ಶರಣ ಬಸವೇಶ್ವರ ದೇವಸ್ಥಾನಗಳ ಎದುರಿನ ಮೈದಾನದಲ್ಲಿ ಜಾತ್ರೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ. 23ರಂದು ಬೆಳಗ್ಗೆ ಶ್ರೀ ವೀರ ಮಹೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಡಿ. 24ರಂದು ಶ್ರೀ ವೀರ ಮಹೇಶ್ವರ ದೇವರ ಗುಗ್ಗಳ, ಉತ್ಸವ, ಮಹಾಪ್ರಸಾದ ವಿನಿಯೋಗ ಜರುಗಲಿದೆ. ಡಿ. 25ರಂದು ಬಂಡಿ ಉತ್ಸವ ಮತ್ತು ಎತ್ತುಗಳ ಮೆರವಣಿಗೆ, ಡಿ. 26ರಂದು ಶ್ರೀ ವೀರ ಮಹೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಗ್ರಾಮವನ್ನು ಪ್ರವೇಶಿಸಲಿದ್ದು, ಮಹಾಪ್ರಸಾದ ವಿನಿಯೋಗ ಆಗಲಿದೆ. ಡಿ. 27ರಂದು ಹಿಂದೂ- ಮುಸ್ಲಿಂ ಭಾವೈಕ್ಯದ ಸಂಕೇತವಾಗಿ ಮಹಬೂಬ ಸುಭಾನಿ ಉರೂಸ್ ವಿಜೃಂಭಣೆಯಿಂದ ಜರುಗಲಿದೆ.
ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ
ಹಾವೇರಿ: ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಡಿ. 28ರಿಂದ ಜನವರಿ 6ರ ವರೆಗೆ ನಡೆಯಲಿರುವ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರ ಮಟ್ಟದ ಶಿಬಿರಕ್ಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ವಿದ್ಯಾರ್ಥಿ ತೇಜಪ್ಪ ಎನ್. ಮಡಿವಾಳ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗೆ ಕಾಲೇಜು ಪ್ರಾಂಶುಪಾಲ ಜೆ.ಸಿ. ಹಾದಿಮನಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರೊ ಎಂ.ಎಚ್. ಹೆಬ್ಬಾಳ, ಪ್ರೊ ರಮೇಶ ಎನ್. ತೆವರಿ, ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.
ರಾಣಿಬೆನ್ನೂರು: ಬೆಂಚಿ ತುಂಗಾಜಲ ಚೌಡೇಶ್ವರಿ ಜಾತ್ರೆ ಜ. 13ರಿಂದ
ರಾಣಿಬೆನ್ನೂರು: ಇಲ್ಲಿನ ಮಾರುತಿ ನಗರದಲ್ಲಿರುವ ಬೆಂಚಿ ತುಂಗಾಜಲ ಚೌಡೇಶ್ವರಿ ದೇವಿ ಜಾತ್ರೆ 2014ರ ಜನವರಿ 13ರಿಂದ 18ರ ವರೆಗೆ ನಡೆಯಲಿದೆ. ಜ. 13ರಂದು ಮುಂಜಾನೆ 10 ಗಂಟೆಗೆ ದೇವಿ ಮನೆಯಿಂದ ದೇವಿಯ ಉತ್ಸವ ಮೂರ್ತಿಯನ್ನು ಸಿಂಗರಿಸಿದ ರಥದಲ್ಲಿ ಮೆರವಣಿಗೆ ಮಾಡಿ, ಸಂಜೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು. 14ರಂದು ದೇವಿ ಹಾಗೂ ಮುತ್ತೈದೆಯರ ಉಡಿ ತುಂಬಲಾಗುವುದು. ಸಂಜೆ 4 ಗಂಟೆಗೆ ರಾಜ್ಯ ಮಟ್ಟದ ಟಗರಿನ ಕಾಳಗ ಆಯೋಜಿಸಲಾಗಿದೆ. 15ರಂದು ಬೆಲ್ಲದ ಬಂಡಿಗಳ ಮೆರವಣಿಗೆ, ಓಕಿಳಿ ಉತ್ಸವ ಜರುಗುವುದು. 16ರಂದು ಸಂಜೆ 7ಕ್ಕೆ ಶಾಲಾ ಮಕ್ಕಳಿಂದ, 17ರಂದು ವಿವಿಧ ಸಂಘ -ಸಂಸ್ಥೆಗಳಿಂದ ಮನರಂಜನಾ ಕಾರ್ಯಕ್ರಮಗಳಿವೆ. 18ರಂದು ರಾತ್ರಿ 8 ಗಂಟೆಗೆ ದೇವಿ ಮನೆಗೆ ಮರಳುತ್ತಾಳೆ ಎಂದು ಜಾತ್ರೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
75 ಸಾವಿರ ಮೌಲ್ಯದಮೆಕ್ಕೆಜೋಳ ತೆನೆ ಭಸ್ಮ
ಶಿಗ್ಗಾಂವಿ: ಗೋವಿನ ಜೋಳದ ತೆನೆಯಿದ್ದ ರಾಶಿಗೆ ಬೆಂಕಿ ತಗುಲಿ ರು. 75 ಸಾವಿರಕ್ಕೂ ಮಿಕ್ಕಿ ಹಾನಿಯಾದ ಘಟನೆ ಶನಿವಾರ ರಾತ್ರಿ ತಾಲೂಕಿನ ತಡಸ ಸಮೀಪ ಸಂಭವಿಸಿದೆ. ಹುಬ್ಬಳ್ಳಿಯ ಗಂಗೂಬಾಯಿ ವೆಂಕಟೇಶ್ವರ ದೇಸಾಯಿ ಎಂಬುವರಿಗೆ ಸೇರಿದ ಈ ಜಮೀನಿನಲ್ಲಿ 6-7 ಟ್ರ್ಯಾಕ್ಟರ್ನಷ್ಟು ಜೋಳದ ತೆನೆ ರಾಶಿ ಹಾಕಲಾಗಿತ್ತು. ತಡಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಬಸವರಾಜ ಕಲ್ಲಮ್ಮನವರ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

